ರಿಲಯನ್ಸ್ ಫೌಂಡೇಶನ್‌ನ ಅಥ್ಲೀಟ್ ಗುಲ್ವೀರ್ ಸಿಂಗ್ ಅವರು ಇರಾನ್‌ನ ಟೆಹ್ರಾನ್‌ನಲ್ಲಿ ನಡೆದ 2024ರ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 3,000 ಮೀಟರ್ ಓಟದಲ್ಲಿ 8 ನಿಮಿಷ 07.48 ಸೆಕೆಂಡ್ ಸಮಯದೊಂದಿಗೆ ಸ್ಪರ್ಧೆ ಮುಗಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಗುಲ್ವೀರ್ ಸಿಂಗ್ 2023ರಲ್ಲೂ ಉನ್ನತ ಫಾರ್ಮ್‌ನಲ್ಲಿದ್ದರು. ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಅದ್ಭುತ ವರ್ಷವಾಗಿತ್ತು. ಅವರು ಏಷ್ಯನ್ ಗೇಮ್ಸ್‌ನಲ್ಲೂ ಪ್ರಭಾವಶಾಲಿ ಓಟವನ್ನು ಓಡಿದ್ದರು.

ಬಳಿಕ ಗೋವಾದಲ್ಲಿ ನಡೆದ 2023ರ ರಾಷ್ಟ್ರೀಯ ಗೇಮ್ಸ್‌ನಲ್ಲೂ ಅದೇ ಲಯ ಮುಂದುವರಿಸಿದ್ದರು. ಇದೀಗ ತಮ್ಮ 2024ರ ಋತುವನ್ನು ಕೂಡ ಉನ್ನತವಾಗಿಯೇ ಪ್ರಾರಂಭಿಸಿದ್ದಾರೆ.
ಗುಲ್ವೀರ್ ಸಿಂಗ್ ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ 10,000 ಮೀಟರ್ ಓಟದಲ್ಲಿ ಕಂಚು ಗೆದ್ದಿದ್ದರು ಮತ್ತು ಕಳೆದ ವರ್ಷ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 5,000 ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.
ರಿಲಯನ್ಸ್ ಫೌಂಡೇಶನ್ ಅಥ್ಲೀಟ್‌ಗಳು ಈಗ ಹಾಲಿ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇದಕ್ಕ್ಕೂ ಮುನ್ನ 60 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಜ್ಯೋತಿ ಯರ್ರಾಜಿ ಕೂಡ ಚಿನ್ನ ಗೆದ್ದಿದ್ದರು.
ಈ ಗೆಲುವು ಗುಲ್ವೀರ್ ಅವರ ನಿರ್ವಹಣೆಯ ನಿರಂತರ ಪ್ರಗತಿ ಮತ್ತು ಸುಧಾರಣೆಯನ್ನು ಪ್ರತಿಬಿಂಬಿಸುತ್ತದೆ. ಇದು ಏಷ್ಯನ್ ಮಟ್ಟದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಅವರ ಮೊದಲ ಚಿನ್ನದ ಪದಕವಾಗಿದೆ.