
ಮುಂಬೈನ ಪಂಚತಾರಾ ಹೋಟೆಲ್‌ನ ಹೊರಭಾಗದಲ್ಲಿ ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ ಜೊತೆಗೆ ಸೆಲ್ಫಿಗಾಗಿ ಅಭಿಮಾನಿಗಳು ಕಿರಿಕ್ ಮಾಡಿಕೊಂಡಿದ್ದು ಪೃಥ್ವಿ ಶಾ ಸ್ನೇಹಿತನ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ 8 ಮಂದಿಯ ವಿರುದ್ಧ ಪೃಥ್ವಿ ಶಾ ಸ್ನೇಹಿತ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಎಫ್‌ಐಆರ್‌ನಲ್ಲಿ ಪೃಥ್ವಿ ಶಾ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ 8 ಮಂದಿಯ ಗುಂಪು ದಾಳಿ ಮಾಡಿದ್ದಲ್ಲದೆ ತಮ್ಮ ಕಾರನ್ನು ಬೆನ್ನಟ್ಟಿಕೊಂಡು ಬಂದಿದ್ದು ಹಗಣ ನೀಡದಿದ್ದರೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಪೃಥ್ವಿ ಶಾ ತಮ್ಮ ಸ್ನೇಹಿತರ ಜೊತೆಗೆ ವಾಯುವ್ಯ ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ಊಟಕ್ಕಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ಆರೋಪಿಗಳು ಅವರ ಬಳಿಗೆ ಬಂದು ಸೆಲ್ಫಿಗೆ ಒತ್ತಾಯಿಸಿದ್ದಾರೆ. ಮೊದಲಿಗೆ ಇಬ್ಬರು ವ್ಯಕ್ತಿಗಳು ಪೃರ್ಥವಿ ಶಾ ಬಳಿ ಸೆಲ್ಫಿಗಾಗಿ ಒತ್ತಾಯಿಸಿದ್ದರು. ಬಳಿಕ ಗುಂಪಾಗಿ ಬಂದು ಸೆಲ್ಫಿಗಾಗಿ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಾರಿ ಶಾ ಸೆಲ್ಫಿಗೆ ನಿರಾಕರಿಸಿದರು. ಆದರೆ ಆ ಗುಂಪು ಒತ್ತಡ ಹೇರಿದಾಗ ಪೃಥ್ವಿ ಶಾ ಸ್ನೇಹಿತ ಹೋಟೆಲ್‌ನ ಮ್ಯಾನೇಜರ್‌ಗೆ ಕರೆಮಾಡಿ ದೂರು ನೀಡಿದ್ದಾರೆ. ಆರೋಪಿಗಳನ್ನು ಹೊಟೇಲ್‌ನಿಂದ ಹೊರಹೋಗುವಂತೆ ಮ್ಯಾನೇಜರ್ ಸೂಚಿಸಿದರು. ಇದರಿಂದ ಕೆರಳಿದ ಆರೋಪಿಗಳು ಪೃಥ್ವಿ ಶಾ ಮತ್ತು ಅವರ ಸ್ನೇಹಿತ ರಾತ್ರಿ ಊಟ ಮುಗಿಸಿ ಹೋಟೆಲ್‌ನಿಂದ ಹೊರಗೆ ಬಂದಾಗ ಕೆಲವರು ಬೇಸ್‌ಬಾಲ್ ಬ್ಯಾಟ್‌ಗಳೊಂದಿಗೆ ಹೋಟೆಲ್‌ನ ಹೊರಗೆ ನಿಂತಿದ್ದರು. ಬಳಿಕ ಆರೋಪಿಗಳು ಬೇಸ್‌ಬಾಲ್ ಬ್ಯಾಟ್‌ಗಳಿಂದ ಬಳಸಿ ಪೃಥ್ವಿ ಶಾ ಸ್ನೇಹಿತನ ವಾಹನದ ಮುಂಭಾಗ ಮತ್ತು ಹಿಂಭಾಗದ ಗಾಜುಗಳನ್ನು ಒಡೆದು ಹಾಕಿದ್ದು ಕಾರಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ ಐಪಿಸಿ ಸೆಕ್ಷನ್ 384, 143, 148, 149, 427, 504 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.