ಜುಲೈ 9 ಮಂಗಳವಾರ, ಬಹು ನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26 ರಿಂದ ಆರಂಭವಾಗಲಿದೆ. ಈ ಋತುವಿನಲ್ಲಿ ಭಾರತವು ತನ್ನ ಅಥ್ಲೀಟ್‌ಗಳಿಂದ ಇನ್ನೂ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.
ಕಳೆದ ಬಾರಿ ಭಾರತವು ಒಲಿಂಪಿಕ್ಸ್‌ನಲ್ಲಿ 7 ಪದಕಗಳನ್ನು ಗೆದ್ದಿತ್ತು. ಅದರಲ್ಲಿ ಕೇವಲ ಒಂದು ಚಿನ್ನದ ಪದಕ ಮಾತ್ರ. ಅದು ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಗೆದ್ದ ಏಕೈಕ ಚಿನ್ನದ ಪದಕವಾಗಿತ್ತು.

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದರು. ಈ ಬಾರಿಯೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರಿಂದ ಭಾರತ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ.
ನೀರಜ್ ಚೋಪ್ರಾ ಡಿಸೆಂಬರ್ 24, 1997 ರಂದು ಹರಿಯಾಣದ ಸಮೀಪವಿರುವ ಖಂಡ್ರಾ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ನೀರಜ್ ರೈತ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ತಂದೆ ಕೃಷಿಕರು, ತಾಯಿ ಸರೋಜ ದೇವಿ ಗೃಹಿಣಿ.

ನೀರಜ್ 11ನೇ ವಯಸ್ಸಿನಲ್ಲೇ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ನಂತರ ನೀರಜ್ ಪಾಣಿಪತ್ ಕ್ರೀಡಾಂಗಣದಲ್ಲಿ ಜಾವೆಲಿನ್ ಅಭ್ಯಾಸ ಮಾಡುತ್ತಿದ್ದರು. ತರಬೇತಿಯಿಲ್ಲದೆ ನೀರಜ್ ಅವರ 40 ಮೀಟರ್ ದೂರ ಎಸೆದು ಗಮನ ಸೆಳೆದಿದ್ದರು.
ಇದನ್ನು ಕಂಡು ಪ್ರಭಾವಿತರಾದ ಜೈವೀರ್ ಅವರು ನೀರಜ್‌ಗೆ ಮೊದಲ ಕೋಚ್ ಆದರು. ಅದರಂತೆ ನೀರಜ್ ಕ್ರಮೇಣ ತಮ್ಮ ವೃತ್ತಿಜೀವನದಲ್ಲಿ ಹೆಜ್ಜೆ ಹಾಕಿದರು.

ನೀರಜ್ ಚೋಪ್ರಾ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಪೋಲೆಂಡ್‌ನಲ್ಲಿ ನಡೆದ 2016 ಐಎಎಎಫ್ ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ನಂತರ ನೀರಜ್ ಬೆಳಕಿಗೆ ಬಂದರು.
ಪೋಲೆಂಡ್‌ನಲ್ಲಿ ನೀರಜ್ 86.48 ಮೀಟರ್‌ಗಳ ಗೆಲುವಿನ ದೂರವನ್ನು ಎಸೆದಿದ್ದರು. ಈ ದಾಖಲೆಯನ್ನು ಇನ್ನೂ 20 ವರ್ಷದೊಳಗಿನವರ ವಿಭಾಗದಲ್ಲಿ ಯಾರೊಬ್ಬರೂ ಮುರಿದಿಲ್ಲ.
ಇದಾದ ನಂತರ ಕಠಿಣ ಸ್ಫರ್ಧೆ ನಡುವೆಯೂ ನೀರಜ್ ಚೋಪ್ರಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಲೇ ಇದ್ದರು. 2017 ರ ಏಷ್ಯನ್ ಕ್ರೀಡಾಕೂಟದಲ್ಲಿ ನೀರಜ್ ಚಾಂಪಿಯನ್ ಆದರು. ಅದಾದ ಬಳಿಕ ಗೋಲ್ಡ್ ಕೋಸ್ಟ್ 2018 ಕಾಮನ್‌ವೆಲ್ತ್ ಗೇಮ್ಸ್ ಮತ್ತು ಜಕಾರ್ತಾ 2018 ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಹೆಗ್ಗಳಿಕೆ ಪಾತ್ರರಾದರು.

ನೀರಜ್ ಚೋಪ್ರಾ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದರು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್‌ನಲ್ಲಿ ಶೂಟರ್ ಅಭಿನವ್ ಬಿಂದ್ರಾ ಅವರ ಐತಿಹಾಸಿಕ ಪ್ರದರ್ಶನದ ನಂತರ ಚಿನ್ನವು ಭಾರತದ ಎರಡನೇ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕವಾಗಿತ್ತು. ಇದರೊಂದಿಗೆ ಚಿನ್ನ ಗೆದ್ದ ದೇಶದ ಮೊದಲ ಹಾಗೂ ಏಕೈಕ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎನಿಸಿಕೊಂಡರು.
ಟೋಕಿಯೋದಲ್ಲಿ ನೀರಜ್ ಅವರು ಜೋಹಾನ್ಸ್ ವೆಟರ್, ಪ್ರಸ್ತುತ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್, 2012ರ ಲಂಡನ್ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಕೆಶೋರ್ನ್ ವಾಲ್ಕಾಟ್ ಅವರಂತಹ ಘಟಾನುಘಟಿಗಳೊಂದಿಗೆ ಸೆಣಸಾಡಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಈ ಮೂಲಕ ನೀರಜ್ ಅವರಿಗೆ 'ಗೋಲ್ಡನ್ ಬಾಯ್' ಹೆಸರು ಬಂತು. ಅಲ್ಲಿಂದ ನೀರಜ್ ಗೋಲ್ಡನ್ ಬಾಯ್ ಆಗಿ ಮಿಂಚುತ್ತಿದ್ದಾರೆ.

ನೀರಜ್ ಚೋಪ್ರಾ ಅವರ ಅದ್ಭುತ ಪ್ರದರ್ಶನಕ್ಕಾಗಿ ಭಾರತ ಸರ್ಕಾರ ಮೂರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ನೀರಜ್ ಚೋಪ್ರಾ ಅವರಿಗೆ 2018ರಲ್ಲಿ ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು. ಟೋಕಿಯೊದಲ್ಲಿ ಚಿನ್ನದ ಪದಕವನ್ನು ಗೆದ್ದ ನಂತರ 2021ರಲ್ಲಿ ನೀರಜ್ ಅವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಮತ್ತು 2022ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಲಾಯಿತು.
ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿಲ್ಲ. ನೀರಜ್‌ಗೆ ಸಣ್ಣಪುಟ್ಟ ಗಾಯವಾಗಿದ್ದು, ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದು ಸೂಕ್ತವೆಂದು ಪರಿಗಣಿಸಲಿಲ್ಲ ಪ್ಯಾರಿಸ್ ಡೈಮಂಡ್ ಲೀಗ್ ಅಂತಹ ಕ್ರೀಡಾಕೂಟಗಳಿಂದ ದೂರ ಉಳಿದಿದ್ದರು.
ಇದೀಗ ನೀರಜ್ ಪ್ಯಾರಿಸ್‌ಗೆ ಸಂಪೂರ್ಣವಾಗಿ ಸಿದ್ಧರಾಗಿದ್ದು, ಭಾರತದ ಪ್ರಬಲ ಪದಕ ಭರವಸೆಯಾಗಿದ್ದಾರೆ. ಜೊತೆಗೆ ಭಾರತ ಆಥ್ಲೀಟ್ಸ್ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಈ ಬಾರಿಯೂ ನೀರಜ್ ಭಾರತಕ್ಕೆ ಚಿನ್ನ ತಂದುಕೊಡಲಿದ್ದಾರೆ ಎಂದು ದೇಶವಾಸಿಗಳು ಆಶಿಸುತ್ತಿದ್ದಾರೆ.