ಬ್ರಿಸ್ಬೇನ್, ಜ.20: ಇಲ್ಲಿನ ಗಬ್ಬಾ ಮೈದಾನದಲ್ಲಿ ಕರ್ನಾಟಕದ ಸ್ಟುವರ್ಟ್ ಬಿನ್ನಿ vs ಇಂಗ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಸ್ಟುವರ್ಟ್ ಬಿನ್ನಿ ಉತ್ತಮ ಸಾಧನೆ ತೋರಿ ಎದ್ದು ನಿಂತಿದ್ದಾರೆ. ಟೀಂ ಇಂಡಿಯಾ ಬಗ್ಗುಬಡಿದ್ದ ಇಂಗ್ಲೆಂಡ್ ತಂಡ ಗೆದ್ದು ಬೀಗಿದೆ.
ಬ್ರಿಸ್ಬೇನ್ ನ ಗಬ್ಬಾ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದೇ ಟೀಂ ಇಂಡಿಯಾ ಪಾಲಿಗೆ ಮುಳುವಾಯಿತು. ಬ್ಯಾಟಿಂಗ್ ಕುಸಿತದ ಜೊತೆಗೆ ಎರ್ರಾಬಿರ್ರಿ ಬೌಲಿಂಗ್ ಮಾಡಿ ಸೋಲಿನ ಕಹಿ ಉಣ್ಣಬೇಕಾಯಿತು.ಟೀಂ ಇಂಡಿಯಾ ಒಡ್ಡಿದ್ದ 154ರನ್ ಗಳ ಸಾಧಾರಣ ಮೊತ್ತ ಬೆನ್ನು ಹತ್ತಿದ ಮಾರ್ಗನ್ ಪಡೆ ಸುಲಭವಾಗಿ ಗುರಿ ಮುಟ್ಟಿತು.
ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಇಯಾನ್ ಬೆಲ್ ಭರ್ಜರಿ ಆಟವಾಡಿ 91 ಎಸೆತಗಳಲ್ಲಿ 8 ಬೌಂಡರಿಯುಳ್ಳ 88ರನ್ ಗಳಿಸಿದರು. ಟೇಲರ್ ಉತ್ತಮ ಸಾಥ್ ನೀಡಿ 63 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ 56 ರನ್ ಗಳಿಸಿದರು. ಇವರಿಬ್ಬರು ನಾಟೌಟ್ ಆಗಿ ಇಂಗ್ಲೆಂಡ್ ಗೆ ಜಯ ತಂದಿತ್ತರು. ಇಂಗ್ಲೆಂಡ್ ಇನ್ನಿಂಗ್ಸ್ ನ ಮೂರನೇ ಓವರ್ ಎಸೆದ ಸ್ಟುವರ್ಟ್ ಬಿನ್ನಿಗೆ ಮೋಯಿನ್ ಅಲಿ ವಿಕೆಟ್ ಸಿಕ್ಕಿತು.

ಭಾರತದ ಇನ್ನಿಂಗ್ಸ್: ಜೇಮ್ಸ್ ಆಂಡರ್ಸನ್ ಹಾಗೂ ಸ್ಟೀಫನ್ ಫಿನ್ ದಾಳಿಗೆ ಸಿಲುಕಿದ ಭಾರತ ನಲುಗಿಬಿಟ್ಟಿತು. ಆಂಡರ್ಸನ್ 8.2 ಓವರ್ ಗಳಲ್ಲಿ 2 ಮೇಡನ್ ಸಹಿತ 18 ರನ್ನಿತ್ತು 4 ವಿಕೆಟ್ ಪಡೆದರು. ಫಿನ್ 8 ಓವರ್ ಗಳಲ್ಲಿ 33ಕ್ಕೆ 5 ವಿಕೆಟ್ ಕಬಳಿಸಿದರು. ಅಲಿ ಸ್ಪಿನ್ ಗೆ ರೈನಾ ಬಲಿಯಾದರು.
ರೋಹಿತ್ ಶರ್ಮ ಬದಲಿಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಅಜಿಂಕ್ಯ ರಹಾನೆ 33 ರನ್ ಗಳಿಸಿದರೆ ಶಿಖರ್ ಧವನ್ ಮತ್ತೊಮ್ಮೆ ವಿಫಲರಾಗಿ 1 ರನ್ ಗಳಿಸಿ ಔಟಾದರು. ಅಂಬಟಿ ರಾಯುಡು ತಾಳ್ಮೆಯುತ 23 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಯತ್ನಿಸಿದರು.
ಎಂಎಸ್ ಧೋನಿ 34 ಹಾಗೂ ಸ್ಟುವರ್ಟ್ ಬಿನ್ನಿ 44(55ಎ, 3 ಬೌಂ, 2 ಸಿ) ಜೊತೆಯಾಟ ಭಾರತದ ಮೊತ್ತ ಹೆಚ್ಚಿಸಿತು. ಉಳಿದಂತೆ ಯಾರೂ ಕ್ರೀಸ್ ನಲ್ಲಿ ಹೆಚ್ಚುಕಾಲ ಉಳಿಯಲಿಲ್ಲ.
ಸಂಕ್ಷಿಪ್ತ ಸ್ಕೋರ್:
ಭಾರತ : 153 ಆಲೌಟ್, 39.3 ಓವರ್ ಗಳು (ಸ್ಟುವರ್ಟ್ ಬಿನ್ನಿ 44, ಸ್ಟೀವನ್ ಫಿನ್ 33ಕ್ಕೆ 5, ಆಂಡರ್ಸನ್ 18ಕ್ಕೆ 4)
ಇಂಗ್ಲೆಂಡ್ : 156/1 27.3 ಓವರ್ಸ್(ಇಯಾನ್ ಬೆಲ್ 88, ಟೇಲರ್ 56, ಬಿನ್ನಿ 34ಕ್ಕೆ 1