Aman Sehrawat: ತವರಿಗೆ ಮರಳಿದ ಅಮನ್ ಸೆಹ್ರಾವತ್‌ಗೆ ಆತ್ಮೀಯ ಸ್ವಾಗತ; ಫೋಟೋಗೆ ಮುಗಿಬಿದ್ದ ಸಿಬ್ಬಂದಿ
ಆಗಸ್ಟ್ 14 ಬುಧವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಮಿಂಚಿದ ಭಾರತದ ಏಕೈಕ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಭಾರತಕ್ಕೆ ಮರಳಿದ್ದಾರೆ. ತಾಯ್ನಾಡಿಗೆ ಆಗಮಿಸಿದ ಅಮನ್ ಸೆಹ್ರಾವತ್ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಫ್ರೀಸ್ಟೈಲ್ 57 ಕೆಜಿ ಕುಸ್ತಿ ವಿಭಾಗದಲ್ಲಿ ಅಮನ್ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಇದರೊಂದಿಗೆ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇದೀಗ ಅಮನ್ ಪ್ಯಾರಿಸ್ ನಿಂದ ಭಾರತಕ್ಕೆ ಮರಳಿದ್ದಾರೆ.

ನವದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮನ್ ಸೆಹ್ರಾವತ್ ಅವರಿಗೆ ಆತ್ಮೀಯ ಸ್ವಾಗತ ಕೋರಿದ ಬಳಿಕ ಅಲ್ಲಿದ್ದ ಸಿಬ್ಬಂದಿ ಮತ್ತು ಉದ್ಯೋಗಿಗಳು ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಇದಲ್ಲದೆ
ವಿಮಾನ ನಿಲ್ದಾಣದ ಹೊರಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಾರತೀಯ ಕ್ರೀಡಾಭಿಮಾನಿಗಳು ಅಮನ್ ಅವರಿಗೆ ಹಾರ ಹಾಕಿ ಹೆಗಲ ಮೇಲೆ ಹೊತ್ತಿಕೊಂಡು ಸಂಭ್ರಮಿಸಿದರು.
ಈ ವೇಳೆ 'ಭಾರತ್ ಮಾತಾಕೀ ಜೈ' ಘೋಷಣೆಗಳು ಎಲ್ಲರ ಮನ ಮುಟ್ಟಿದವು. ತವರಿಗೆ ಬಂದ ಅಮನ್ ಅವರನ್ನು ಸ್ವಾಗತಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಅಮನ್ ಸಾಧನೆಗೆ ನೆಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಂಬರುವ ಒಲಿಂಪಿಕ್ಸ್‌ನಲ್ಲಿ ಅಮನ್ ಭಾರತಕ್ಕೆ ಚಿನ್ನ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.
ಸೆಮಿಫೈನಲ್‌ನಲ್ಲಿ ಸೋತ ಬಳಿಕ ಅಮನ್ ಕಂಚಿನ ಪದಕದ ಪಂದ್ಯವನ್ನಾಡಿದರು. ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ಅವರನ್ನು 13-5 ರಿಂದ ಸೋಲಿಸುವ ಮೂಲಕ ಅಮನ್ ಭಾರತಕ್ಕೆ ಆರನೇ ಪದಕವನ್ನು ಗೆದ್ದು ಕೊಟ್ಟರು. ಅಮನ್ 21 ವರ್ಷ, 1 ತಿಂಗಳು ಮತ್ತು 14 ದಿನಗಳ ವಯಸ್ಸಿನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತದ ಕಿರಿಯ ಅಥ್ಲೀಟ್ ಆಗಿದ್ದಾರೆ.
ಮೋದಿಗೆ ಭರವಸೆ
ಪದಕ ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅಮನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಮನ್ ಶಪಥ ಮಾಡಿದ್ದರು. ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ನನ್ನ ಶಕ್ತಿಮೀರಿ ಪ್ರಯತ್ನಿಸಿದರೂ ಆಗಲಿಲ್ಲ. ಆದರೆ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಡುತ್ತೇನೆ ಎಂದು ಮೋದಿಗೆ ಅಮನ್ ಬಂಗಾರದ ಭರವಸೆ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications