ಆಗಸ್ಟ್ 10 ಶನಿವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್ ಭಾರತದ ಕುಸ್ತಿಪಟುಗಳಿಗೆ ವಿಶೇಷವಾಗಿರಲಿಲ್ಲ. ಏಕೆಂದರೆ ಮೊದಲ ಬಾರಿಗೆ ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪಿದ ಭಾರತದ ಮಹಿಳಾ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವಿನೇಶ್ ಫೋಗಟ್ ಅವರನ್ನು ಆನರ್ಹ ಗೊಳಿಸಿಲಾಗಿತ್ತು. ನಿಗದಿತ ತೂಕಕ್ಕಿಂತ ವಿನೇಶ್ ಹೆಚ್ಚಿನ ತೂಕ ಹೊಂದಿದ್ದರಿಂದ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದರು.
ಇಂತಹ ಪರಿಸ್ಥಿತಿಯನ್ನು ಪುರುಷರ ಫ್ರೀಸ್ಟೈಲ್ 57 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತದ ಅಮನ್ ಸೆಹ್ರಾವತ್ ಎದುರಿಸಿದ್ದಾರೆ. ಶುಕ್ರವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ಅವರನ್ನು ಸೋಲಿಸುವ ಮೂಲಕ ಭಾರತಕ್ಕೆ ಆರನೇ ಪದಕವನ್ನು ಗೆದ್ದುಕೊಟ್ಟರು. ಅಮನ್ 13-5ರಿಂದ ತಮ್ಮ ಎದುರಾಳಿಯನ್ನು ಸೋಲಿಸಿದರು.

ಈ ಗೆಲುವು 2008 ರಿಂದ ಪ್ರತಿ ಆವೃತ್ತಿ ಒಲಿಂಪಿಕ್ಸ್ ಕುಸ್ತಿಯಲ್ಲಿ ಕನಿಷ್ಠ ಒಂದು ಪದಕವನ್ನು ಗೆಲ್ಲುವ ಭಾರತದ ಓಟವನ್ನು ಮುಂದುವರೆಸಿದೆ. ಆದರೆ ಕಂಚಿನ ಪಂದ್ಯಕ್ಕೂ ಮುನ್ನ ಅಮನ್ ಕೂಡ ತೂಕ ಹೆಚ್ಚಾದ ಕಾರಣ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಆದರೆ, ಅಮನ್ ಅವರ ಕಠಿಣ ಪರಿಶ್ರಮವು ಅರ್ಹತೆಯ ಮಾನದಂಡಗಳನ್ನು ಪೂರೈಸಲು ಸಹಾಯ ಮಾಡಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಗುರುವಾರ ಸೆಮಿಫೈನಲ್‌ನಲ್ಲಿ ಜಪಾನ್‌ನ ರೇ ಹಿಗುಚಿ ವಿರುದ್ಧ ಅಮನ್ ಸೋತರು. ಈ ವೇಳೆ ಅಮನ್ ಸ್ವೀಕಾರಾರ್ಹ ಮಿತಿಗಿಂತ (57) 4.5 ಕೆಜಿ ಹೆಚ್ಚು ತೂಕ ಹೊಂದಿದ್ದರು. ಇದು ಭಾರತ ತಂಡಕ್ಕೆ ಮತ್ತೊಮ್ಮೆ ಆಘಾತ ಎದುರಿಸುವಂತೆ ಮಾಡಿತ್ತು.
ಕಂಚಿನ ಪದಕ ಪಂದ್ಯದ ಶುಕ್ರವಾರ ಬೆಳಗ್ಗೆ 10 ಗಂಟೆಗಳ ಕಾಲಾವಧಿಯೊಳಗೆ ತೂಕದ ಇಳಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿರುವುದರಿಂದ ಇಬ್ಬರು ಹಿರಿಯ ಕೋಚ್‌ಗಳಾದ ಜಗಮಂದರ್ ಸಿಂಗ್ ಮತ್ತು ವೀರೇಂದ್ರ ದಹಿಯಾ ಅವರು ದೊಡ್ಡ ಸಹಾಸಕ್ಕೆ ಕೈ ಹಾಕಿದರು.
ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆಯು ಒಂದೂವರೆ ಗಂಟೆಗಳ ಮ್ಯಾಟ್ ಸೆಷನ್ನೊಂದಿಗೆ ಪ್ರಾರಂಭವಾಯಿತು. ನಂತರ ಅಮನ್ ಅವರಿಗೆ ಒಂದು ಗಂಟೆ ಬಿಸಿ ಸ್ನಾನವನ್ನು ಮಾಡಿಸಲಾಯಿತು. ಇದರೊಂದಿಗೆ ತೂಕ ಮತ್ತು ಬೆವರು ಇಳಿಸಲು ಅಮನ್ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ನಿರಂತರವಾಗಿ ಒಂದು ಗಂಟೆ ಓಡಿದರು.
ಇದಾದ ಬಳಿಕ ಅಮನ್ ಅವರಿಗೆ 30 ನಿಮಿಷಗಳ ವಿರಾಮವನ್ನು ನೀಡಲಾಯಿತು. ವಿರಾಮದ ನಂತರ ಅಮನ್ ತೂಕವನ್ನು ಕಳೆದುಕೊಳ್ಳಲು ಐದು ನಿಮಿಷಗಳ ಸೌನಾ ಸ್ನಾನದಲ್ಲಿ ತೊಡಗಿಸಿಕೊಂಡರು. ಈ ಹೊತ್ತಿಗೆ ಕೊನೆಯ ಸೆಷನ್ ಮುಗಿದಿತ್ತು.
ಆದರೆ ಅಮನ್ ಅವರ ತೂಕ ನಿಗದಿತ ತೂಕಕ್ಕಿಂತ 900 ಗ್ರಾಂ ಹೆಚ್ಚಾಗಿತ್ತು. ಆದ್ದರಿಂದ ಮತ್ತೆ ತೂಕ ಇಳಿಕೆ ಮಾಡಲು ತರಬೇತುದಾರರು ಲಘು ಜಾಗಿಂಗ್ ಮಾಡಿಸಿದರು. ಕೊನೆಯ 15 ನಿಮಿಷಗಳು ಅಮನ್ ಅವರ ತೂಕವನ್ನು 56.9 ಕೆಜಿಗೆ ಇಳಿಸಲು ಸಹಾಯ ಮಾಡಿತು.
ಅರ್ಹತಾ ಮಾನದಂಡಕ್ಕಿಂತ 100 ಗ್ರಾಮ್ ಕಡಿಮೆ ತೂಕವನ್ನೇ ಅಮನ್ ಹೊಂದಿದ್ದರು. ಈ ಮೂಲಕ ಅಮನ್ 10 ಗಂಟೆಗಳಲ್ಲಿ 4.6 ಕೆಜಿ ತೂಕ ಇಳಿಕೆ ಮಾಡುವಲ್ಲಿ ಯಶಸ್ವಿಯಾದರು. ಇದಕ್ಕೂ ಮೊದಲು ವಿನೇಶ್ ಅವರಿಂದ ಸಾಧ್ಯವಾಗದನ್ನು ಅಮನ್ ಮಾಡಿ ತೋರಿಸಿದ್ದರು. ಕಂಚಿನ ಪದಕ ಪಂದ್ಯಕ್ಕೆ ಅಮನ್ ಆರ್ಹತೆ ಪಡೆಯುತ್ತಿದ್ದಂತೆ ತರಬೇತುದಾರರು ನಿಟ್ಟುಸಿರು ಬಿಟ್ಟರು.
ತರಬೇತುದಾರ ವೀರೇಂದ್ರ ದಹಿಯಾ ಮಾಧ್ಯಮಗಳೊಂದಿಗೆ ಅಮನ್ ತೂಕ ಇಳಿಸಿಕೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ. 'ನಾವು ಪ್ರತಿ ಗಂಟೆಗೆ ಅವರ ತೂಕವನ್ನು ಪರಿಶೀಲಿಸುತ್ತಿದ್ದೆವು. ಇಡೀ ರಾತ್ರಿ ಮಲಗಲಿಲ್ಲ, ಹಗಲಿನಲ್ಲಿಯೂ ಸಹ ತೂಕ ಇಳಿಸುವುದು ನಮಗೆ ಸಾಮಾನ್ಯವಾಗಿತ್ತು. ಆದರೆ ಹಿಂದಿನ ದಿನ (ವಿನೇಶ್ ಆನರ್ಹ) ನಡೆದ ಘಟನೆಯ ಕಾರಣದಿಂದಾಗಿ ತುಂಬಾ ಟೆನ್ಷನ್ ಇತ್ತು. ನಾವು ಮತ್ತೊಂದು ಪದಕವನ್ನು ಕಳೆದುಕೊಳ್ಳಲು ಬಿಡಲಿಲ್ಲ ಎಂದು ಹೇಳಿದ್ದಾರೆ.