
ಫಾರ್ಮುಲಾ 1ನಲ್ಲಿ ರೆಡ್ ಬುಲ್‌ನ ಮ್ಯಾಕ್ಸ್ ವರ್ಸ್ಟಪನ್ ಹೊಸ ದಾಖಲೆಯನ್ನು ಬರೆದಿದ್ದಾರೆ. ಮೆಕ್ಸಿಕನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಒಂದೇ ಋತುವಿನಲ್ಲಿ ನೆದರ್ಲೆಂಡ್ಸ್‌ನ ಡ್ರೈವರ್ 14ನೇ ಗೆಲುವು ಸಾಧಿಸಿ ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ದಿಗ್ಗಜರಾಜ ಮೈಕಲ್ ಶುಮಾಕರ್ ಹಾಗೂ ಸೆಬಾಸ್ಟಿಯನ್ ವೆಟ್ಟಲ್ ಒಂದೇ ಋತುವಿನಲ್ಲಿ 13 ಗೆಲುವು ಸಾಧಿಸಿದ್ದ ದಾಖಲೆಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
ಈ ದಾಖಲೆಯ ಗೆಲುವಿನ ಬಳಿಕ ಮಾತನಾಡಿದ ವರ್ಸ್ಟಪನ್ ಇದು ಅದ್ಭುತವಾದ ಗೆಲುವು ಎಂದು ಬಣ್ಣಿಸಿದ್ದಾರೆ. ಈ ಸಾಧನೆಯ ಅನುಭವ ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿದೆ ಎಂದಿದ್ದಾರೆ ವರ್ಸ್ಟಪನ್. "ಹೌದು, ಇದು ಮತ್ತೊಂದು ಅದ್ಭುತವಾದ ರೇಸ್ ಆಗಿತ್ತು. ಇದು ನಿರೀಕ್ಷೆಗಿಂತಲೂ ಉತ್ತಮ ಅನುಭವವಾಗಿದೆ" ಎಂದು ಮ್ಯಾಕ್ಸ್ ವರ್ಸ್ಟಪನ್ ಹೇಳಿಕೆ ನೀಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮೆಕ್ಸಿಕನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಎರಡನೇ ಸ್ಥಾನವನ್ನು ಪಡೆದ ಲೂಯಿಸ್ ಹ್ಯಾಮಿಲ್ಟನ್ ಕೂಡ ಪ್ರತಿಕ್ರಿಯಿಸಿದ್ದಾರೆ. ತಮ್ಮ ಟೈರ್ ರಣತಂತ್ರದಿಂದಾಗಿ ತಾವು ಈ ಸ್ಪರ್ಧೆಯಲ್ಲಿ ಹಿನ್ನಡೆಯನ್ನು ಅನುಭವಿಸುವಂತಾಯಿತು ಎಂದಿದ್ದಾರೆ ಹ್ಯಾಮಿಲ್ಟನ್.
"ನಾವು ಈ ಹುಡುಗರೊಂದಿಗೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಬಹುಶಃ ಇಂದು ನಮ್ಮ ಯೋಜನೆಯಲ್ಲಿಯೂ ನಾವು ಎಡವಿರಬಹುದು. ಆದರೆ ಅದೇನೇ ಇದ್ದರೂ ಇಷ್ಟು ಸನಿಹದಲ್ಲಿದ್ದು 2ನೇ ಸ್ಥಾನ ಪಡೆಯಲು ಸಾಧ್ಯವಾಗಿರುವುದಕ್ಕೆ ಹೆಮ್ಮೆ ವ್ಯಕ್ತೊಪಡಿಸುತ್ತೇನೆ ಹಾಗೂ ತಂಡಕ್ಕೆ ಕೃತಜ್ಞನಾಗಿದ್ದೇನೆ. . ಓಟದ ವೇಗವು ಸಾಮಾನ್ಯವಾಗಿ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ ಲೂಯೀಸ್ ಹ್ಯಾಮಿಲ್ಟನ್.
ರೆಡ್ ಬುಲ್‌ನ ಮತ್ತೊಂದು ಅದ್ಭುತವಾದ ಪ್ರದರ್ಶನ ಇದಾಗಿದ್ದು ವರ್ಸ್ಟಪ್ಪನ್ ಪ್ರಥಮ ಸ್ಥಾನವನ್ನು ಪಡೆದರೆ ಅವರದೇ ತಂಡದ ಮೆಕ್ಸಿಕನ್ ಚಾಲಕ ಸೆರ್ಗಿಯೊ ಪೆರೆಜ್ ಮೂರನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಮತ್ತೊಂದೆಡೆ ಹ್ಯಾಮಿಲ್ಟನ್ ಅವರ ಸಹ ಆಟಗಾರ ಜಾರ್ಜ್ ರಸೆಲ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಫೆರಾರಿಯ ಕಾರ್ಲೋಸ್ ಸೈಂಜ್ ಐದನೇ ಸ್ಥಾನವನ್ನು ಕಾಯ್ದುಕೊಂಡಿದ್ದು ಅವರು ಆರನೇ ಸ್ಥಾನ ಪಡೆದ ತಮ್ಮ ತಂಡದ ಚಾರ್ಲ್ಸ್ ಲೆಕ್ಲರ್ಕ್ ಅವರಿಗಿಂತ ಸ್ವಲ್ಪ ಮುಂದಿದ್ದರು. ಮೆಕ್‌ಲಾರೆನ್-ಮರ್ಸಿಡಿಸ್‌ನ ಡೇನಿಯಲ್ ರಿಕಿಯಾರ್ಡೊ ಏಳನೇ ಸ್ಥಾನ ಪಡೆದರೆ ಎಂಟನೇ ಸ್ಥಾನವನ್ನು ಆಲ್ಪೈನ್ ರೆನಾಲ್ಟ್‌ನ ಎಸ್ಟಾಬಾನ್ ಓಕಾನ್ ಪಡೆದುಕೊಂಡಿದ್ದಾರೆ. ಮೆಕ್‌ಲಾರೆನ್-ಮರ್ಸಿಡಿಸ್‌ನ ಲ್ಯಾಂಡೋ ನಾರ್ರಿಸ್ ಒಂಬತ್ತನೇ ಸ್ಥಾನ ಪಡೆದರೆ ಮಾಜಿ ಮರ್ಸಿಡಿಸ್ ಡ್ರೈವರ್ ವಾಲ್ಟೆರಿ ಬೊಟಾಸ್ ಅಗ್ರ ಹತ್ತರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.