ಹರಿಯಾಣ ವಿಧಾನಸಭೆ ಚುನಾವಣೆಗೆ ಶನಿವಾರ ಮತದಾನ ನಡೆಯುತ್ತಿದೆ. 90 ವಿಧಾನ ಸಭಾ ಸ್ಥಾನಗಳಲ್ಲಿ ಒಟ್ಟು 1031 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ವೇಳೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಹಲವು ಕ್ರೀಡಾಪಟುಗಳು ಸಹ ಮತದಾನ ಮಾಡಿ ಗಮನ ಸೆಳೆದರು.
ಒಲಂಪಿಕ್ ಪದಕ ವಿಜೇತ ಮನು ಭಾಕರ್ ಕೂಡ ಮತದಾನ ಮಾಡಿದರು. ಇವರು ಝಜ್ಜರ್‌ನ ಮತಗಟ್ಟೆಯಲ್ಲಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಿದರು. ಮತದಾನದ ವೇಳೆ ಮನು ಅವರ ಇಡೀ ಕುಟುಂಬವೂ ಇತ್ತು. ಮತ ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮನು ಭಾಕರ್ ಮತ ಚಾಲಾಯಿಸುವಂತೆ ಮನವಿ ಮಾಡಿದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಡಬಲ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮನು ಭಾಕರ್ ಶನಿವಾರ ಮೊದಲ ಬಾರಿಗೆ ಮತದಾನ ಮಾಡಿದರು. ಈ ವೇಳೆ ಅವರೊಂದಿಗೆ ತಂದೆ ರಾಮ್ ಕಿಶನ್ ಭಾಕರ್ ಅವರೊಂದಿಗೆ ಚಾರ್ಕಿ ದಾದ್ರಿಯಲ್ಲಿ ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಮನು, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತದಾನ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದ್ದಾರೆ. ದೇಶದ ಯುವಕರಾದ ನಾವು ಚುನಾವಣೆಯಲ್ಲಿ ಭಾಗವಹಿಸಿ ಅರ್ಹ ಅಭ್ಯರ್ಥಿಗೆ ಮತ ಹಾಕುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಸಣ್ಣ ಹೆಜ್ಜೆಗಳು ದೊಡ್ಡ ಯಶಸ್ಸಿಗೆ ಕಾರಣವಾಗುತ್ತವೆ ಎಂದು ತಿಳಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಫ್ರಿ ಸ್ಟೈಲ್ 50 ಕೆಜಿ ಕುಸ್ತಿ ವಿಭಾಗದಲ್ಲಿ ಪಾಲ್ಗೊಂಡಿದ್ದ ವಿನೇಶ್, ಫೈನಲ್‌ಗೂ ಮುನ್ನ ಅನರ್ಹಗೊಂಡಿದ್ದರು. ಇವರು ನಿಗದಿತ ತೂಕಕ್ಕಿಂತ 100 ಗ್ರಾಮ ಹೆಚ್ಚಿನ ತೂಕ ಹೊಂದಿರುವುದಕ್ಕಾಗಿ ಇವರನ್ನು ಅನರ್ಹ ಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ವಿನೇಶ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲೂ ಮನವಿ ಸಲ್ಲಿಸಿದ್ದರು. ಈ ವೇಳೆ ತಮಗೂ ಬೆಳ್ಳಿ ಪದಕ ನೀಡಬೇಕು ಎಂದು ಮನವಿಯನ್ನು ಮಾಡಿದ್ದರು. ಆದರೆ ಇವರ ಮನವಿಗೆ ಕೋರ್ಟ್ ಸಮ್ಮತಿ ನೀಡಿರಲಿಲ್ಲ. ಇದರಿಂದ ವಿನೇಶ್ ಹತಾಶೆಗೆ ಒಳಗಾದರು.

ಸದ್ಯ ವಿನೇಶ್ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜುಲಾನ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಶನಿವಾರ ಅವರು ತಮ್ಮ ಮತದಾನ ಚಲಾಯಿಸಿದರು. ಇದೇ ವೇಳೆ ಫೋಟೋಗೆ ಪೋಸ್ ನೀಡಿ ಸಂಭ್ರಮಿಸಿದರು.
ಹರಿಯಾಣದಲ್ಲಿ 2024 ರ ವಿಧಾನಸಭಾ ಚುನಾವಣೆಗೆ ಮತದಾನವು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. 90 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,031 ಅಭ್ಯರ್ಥಿಗಳು ಕಣದಲ್ಲಿದ್ದು, 20,632 ಮತಗಟ್ಟೆಗಳನ್ನು ರಚಿಸಲಾಗಿದೆ. ಹರಿಯಾಣದಲ್ಲಿ ಒಟ್ಟು 2,03,54,350 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 1.07 ಕೋಟಿ ಪುರುಷರು, 95.77 ಲಕ್ಷ ಮಹಿಳೆಯರು ಮತ್ತು 467 ತೃತೀಯಲಿಂಗಿ ಮತದಾರರು ಸೇರಿದ್ದಾರೆ.