ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟುವ್ಟ್ ಮ್ಯಾಕ್‌ಗಿಲ್ ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬೃಹತ್ ಪ್ರಮಾಣದ ಕೊಕೇನ್ ಪೂರೈಕೆಯ ಪ್ರಕರಣದಲ್ಲಿ ಕ್ಯಾಕ್‌ಗಿಲ್ ಭಾಗಿಯಾಗಿದ್ದಾರೆ ಎನ್ನುವ ಆರೋಪವಿದ್ದು ಈ ಹಿನ್ನೆಲೆಯಲ್ಲಿ ಕಳೆದ ವಂಗಳವಾರ ಸಿಡ್ನಿಯಲ್ಲಿ ಪೊಲೀಸರು ಮಾಜಿ ಕ್ರಿಕೆಟಿಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಸಿಡ್ನಿ ಪೊಲೀಸರು ಶುಕ್ರವಾರ ಮಾಹಿತಿ ಹಂಚಿಕೊಂಡಿದ್ದಾರೆ.
ಅಂದಹಾಗೆ ಈ ಡ್ರಗ್ ಪೂರೈಕೆ ಪ್ರಕರಣದಲ್ಲಿ ಸುವರ್ಟ್ ಮ್ಯಾಕ್‌ಗಿಲ್ ಭಾಗಿಯಾಗಿರುವುದು ಪತ್ತೆಯಾಗಿದ್ದೇ ಒಂದು ರೋಚಕ ಅಂಶ. 2021ರಲ್ಲಿ ಉತ್ತರ ಸಿಡ್ನಿಯಲ್ಲಿ ಮ್ಯಾಕ್‌ಗಿಲ್ ಅವರ ಮನೆಯ ಹೊರಭಾಗದಿಂದಲೇ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ನಿವೃತ್ತ ಕ್ರಿಕೆಟಿಗನನ್ನು ಅಪಹರಿಸಿತ್ತು. ನಂತರ ಬಿಡುಗಡೆಯಾಗಿ ಬಂದ ನಂತರ ಮ್ಯಾಕ್‌ಗಿಲ್ ನಡವಳಿಕೆ ಅನುಮಾನಸ್ಪದವಾಗಿದ್ದ ಕಾರಣ ಅವರ ಮೇಲೆ ಅಲ್ಲಿನ ಬೇಹುಗಾರರು ವಿಶೇಷ ಗಮನಹರಿಸಿದ್ದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಕ್‌ಗಿಲ್ ರೇಡಿಯೋ ನೆಟ್‌ವರ್ಕ್ ಸೆನ್‌ಗೆ ನೀಡಿದ ಸಂದರ್ಶನದಲ್ಲಿ ತನ್ನನ್ನು ಅಪಹರಿಸಿದ ಗುಂಪಿನ ಸದಸ್ಯರು ನಗರದ ಹೊರವಲಯದ ಸ್ಥಳಕ್ಕೆ ಕರೆದುಕೊಂಡು ಹೋಗಿ ಬೆತ್ತಲಾಗಿಸಿ ಥಳಿಸಿದ್ದಲ್ಲದೆ ಬಂದೂಕು ತೋರಿಸಿ ಬೆದರಿಸಿದ್ದರು. ನಂತರ ಬೇರೊಂದು ಸ್ಥಳದಲ್ಲಿ ಬಿಡುಗಡೆಮಾಡಿದರು. ಘಟನೆಯಿಂದ ಸಣ್ಣಪುಟ್ಟ ಗಾಯವಾಗಿದ್ದು ವೈದ್ಯಕೀಯ ಉಪಚಾರದ ಅಗತ್ಯ ಬಿದ್ದಿರಲಿಲ್ಲ. ನಾನೇನೂ ತಪ್ಪು ಮಾಡಿಲ್ಲ ನಾನು ಇಲ್ಲಿ ಬಲಿಪಶುವಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು.
ಓ ಒಟ್ಟಾರೆ ಘಟನೆಯ ಬಗ್ಗೆ ಎರಡು ವರ್ಷಗಳ ಕಾಲ ಸುದೀರ್ಘ ತನಿಖೆ ನಡೆಸಿದ ಪೊಲೀಸರು ಮ್ಯಾಕ್‌ಗಿಲ್ ಅಪಹರಣ ಪ್ರಕರಣ ಅವರು ಡ್ರಗ್ ಡೀಲ್‌ನಲ್ಲಿ ಭಾಗಿಯಾಗಿರುವುದಕ್ಕೆ ಸಂಭಂಧಿಸಿ ನಡೆದಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಅವರನ್ನು ಇದೀಗ ಬಂಧಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ನಿಷೇಧಿತ ಡ್ರಗ್ ಪೂರೈಕೆಯಲ್ಲಿ ಮ್ಯಾಕ್‌ಗಿಲ್ ಭಾಗಿಯಾಗಿದ್ದಾರೆ ಎನ್ನುವ ಆರೋಪವನ್ನು ಮಾಜಿ ಕ್ರಿಕೆಟಿಗ ಎದುರಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಮ್ಯಾಕ್‌ಗಿಲ್ ಜಾಮೀನಿನಲ್ಲಿ ಬಿಡುಗಡೆಯಾಗಿದ್ದು ಅಕ್ಟೋಬರ್ 26ರಂದು ನ್ಯಾಯಾಯಲಕ್ಕೆ ಹಾಜರಾಗಲಿದ್ದಾರೆ.