ತೀವ್ರ ವಿವಾದಕ್ಕೆ ಒಳಗಾಗಿರುವ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಚುನಾವಣಾ ದಿನದಾಂಕದಲ್ಲಿ ಮತ್ತೆ ಬದಲಾವಣೆಯಾಗಿದೆ. ಅನರ್ಹಗೊಂಡ ರಾಜ್ಯ ಸಂಸ್ಥೆಗಳು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಜೊತೆಗೆ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ WFI ಈ ಬದಲಾವಣೆ ಮಾಡಿಕೊಂಡಿದೆ
2022ರಲ್ಲಿ ರೆಸ್ಲಿಂಗ್ ಫೆರೇಶನ್ ಆಫ್ ಇಂಡಿಯಾ ಐದು ರಾಜ್ಯ ಸಂಸ್ಥೆಗಳನ್ನು ಅನರ್ಹಗೊಳಿಸಿತ್ತು. ಈ ರಾಜ್ಯ ಸಂಸ್ಥೆಗಳ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಮನವಿಗಳ ಕುರಿತಾಗಿ ಐಒಎ ಬುಧವಾರ ಸಭೆ ನಡೆಸಿದೆ. ಈ ಸಭೆಯ ಬಳಿಕ ಚುನಾವಣಾ ದಿನಾಂಕದಲ್ಲಿ ಬದಲಾವಣೆ ಮಾಡಿಕೊಂಡಿದ್ದು ಜುಲೈ 6 ರಂದು ನಡೆಯಬೇಕಿದ್ದ ಮತದಾನ ಈಗ ಜುಲೈ 11 ರಂದು ನಡೆಸಲು ನಿರ್ಧರಿಸಲಾಗಿದೆ.

ಈ ಸಭೆಯಲ್ಲಿ ಭಾಗವಹಿಸಿದ್ದ ಇಂಡಿಯನ್ ಒಲಿಂಪಿಕ್ಸ್ ಅಸೊಸಿಯೇಶನ್‌ನ ಮೂಲಗಳು ಮಾಹಿತಿ ನೀಡಿದ್ದು ಸಭೆ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ, ಅನರ್ಹಗೊಂಡ ರಾಜ್ಯ ಸಂಸ್ಥೆಗಳ ಸದಸ್ಯರಲ್ಲಿ ಅಸಮಾಧಾನವಿದೆ ಎಂದು ಬಹಿರಂಗವಾಗಿದೆ. ಮಹಾರಾಷ್ಟ್ರ, ಹರಿಯಾಣ, ಹಿಮಾಚಲ, ತೆಲಂಗಾಣ ಮತ್ತು ರಾಜಸ್ಥಾನ ಈ ಐದು ರಾಜ್ಯಗಳ WFIನ ಅಂಗಗಳು ಅರ್ಹಗೊಂಡಿರುವ ಸಂಸ್ಥೆಗಳಾಗಿದೆ.
ಅನರ್ಹಗೊಂಡ ರಾಜ್ಯ WFI ಸಂಸ್ಥೆಗಳ ವಿಚಾರಣೆಗೆ ಮತ್ತೊಂದು ದಿನಾಂಕವನ್ನು ನೀಡಲಾಗಿದೆ. ಆದರೆ ಅನರ್ಹತೆ ರದ್ದುಗೊಳ್ಳುವವರೆಗೆ ಡಬ್ಲ್ಯುಎಫ್‌ಐ ಚುನಾವಣೆಯ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದಿಲ್ಲ. ಈ ಹಿಂದೆ ಚುನಾವಣಾಧಿಕಾರಿ ಹೊರಡಿಸಿದ ಅಧಿಸೂಚನೆಯ ಪ್ರಕಾರ ಜುಲೈ 6 ರಂದು ಚುನಾವಣೆ ನಡೆಯಲಿದೆ ಎಂದು WFI ಘೋಷಿಸಿತ್ತು. ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ IOA ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಮಹೇಶ್ ಮಿತ್ತಲ್ ಕುಮಾರ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಿದೆ.
ಎಲೆಕ್ಟೊರಲ್ ಕಾಜೇಜ್ ರಚನೆಗೆ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಎರಡು ನಾಮನಿರ್ದೇಶನಗಳನ್ನು ಸ್ವೀಕರಿಸಲು ಜೂನ್ 19ಕ್ಕೆ ಗಡುವಾಗಿ ನೀಡಲಾಗಿತ್ತು. ಇದರ ನಾಮನಿರ್ದೇಶನಗಳ ಪರಿಶೀಲನೆಯು ಜೂನ್ 22 ರೊಳಗೆ ಪೂರ್ಣಗೊಳ್ಳುತ್ತದೆ. ಪ್ರತಿ ರಾಜ್ಯ ಘಟಕವು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಬಹುದು ಮತ್ತು ಪ್ರತಿ ಪ್ರತಿನಿಧಿಯು ಒಂದು ಮತವನ್ನು ಹೊಂದಿರುತ್ತಾರೆ. ಇದರರ್ಥ ಡಬ್ಲ್ಯುಎಫ್‌ಐ ಚುನಾವಣೆಗಳಿಗಾಗಿ ಎಲೆಕ್ಟೊರಲ್ ಕಾಲೇಜ್ 50 ಮತಗಳನ್ನು ಒಳಗೊಂಡಿರುತ್ತದೆ. ಆದರೆ ಈ ಹಿಂದೆ ಡಬ್ಲ್ಯುಎಫ್‌ಐನಿಂದ ವಿಸರ್ಜಿಸಲ್ಪಟ್ಟ ಕೆಲವು ರಾಜ್ಯ ಸಂಸ್ಥೆಗಳು ಚುನಾವಣೆಯಲ್ಲಿ ಭಾಗವಹಿಸುವ ಇಚ್ಛೆಯನ್ನು ವ್ಯಕ್ತಪಡಿಸಿವೆ.
ಚುನಾವಣಾ ಅಧಿಕಾರಿಯು ಪ್ರತಿ ಬಣದ ಪ್ರತಿನಿಧಿಗಳ ಪ್ರಮಾಣಪತ್ರಗಳನ್ನು ಪರಿಶೀಲಿಸಿ ಮತದಾನದ ಅರ್ಹತೆಯನ್ನು ನಿರ್ಧರಿಸುತ್ತಾರೆ. ಜೂನ್ 23ರಂದು ನಾಮಪತ್ರಗಳ ಸಲ್ಲಿಕೆ ಪ್ರಾರಂಭವಾಗಲಿದ್ದು ಜೂನ್ 25 ರಂದು ಕೊನೆಯ ದಿನಾಂಕ. ಜೂನ್ 28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಇನ್ನು ಜೂನ್ 28ರಿಂದ ಜುಲೈ 1 ರ ಮಧ್ಯೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ. ನಂತರ ಜುಲೈ 2 ರಂದು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
WFIನ ವಿವಿಧ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಅಧ್ಯಕ್ಷ, ಹಿರಿಯ ಉಪಾಧ್ಯಕ್ಷ, ನಾಲ್ವರು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಐದು ಕಾರ್ಯಕಾರಿ ಸದಸ್ಯರನ್ನು ಈ ಚುನಾವಣೆಯಲ್ಲಿ ಆಯ್ಕೆ ಮಾಡಲಾಗುತ್ತದೆ.