Chess Olympiad Champions: ಪ್ರಧಾನಿ ಮೋದಿ ಭೇಟಿಯಾದ ಚೆಸ್ ಒಲಿಂಪಿಯಾಡ್ ಚಾಂಪಿಯನ್ಸ್
ಇತ್ತೀಚೆಗೆ ಮುಕ್ತಾಯಗೊಂಡ ಚೆಸ್ ಒಲಿಂಪಿಯಾಡ್ 2024ರಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಐತಿಹಾಸಿಕ ಗೆಲುವು ಸಾಧಿಸಿವೆ. 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಎಲ್ಲರ ಗಮನ ಸೆಳೆದ ಎರಡು ತಂಡಗಳು ಚಿನ್ನದ ಪದಕಕ್ಕೆ ಮುತ್ತಿಕ್ಕಿವೆ.
ಡಿ ಗುಕೇಶ್, ಅರ್ಜುನ್ ಎರಿಗೈಸಿ ಮತ್ತು ಆರ್ ಪ್ರಗ್ನಾನಂದ ಅವರನ್ನೊಳಗೊಂಡ ಪುರುಷರ ತಂಡ ಸ್ಲೊವೇನಿಯಾವನ್ನು ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಮತ್ತೊಂದೆಡೆ ಡಿ ಹರಿಕಾ, ತಾನಿಯಾ ಸಚ್‌ದೇವ್ ಮತ್ತು ಆರ್ ವೈಶಾಲಿ ನೇತೃತ್ವದ ಮಹಿಳಾ ತಂಡವು ಅಂತಿಮ ಸುತ್ತಿನಲ್ಲಿ ಅಜರ್‌ಬೈಜಾನ್ ತಂಡವನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಇದಲ್ಲದೆ, ವೈಯಕ್ತಿಯ ಸ್ಪರ್ಧೆಯಲ್ಲಿ ಡಿ.ಗುಕೇಶ್, ಅರ್ಜುನ್ ಎರಿಗೈಸಿ ಮತ್ತು ದಿವ್ಯಾ ದೇಶಮುಖ್ ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಈ ವಿಜಯದ ನಂತರ ನವದೆಹಲಿಯಲ್ಲಿ ಚೆಸ್ ಒಲಿಂಪಿಯಾಡ್ ಚಾಂಪಿಯನ್ಸ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಮೋದಿ ಅವರು ಚೆಸ್ ಒಲಿಂಪಿಯಾಡ್ ಚಾಂಪಿಯನ್‌ಗಳನ್ನು ಅಭಿನಂದಿಸಿದರು. ಇದಕ್ಕೂ ಮುನ್ನ ಚೆಸ್ ಒಲಿಂಪಿಯಾಡ್ ಚಾಂಪಿಯನ್ಸ್ ತಮ್ಮ ಹೋಟೆಲ್‌ನಿಂದ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಹೋಗುತ್ತಿರುವ ವೀಡಿಯೊವನ್ನು ಕೇಂದ್ರ ಕ್ರೀಡಾ ಸಚಿವಾಲಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು.
ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಚೆಸ್ ಚಾಂಪಿಯನ್‌ಗಳಾದ ಆರ್ ವೈಶಾಲಿ, ಡಿ ಹರಿಕಾ, ತಾನಿಯಾ ಸಚ್‌ದೇವ್, ವಿದಿತ್ ಗುಜರಾತಿ, ಅರ್ಜುನ್ ಎರಿಗೈಸಿ, ಆರ್ ಪ್ರಗ್ನಾನಂದ ಅವರನ್ನು ಭೇಟಿ ಮಾಡಿದರು. ಬಳಿಕ ಮೋದಿ ಆಟಗಾರರೊಂದಿಗೆ ಸಂವಾದ ನಡೆಸಿದರು. ಈ ವೇಳೆ, ಚೆಸ್ ಒಲಿಂಪಿಯಾಡ್ ಚಾಂಪಿಯನ್ಸ್ ಮೋದಿಯವರಿಗೆ ಚೆಸ್ ಬೋರ್ಡ್ ಅನ್ನು ಉಡುಗೊರೆಯಾಗಿ ನೀಡಿದರು. ಇದಾದ ನಂತರ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಮತ್ತು ಅರ್ಜುನ್ ಎರಿಗೈಸಿ ನಡುವಿನ ಚೆಸ್ ಪಂದ್ಯವನ್ನು ನೋಡಿ ಮೋದಿ ಆನಂದಿಸಿದರು.
ಭಾರೀ ನಗದು ಬಹುಮಾನ
ಬುಧವಾರ ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಒಲಿಂಪಿಯಾಡ್ ಚಾಂಪಿಯನ್ಸ್‌ಗಾಗಿ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ಎಐಸಿಎಫ್ ಅಧ್ಯಕ್ಷ ನಿತಿನ್ ನಾರಂಗ್ ಅವರು, ಚೆಸ್ ಒಲಿಂಪಿಯಾಡ್ ಚಾಂಪಿಯನ್ಸ್‌ಗೆ 3.2 ಕೋಟಿ ರೂ. ಬಹುಮಾನವನ್ನು ಘೋಷಿಸಿದರು. ಪ್ರತಿಯೊಬ್ಬ ಆಟಗಾರನಿಗೆ 25 ಲಕ್ಷ ರೂ., ಪುರುಷ ಮತ್ತು ಮಹಿಳಾ ತಂಡದ ಕೋಚ್‌ಗಳಾದ ಅಭಿಜಿತ್ ಕುಂಟೆ ಮತ್ತು ಶ್ರೀನಾಥ್ ನಾರಾಯಣನ್ ಅವರಿಗೆ ತಲಾ 15 ಲಕ್ಷ ರೂ. ಜೊತೆಗೆ ಭಾರತದ ಹೆಸರಾಂತ ಚೆಸ್ ಆಟಗಾರ ದಿಬ್ಯೇಂದು ಬರುವಾ ಅವರಿಗೆ 10 ಲಕ್ಷ ರೂ. ಮತ್ತು ಸಹಾಯಕ ಕೋಚ್‌ಗಳಿಗೆ 7.5 ಲಕ್ಷ ರೂ.ಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications