ಭಾರತ 2036ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಆಸಕ್ತಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ಪತ್ರದ ಮೂಲಕ ವ್ಯಕ್ತಪಡಿಸಿದೆ. ಈ ಮೂಲಕ ಭಾರತ ವಿಶ್ವದ ಅತಿ ದೊಡ್ಡ ಕ್ರೀಡಾಕೂಟವನ್ನು ಆಯೋಜಿಸಲು ಸಜ್ಜಾಗಿದೆ. 2036ರ ಒಲಿಂಪಿಕ್ಸ್‌ನ ಆತಿಥ್ಯ ವಹಿಸುವ ಬಿಡ್‌ನಲ್ಲಿ ಭಾರತ ಗೆದ್ದರೆ, ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವುದರಿಂದ ದೇಶಕ್ಕೆ ಐತಿಹಾಸಿಕ ಕ್ಷಣವಾಗಲಿದೆ. ಹೀಗಾಗಿ, ಕ್ರೀಡಾ ಸಚಿವಾಲಯವು ಈ ಕ್ರೀಡಾಕೂಟವನ್ನು ಆಯೋಜಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.
ಪರಿಣತಿ ಮತ್ತು ಮೂಲಸೌಕರ್ಯಗಳ ಪ್ರಕಾರ ವಿವಿಧ ಕ್ರೀಡಾ ವಿಭಾಗಗಳನ್ನು ಆಯೋಜಿಸಲು ಹಲವಾರು ನಗರಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ವರದಿಗಳ ಪ್ರಕಾರ, ಗುಜರಾತ್‌ನ ಅಹಮದಾಬಾದ್ ನಗರ 2036ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಯೋಜನೆಗಳ ಕೇಂದ್ರಬಿಂದುವಾಗಿ ಉಳಿದಿದೆ. 2014ರಲ್ಲಿ ಹಲವು ನಗರಗಳಲ್ಲಿ ಒಲಿಂಪಿಕ್ಸ್ ಆಯೋಜಿಸುವ ಪ್ರಸ್ತಾವನೆಗೆ ಐಒಸಿ ಅನುಮೋದನೆ ನೀಡಿರುವುದು ಗಮನಾರ್ಹ.

ದಕ್ಷಿಣ ಏಷ್ಯಾದ ಅತಿದೊಡ್ಡ ಒಳಾಂಗಣ ಅಥ್ಲೆಟಿಕ್ ಸ್ಟೇಡಿಯಂ ಒಡಿಸ್ಸಾದ ಭುವನೇಶ್ವರದಲ್ಲಿದೆ. ಮುಂದಿನ 10-12 ವರ್ಷಗಳಲ್ಲಿ ಇನ್ನಷ್ಟು ಸ್ಟೇಡಿಯಂನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಬಹುದು. ಹೀಗಾಗಿ 2036ರ ಒಲಂಪಿಕ್ಸ್‌ನಲ್ಲಿ ಹಾಕಿ ಕ್ರೀಡೆಯನ್ನು ಆಡಿಸಲು ಭುವನೇಶ್ವರ ನಗರವನ್ನು ಪರಿಗಣಿಸಲಾಗುತ್ತಿದೆ. ಈ ನಗರವು ಕೆಲವು ಅಥ್ಲೆಟಿಕ್ಸ್ ಮತ್ತು ಈಜು ಸ್ಪರ್ಧೆಗಳನ್ನು ಸಹ ಆಯೋಜಿಸಬಹುದು.
ಭುವನೇಶ್ವರದಲ್ಲಿ ಹಾಕಿ, ಭೋಪಾಲ್‌ನಲ್ಲಿ ರೋಯಿಂಗ್, ಪುಣೆಯಲ್ಲಿ ಕ್ಯಾನೋಯಿಂಗ್ ಮತ್ತು ಕಯಾಕಿಂಗ್ ಆಯೋಜಿಸಿದರೆ ಕ್ರಿಕೆಟ್ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ. ಅಹಮದಾಬಾದ್‌ನಲ್ಲಿ 6000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು ಯೋಜಿಸಲಾಗಿದೆ ಎಂದು ವರದಿಗಳಾಗಿವೆ.
2036ರ ಒಲಿಂಪಿಕ್ಸ್ ವೇದಿಕೆಯ ಅಂದಾಜು ವೆಚ್ಚ 631.77 ಕೋಟಿ ರೂ.ಗಳಾಗಿದ್ದು, ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. 20.39 ಎಕರೆಯಲ್ಲಿ ಹರಡಿರುವ ನಾರಣಪುರ ಕ್ರೀಡಾ ಸಂಕೀರ್ಣವು ಈಜುಕೊಳ, ಬಾಸ್ಕೆಟ್‌ಬಾಲ್ ಮತ್ತು ವಾಲಿಬಾಲ್ ಅಂಕಣಗಳು, ಜಿಮ್ನಾಸ್ಟಿಕ್ಸ್ ಹಾಲ್ ಮತ್ತು ಬ್ಯಾಡ್ಮಿಂಟನ್ ಅಂಕಣಗಳನ್ನು ಒಳಗೊಂಡಿರಲಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ (ಎಸ್‌ವಿಪಿ) ಸ್ಪೋರ್ಟ್ಸ್ ಎನ್‌ಕ್ಲೇವ್ ಮತ್ತು ಕರಾಯ್ ಸ್ಪೋರ್ಟ್ಸ್ ಹಬ್ ಈವೆಂಟ್‌ನ ಎರಡು ಪ್ರಮುಖ ಒಲಿಂಪಿಕ್ ಕೇಂದ್ರಗಳಾಗಿವೆ. ಎಸ್‌ವಿಪಿಯಲ್ಲಿ ಟೆನಿಸ್, ಅಕ್ವಾಟಿಕ್ಸ್ ಮತ್ತು ಇತರ ಕ್ರೀಡೆಗಳನ್ನು ಆಡಲಾಗುತ್ತದೆ. ಆದರೆ ಕರಾಯ್ 35000 ಪ್ರೇಕ್ಷಕರನ್ನು ಹಿಡಿಯುವ ಅಥ್ಲೆಟಿಕ್ಸ್ ಸ್ಟೇಡಿಯಂ ಮತ್ತು ಶೂಟಿಂಗ್ ಸೌಲಭ್ಯಗಳನ್ನು ಹೊಂದಿರುತ್ತದೆ.