ಸ್ಟೆತೊಸ್ಕೋಪ್ ಹಿಡಿಯುವ ಕೈಗಳಿಗೆ ಕೆಸರು; ಗ್ರಾಮೀಣ ಕ್ರೀಡೆಗೆ ಮಾರುಹೋದ ವೈದ್ಯಕೀಯ ವಿದ್ಯಾರ್ಥಿಗಳು
ದಾವಣಗೆರೆ, ಜುಲೈ 16: ಅವರೆಲ್ಲಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಹಳ್ಳಿಗಳಿಗಿಂತ ನಗರ ಪ್ರದೇಶಗಳಿಂದ ಬಂದವರು. ಅದರಲ್ಲಿ ಎಷ್ಟೋ ಜನರು ಕೆಸರಿಗೆ ಇಳಿದಿದ್ದೇ ಗೊತ್ತಿಲ್ಲ. ಯಾಕೆಂದರೆ ಪೋಷಕರು ಉನ್ನತ ಹುದ್ದೆ, ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿಗಳ ಮಕ್ಕಳಾಗಿರುತ್ತಾರೆ.
ಇನ್ನು ಹಲವು ವಿದ್ಯಾರ್ಥಿಗಳು ನಗರ ಪ್ರದೇಶಗಳಿಂದಾಚೆಗೆ ಬೇರೆ ಜಗತ್ತು ಇರುವುದೇ ಗೊತ್ತಿರಲ್ಲ. ಇವರೆಲ್ಲರಿಗೂ ಕೆಸರಿನಲ್ಲಿಯೂ ಕ್ರೀಡೆ ಆಡಬಹುದು ಎಂಬುದು ಗೊತ್ತೇ ಇರಲಿಲ್ಲ. ಇಂಥದ್ದೊಂದು ಅವಕಾಶವನ್ನು ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜು ಅವಕಾಶ ಮಾಡಿಕೊಟ್ಟಿದೆ.

ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೆಸರು ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ವಾರಾಂತ್ಯವಾದ ಶನಿವಾರ (ಜುಲೈ 15) ಕಾಲೇಜು ವಿದ್ಯಾರ್ಥಿಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾದಂತೆ ಭಾಸವಾಗುತ್ತಿತ್ತು.
ದಾವಣಗೆರೆ ನಗರದ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಸಂಘವು ಶಾಮನೂರು ಬಳಿಯ ಗಾಜಿನ ಮನೆ ಎದುರುಗಡೆ ವೀರಬಸಪ್ಪರ ಗದ್ದೆಯಲ್ಲಿ 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಜುಲೈ 15ರಿಂದ ಜುಲೈ 30ರವರೆಗೆ ವಿವಿಧ ದೇಸಿ ಕ್ರೀಡೆಗಳ ಉತ್ಸವ ಆಯೋಜಿಸಿದೆ.
ಇದಕ್ಕೆ ಮಳೆಗಾಲದ ಉತ್ಸವ ಅಥವಾ ಮಾನ್ಸೂನ್ ಫಿಯೆಸ್ಟಾ ಎಂಬ ಹೆಸರಿನಡಿ ಕ್ರೀಡೆಗಳನ್ನು ನಡೆಸಲಾಯಿತು. ದೇಸಿ ಸೊಬಗು ಪರಿಚಯಿಸಬೇಕು ಎಂಬ ಸದುದ್ದೇಶದಿಂದ ಈ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ.

ಎಷ್ಟೋ ಜನರಿಗೆ ಗ್ರಾಮೀಣ ಪ್ರದೇಶದ ಸೊಬಗು, ಸೊಗಡು ಪರಿಚಯವೇ ಇರುವುದಿಲ್ಲ. ಇಲ್ಲಿನ ಮಳೆಗಾಲದ ಆಟಗಳನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕೆಂಬ ಕಾರಣಕ್ಕೆ ಈ ಸ್ಪರ್ಧೆಗಳನ್ನು ನಡೆಸಲಾಯಿತು.
ಕೆಸರು ಗದ್ದೆ ಓಟ, ಕೆಸರು ಗದ್ದೆ ವಾಲಿಬಾಲ್, ಕೆಸರುಗದ್ದೆ ಥ್ರೋ ಬಾಲ್, ಹಗ್ಗ ಜಗ್ಗಾಟ ಆಯೋಜಿಸಲಾಗಿತ್ತು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಖುಷಿ ಖುಷಿಯಿಂದಲೇ ಪಾಲ್ಗೊಂಡರು. ಕೆಸರಿನಲ್ಲಿ ಕುಣಿದು ಕುಪ್ಪಳಿಸಿದರು.
ಬಳಿಕ ಮಾತನಾಡಿದ ವಿದ್ಯಾರ್ಥಿನಿಯರು, ನಾವು ಜೀವನದಲ್ಲಿ ಕೆಸರು ಗದ್ದೆಯಲ್ಲಿ ಕಾಲಿಟ್ಟಿದ್ದೇ ಕಡಿಮೆ. ಅಂತಹದ್ದರಲ್ಲಿ ಇಂಥ ಆಟಗಳನ್ನು ನೋಡಿದ್ದು ಕಡಿಮೆ. ಇಂದು ನಾವೇ ಕೆಸರಿನಲ್ಲಿ ಇಳಿದು ಸಂತೋಷಪಟ್ಟೆವು. ಇದು ತುಂಬಾನೇ ಖುಷಿ ಕೊಟ್ಟಿತು ಎಂದು ಸಂತಸ ಹಂಚಿಕೊಂಡರು.
ಜೆ.ಜೆ.ಎಂ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ. ಮುರುಗೇಶ್ ನೇತೃತ್ವದಲ್ಲಿ ದೇಸಿ ಕ್ರೀಡೆಗಳ ಉತ್ಸವ ನಡೆಯಿತು. ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ವಿನಾಯಕ್ ಪೈಲ್ವಾನ್ ಪಂದ್ಯಾವಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಹಾಲಿ ಸದಸ್ಯ ಗಡಿಗುಡಾಳ್ ಮಂಜುನಾಥ್, "ಕಾಲೇಜಿನ ವಿದ್ಯಾರ್ಥಿಗಳಿಗೆ ದಾವಣಗೆರೆಯಲ್ಲಿ ಮಳೆಗಾಲದ ಉತ್ಸವ ಆಯೋಜಿಸಿದ್ದು ಇದೇ ಮೊದಲ ಬಾರಿಗೆ ಎಂದು ಅನಿಸುತ್ತಿದೆ. ನಮಗೂ ಇಂಥ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ಇದೆ. ಆದರೆ, ಕಾರ್ಯದೊತ್ತಡ ಕಾರಣ ಪಾಲ್ಗೊಳ್ಳಲು ಆಗುತ್ತಿಲ್ಲ. ವಿದ್ಯಾರ್ಥಿಗಳು ಖುಷಿ ಖುಷಿಯಿಂದ ಪಾಲ್ಗೊಂಡಿರುವುದು ಸಂತಸದ ಸಂಗತಿ," ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಬಿ. ಮುರುಗೇಶ್ ಮಾತನಾಡಿ, "ವಿದ್ಯಾರ್ಥಿಗಳು ಯಾವಾಗಲೂ ಓದು, ಪಠ್ಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಮಾನಸಿಕ, ದೈಹಿಕ ಹಾಗೂ ಮನಸ್ಸು ಪ್ರಫುಲ್ಲವಾಗಲು ಇಂಥ ಕ್ರೀಡೆಗಳು ಸಹಕಾರಿ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಖುಷಿ ಖುಷಿಯಾಗಿ ಪಾಲ್ಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಲಾಗುವುದು. ದೇಸಿಯ ಸೊಬಗು ಎಲ್ಲರಿಗೂ ಗೊತ್ತಾಗಬೇಕು ಎಂಬ ಸದುದ್ದೇಶ ನಮ್ಮದು," ಎಂದು ಹೇಳಿದರು.
ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲಕೃಷ್ಣ ಸೇರಿದಂತೆ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications