ಕರ್ನಾಟಕ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಎಂ ಚಿನ್ನಸ್ವಾಮಿ ಸ್ಟೇಡಿಯಂ ಕರ್ನಾಟಕದ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಇದು ಭಾರತದ ಅತ್ಯುತ್ತಮ ಮತ್ತು ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಅತ್ಯಂತ ಸುಸಜ್ಜಿತ ಕ್ರೀಡಾಂಗಣಗಳಲ್ಲಿ ಒಂದಾಗಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣವು ದೇಶೀಯ ಪಂದ್ಯಗಳಿಗೆ ಕರ್ನಾಟಕ ಕ್ರಿಕೆಟ್ ತಂಡದ ತವರು ಮೈದಾನವಾಗಿದೆ ಮತ್ತು ಹಲವು ಪ್ರತಿಭೆಗಳು ಇಲ್ಲಿಂದಲೇ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಅಂತಾರಾಷ್ಟ್ರೀಯ ಮಟ್ಟದವರೆಗೆ ಹೆಸರು ಮಾಡಿದ್ದಾರೆ.

ಸ್ಟೇಡಿಯಂನ ಸ್ಟ್ಯಾಂಡ್‌ಗಳಿಗೆ ಕರ್ನಾಟಕ ಮಾಜಿ ಕ್ರಿಕೆಟಿಗರಾದ ಗುಂಡಪ್ಪ ವಿಶ್ವನಾಥ್, ಎರ್ರಪಳ್ಳಿ ಪ್ರಸನ್ನ ಮತ್ತು ಭಾಗವತ್ ಚಂದ್ರಶೇಖರ್ ಅವರ ಹೆಸರನ್ನು ಇಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಖ್ಯಾತ ಇತಿಹಾಸಕಾರ ಮತ್ತು ಬರಹಗಾರ ರಾಮಚಂದ್ರ ಗುಹಾ ಅವರು ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ದಿಗ್ಗಜ ಕ್ರಿಕೆಟಿಗರ ಹೆಸರನ್ನು ಇಡುವಂತೆ ಕೆಎಸ್‌ಸಿಎಗೆ ಮನವಿ ಮಾಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ಸಲಹೆ ಬಂದಿದೆ.

"ಈ ಮೂವರು ರಾಜ್ಯದ ಶ್ರೇಷ್ಠ ಕ್ರಿಕೆಟಿಗರು. ಮೈದಾನದ ಒಳಗೆ ಮತ್ತು ಹೊರಗೆ ಕ್ರಿಕೆಟ್‌ನ ಉತ್ಸಾಹವನ್ನು ಉದಾತ್ತವಾಗಿ ಎತ್ತಿಹಿಡಿದಿದ್ದಾರೆ," ಎಂದು ಮಾರ್ಚ್ 29ರಂದು ರಾಮಚಂದ್ರ ಗುಹಾ ಪತ್ರದಲ್ಲಿ ಬರೆದಿದ್ದರು.
ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಅವರು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಬರೆದ ಪತ್ರದಲ್ಲಿ, ದೇಶದ ಇತರ ಪ್ರಮುಖ ಕ್ರಿಕೆಟ್ ಸ್ಟೇಡಿಯಂಗಳ ಸ್ಟ್ಯಾಂಡ್‌ಗಳಿಗೆ ತಮ್ಮ ಸ್ಥಳೀಯ ಹೀರೋಗಳ ಹೆಸರನ್ನು ಹೊಂದಿವೆ. ಆದರೆ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಪ್ರಸ್ತುತ ಕರ್ನಾಟಕದ ಯಾವುದೇ ಕ್ರಿಕೆಟ್ ದಿಗ್ಗಜರನ್ನು ಗೌರವಿಸಿಲ್ಲ ಎಂದು ಹೈಲೈಟ್ ಮಾಡಿದ್ದಾರೆ.
ರಾಜ್ಯದ ಮುಂಬರುವ ಕ್ರಿಕೆಟಿಗರನ್ನು ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ ಅಗತ್ಯವನ್ನು ಒತ್ತಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಜಿಆರ್ ವಿಶ್ವನಾಥ್, ಇಎಎಸ್ ಪ್ರಸನ್ನ ಮತ್ತು ಬಿಎಸ್ ಚಂದ್ರಶೇಖರ್ ಅವರ ಹೆಸರನ್ನು ಸ್ಟ್ಯಾಂಡ್‌ಗಳಿಗೆ ಹೆಸರಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಇದು ರಾಜ್ಯದ ಮುಂಬರುವ ಕ್ರಿಕೆಟಿಗರಿಗೆ ಸ್ಫೂರ್ತಿ ಮತ್ತು ಉತ್ತೇಜನ ನೀಡುತ್ತದೆ," ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿನ ಪ್ರಮುಖ ಕ್ರಿಕೆಟ್ ಸ್ಟೇಡಿಯಂಗಳ ಸ್ಟ್ಯಾಂಡ್‌ನಲ್ಲಿ ತಮ್ಮ ಖ್ಯಾತ ಆಟಗಾರರ ಹೆಸರನ್ನು ಹೊಂದಿವೆ ಮತ್ತು ಬೆಂಗಳೂರು ಕೂಡ ತನ್ನ ಕ್ರಿಕೆಟ್ ದಿಗ್ಗಜರ ಕೊಡುಗೆಗಳನ್ನು ಗುರುತಿಸುವಲ್ಲಿ ಅದೇ ಆಚರಣೆಯನ್ನು ಅನುಸರಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
"1974ರಲ್ಲಿ ಕರ್ನಾಟಕ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿ ಹಿಡಿದಿತ್ತು. ಸತತ 15 ಬಾರಿ ರಣಜಿ ಚಾಂಪಿಯನ್ ಆಗಿದ್ದ ಮುಂಬೈ ತಂಡದ ಪಾರಮ್ಯವನ್ನು ಮುರಿದಿದ್ದು ಅಂದಿನ ಕರ್ನಾಟಕ ತಂಡದ ಐತಿಹಾಸಿಕ ಸಾಧನೆ. ಆ ವಿಜಯಕ್ಕೆ ಈಗ 50 ವರ್ಷಗಳು ತುಂಬಿರುವ ಸಂಭ್ರಮ".
"ಶ್ರೇಷ್ಠ ಬ್ಯಾಟರ್ ಜಿಆರ್ ವಿಶ್ವನಾಥ್, ಸ್ಪಿನ್ ಅವಳಿಗಳಾದ ಪ್ರಸನ್ನ ಮತ್ತು ಚಂದ್ರಶೇಖರ್ ಅವರು ರಾಜ್ಯ ಮತ್ತು ದೇಶದ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಅಮೋಘವಾದದ್ದು. ಅವರ ಹೆಸರುಗಳನ್ನು ಸ್ಟ್ಯಾಂಡ್‌ಗಳಿಗೆ ಇಡಲು ಕ್ರಮ ಕೈಗೊಳ್ಳಬೇಕು," ಎಂದು ರಾಮಚಂದ್ರ ಗುಹಾ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು.
ಜಿಆರ್ ವಿಶ್ವನಾಥ್, ಇಎಎಸ್ ಪ್ರಸನ್ನ ಮತ್ತು ಬಿಎಸ್ ಚಂದ್ರಶೇಖರ್ ಅವರು ಕರ್ನಾಟಕದಿಂದ ಭಾರತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಅತ್ಯುತ್ತಮ ಕ್ರಿಕೆಟಿಗರು ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ.
ತಮ್ಮ ಸೊಗಸಾದ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾದ ಜಿಆರ್ ವಿಶ್ವನಾಥ್ ಅವರು 91 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು ರಾಷ್ಟ್ರೀಯ ತಂಡದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇಎಎಸ್ ಪ್ರಸನ್ನ ಮತ್ತು ಬಿಎಸ್ ಚಂದ್ರಶೇಖರ್ ಇಬ್ಬರೂ ಸ್ಪಿನ್ ಬೌಲರ್‌ಗಳು. 1960 ಮತ್ತು 1970ರ ದಶಕದಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಇಬ್ಬರೂ ತಮ್ಮಲ್ಲಿ ಒಟ್ಟು 431 ಟೆಸ್ಟ್ ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ ಮತ್ತು ಲೆಜೆಂಡ್ ಭಾಗವತ್ ಚಂದ್ರಶೇಖರ್ ಅವರು ದಿವಂಗತ ಬಿಶನ್ ಸಿಂಗ್ ಬೇಡಿ ಜೊತೆಗೆ ಸ್ಪಿನ್ನರ್‌ಗಳ ಅಸಾಧಾರಣ ಜೋಡಿ ಎನಿಸಿದ್ದರು.