ಅಲ್ಬೇನಿಯಾದ ತಿರಾನ್‌ನಲ್ಲಿ ನಡೆದ 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಕೊನೆಯ ದಿನ ಭಾರತ 9 ಪದಕಗಳನ್ನು ಗೆದ್ದಿದೆ. ಸ್ಟಾರ್ ಕುಸ್ತಿಪಟು ಚಿರಾಗ್ ಚಿಕ್ಕಾರ ಅವರು 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ದೇಶಕ್ಕೆ ಏಕೈಕ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.
ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಕಜಕಿಸ್ತಾನದ ಅಬ್ದ್ಯಾಮಾಲಿಕ್ ಕರಾಚಾವ್ ವಿರುದ್ಧ ಚಿರಾಗ್ ಚಿಕ್ಕಾರ 4-3 ರಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಅಮನ್ ಸೆಹ್ರಾವತ್ ನಂತರ 23 ವರ್ಷದೊಳಗಿನವರ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಪುರುಷ ಕುಸ್ತಿಪಟು ಎಂಬ ಹೆಗ್ಗಳಿಕೆ ಚಿರಾಗ್ ಚಿಕ್ಕಾರ ಪಾತ್ರರಾಗಿದ್ದಾರೆ.

ಕಳೆದ ವರ್ಷ ರಿತಿಕಾ ಹೂಡಾ 76 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದರು. ಅಮನ್ ಸೆಹ್ರಾವತ್ 2022ರಲ್ಲಿ ಈ ಸಾಧನೆ ಮಾಡಿದ್ದರು. 2018 ರಲ್ಲಿ ರವಿಕುಮಾರ್ ದಹಿಯಾ ಅವರು 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಿಂದ ಬೆಳ್ಳಿ ಪದಕವನ್ನು ಗೆದ್ದಿದ್ದರು.
ಮೊದಲ ಸುತ್ತಿನಲ್ಲಿ ಜಪಾನ್‌ನ ಗಟ್ಸುಕೊ ಒಜಾವಾ ಅವರನ್ನು 6-1 ರಿಂದ ಸೋಲಿಸಿದ ನಂತರ, ಚಿರಾಗ್ ಚಿಕ್ಕಾರ ಅವರು ರಷ್ಯಾದ ಇಯುನಾಸ್ ಇವಾಬ್ಟಿರೋವ್ ವಿರುದ್ಧ 12-2 ಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವು ಸಾಧಿಸಿದರು. ಸೆಮಿ-ಫೈನಲ್‌ನಲ್ಲಿ ಚಿರಾಗ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಕಜಕಿಸ್ತಾನ್‌ನ ಅಲನ್ ಒರಾಲ್ಬೆಕ್ ಅವರನ್ನು ಮಣಿಸಿದರು. ಫೈನಲ್‌ನಲ್ಲಿ ಕರಾಚೋವ್ ಅವರನ್ನು ಚಿರಾಗ್ ಸೋಲಿಸಿದರು.
ಪುರುಷರ ಫ್ರೀಸ್ಟೈಲ್ 70 ಕೆಜಿ ವಿಭಾಗದಲ್ಲಿ ಸುಜಿತ್ ಕಲ್ಕಲ್ ತಜಕಿಸ್ತಾನದ ಮುಸ್ತಫೊ ಅಖ್ಮೆಡೋವ್ ವಿರುದ್ಧ 13-4 ಅಂತರದಲ್ಲಿ ಜಯಗಳಿಸಿ ಕಂಚಿನ ಪದಕ ಗೆದ್ದರು. ವಿಕ್ಕಿ ಚಹರ್ 97 ಕೆಜಿ ವಿಭಾಗದಲ್ಲಿ ಮಾಜಿ ಅಂಡರ್-20 ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಉಕ್ರೇನ್‌ನ ಇವಾನ್ ಪ್ರಿಮಾಚೆಂಕೊ ಅವರನ್ನು 7-2 ಅಂತರದಲ್ಲಿ ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. 61 ಕೆಜಿ ವಿಭಾಗದಲ್ಲಿ ಅಭಿಷೇಕ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಹಿಳೆಯರ 59 ಕೆಜಿ ವಿಭಾಗದಲ್ಲಿ ಅಂಜಲಿ ಬೆಳ್ಳಿ ಪದಕ ಗೆದ್ದರೆ, ನೇಹಾ ಶರ್ಮಾ (57 ಕೆಜಿ), ಶಿಕ್ಷಾ (65 ಕೆಜಿ) ಮತ್ತು ಮೋನಿಕಾ (68 ಕೆಜಿ) ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.