ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದರು ಮತ್ತು ಕುಸ್ತಿಯನ್ನು ತೊರೆಯುವುದಾಗಿ ಘೋಷಿಸಿದರು.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಷ್ಠಾವಂತ ಬೆಂಬಲಿಗ ಸಂಜಯ್ ಸಿಂಗ್ ಅವರು ಭಾರತದ ಕುಸ್ತಿ ಒಕ್ಕೂಟ (WFI)ದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಸಾಕ್ಷಿ ಮಲಿಕ್ ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 21, ಗುರುವಾರ ನವದೆಹಲಿಯಲ್ಲಿ ನಡೆದ ಬಹುನಿರೀಕ್ಷಿತ ಭಾರತದ ಕುಸ್ತಿ ಒಕ್ಕೂಟ (WFI) ಚುನಾವಣೆಯಲ್ಲಿ ಸಂಜಯ್ ಸಿಂಗ್ ಅವರು ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಅವರನ್ನು 40-7 ಮತಗಳ ಅಂತರದಿಂದ ಸೋಲಿಸಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾಕ್ಷಿ ಮಲಿಕ್, ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕುಟುಂಬ ಮತ್ತು ಆಪ್ತರಿಗೆ ಅವಕಾಶ ನೀಡುವುದಿಲ್ಲ ಎಂದು ಕ್ರೀಡಾ ಸಚಿವಾಲಯವು ಕುಸ್ತಿಪಟುಗಳಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಉತ್ತರಪ್ರದೇಶ ಕುಸ್ತಿ ಫೆಡರೇಶನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಂಜಯ್ ಸಿಂಗ್ ಅವರು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬಲಗೈ ಬಂಟರಾಗಿದ್ದರು ಎಂದು ಸಾಕ್ಷಿ ಮಲಿಕ್ ಒತ್ತಿ ಹೇಳಿದರು.

ಟೊಕಿಯೋ ಒಲಿಂಪಿಕ್ಸ್‌ನ ಪದಕ ವಿಜೇತ ಬಜರಂಗ್ ಪುನಿಯಾ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಾಕ್ಷಿ ಮಲಿಕ್, ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಭಾರತದ ಕುಸ್ತಿ ಫೆಡರೇಶನ್‌ನ ಹಿಂದಿನ ಆಡಳಿತದ ವಿರುದ್ಧ ಹೆಚ್ಚು ಮಾತನಾಡಿದ, ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳು ನೀಡಿದ ಬೆಂಬಲಕ್ಕಾಗಿ ಸಾಕ್ಷಿ ಮಲಿಕ್ ಧನ್ಯವಾದ ಅರ್ಪಿಸಿದರು.
"ನಾವು 40 ದಿನಗಳ ಕಾಲ ರಸ್ತೆಗಳಲ್ಲಿ ಮಲಗಿದ್ದೇವೆ ಮತ್ತು ದೇಶದ ಹಲವಾರು ಭಾಗಗಳಿಂದ ಸಾಕಷ್ಟು ಜನರು ನಮ್ಮನ್ನು ಬೆಂಬಲಿಸಲು ಬಂದರು. ಬ್ರಿಜ್ ಭೂಷಣ್ ಸಿಂಗ್ ಅವರ ವ್ಯಾಪಾರ ಪಾಲುದಾರ ಮತ್ತು ಆಪ್ತ ಸಹಾಯಕರು ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾದರೆ, ನಾನು ಕುಸ್ತಿಯನ್ನು ತ್ಯಜಿಸುತ್ತೇನೆ," ಎಂದು ಸ್ಟಾರ್ ಕುಸ್ತಿಪಟು ಸಾಕ್ಷಿ ಮಲಿಕ್ ಗುರುವಾರ ಹೇಳಿದರು.
ನವದೆಹಲಿಯಲ್ಲಿ ನಡೆದ ಭಾವುಕ ಪತ್ರಿಕಾಗೋಷ್ಠಿಯ ಬಳಿಕ ಸಾಕ್ಷಿ ಮಲಿಕ್ ಅವರು ಕಣ್ಣೀರಿಡುತ್ತಾ ಆವರಣದಿಂದ ನಿರ್ಗಮಿಸುತ್ತಿದ್ದರು.
ಉತ್ತರಪ್ರದೇಶ ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟಿಸಿದ ಸಾಕ್ಷಿ ಮಲಿಕ್ ಮತ್ತು ಇತರ ಕುಸ್ತಿಪಟುಗಳು, ಅನಿತಾ ಶೆಯೋರಾನ್ ಅವರನ್ನು ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಲು ಬೆಂಬಲಿಸಿದರು.
ಅನಿತಾ ಶೆಯೋರಾನ್ ಅವರು ರಾಷ್ಟ್ರೀಯ ಕುಸ್ತಿ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರಾಗಲು ಸ್ಪರ್ಧೆಯಲ್ಲಿದ್ದರು. ಆದರೆ,47ರಲ್ಲಿ 7 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾದರು ಮತ್ತು ಭಾರೀ ಅಂತರದಿಂದ ಸೋತರು.
"ಮಹಿಳಾ ಅಧ್ಯಕ್ಷೆ ಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ, ಅಧ್ಯಕ್ಷೆ ಮಹಿಳೆಯಾದರೆ ಕಿರುಕುಳ ಆಗುತ್ತಿರಲಿಲ್ಲ. ಆದರೆ, ಮೊದಲು ಮಹಿಳೆಯರು ಭಾಗವಹಿಸಿರಲಿಲ್ಲ ಮತ್ತು ಇಂದು ಒಬ್ಬ ಮಹಿಳೆಗೂ ಸ್ಥಾನ ನೀಡದ ಪಟ್ಟಿಯನ್ನು ನೋಡಬಹುದು. ನಾವು ಸಂಪೂರ್ಣ ಶಕ್ತಿಯಿಂದ ಹೋರಾಡಿದ್ದೇವೆ. ಆದರೆ ಈ ಹೋರಾಟ ಮುಂದುವರಿಯುತ್ತದೆ. ಹೊಸ ತಲೆಮಾರಿನ ಕುಸ್ತಿಪಟುಗಳು ಹೋರಾಡಬೇಕಿದೆ," ಎಂದು ಸಾಕ್ಷಿ ಮಲಿಕ್ ತಿಳಿಸಿದರು.