ಭಾರತ ಪ್ರಸಕ್ತ ಸಾಲಿನ ಓಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನವನ್ನು ನೀಡುತ್ತಿದ್ದು, ಭರವಸೆ ಮೂಡಿಸಿದೆ. ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿರುವ ಭಾರತ, ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಇಂದು ರಾತ್ರಿ ನಡೆಯುವ ಉಪಾಂತ್ಯ ಪಂದ್ಯದಲ್ಲಿ ಭಾರತ, ಜರ್ಮನಿ ವಿರುದ್ಧ ಕಾದಾಟ ನಡೆಸಲಿದೆ.
ಭಾರತ ಕ್ವಾರ್ಟರ್ ಫೈನಲ್ ಆಡಿದ ಧಾಟಿಯನ್ನು ನೋಡಿದರೆ, ಹರ್ಮನ್ ಪ್ರೀತ್ ಬಳಗದ ಕ್ಷಮತೆ ಎಂತಹದ್ದು ಎಂದು ಅರಿವಾಗುತ್ತದೆ. 10 ಆಟಗಾರರೊಂದಿಗೆ ಭಾರತ, ಕ್ವಾರ್ಟರ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಿದ ಧಾಟಿಗೆ ಇಡಿ ವಿಶ್ವ ಕ್ರೀಡಾ ಅಭಿಮಾನಿಗಳು ಸಲಾಂ ಎಂದಿದ್ದಾರೆ. ಅದರಲ್ಲೂ ಗೋಲ್ ಕೀಪರ್ ಶ್ರೀಜೇಶ್ ಆಡಿದ ಧಾಟಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮಂಗಳವಾರ ಭಾರತ ಜರ್ಮನಿ ವಿರುದ್ಧ ಸೆಮಿಫೈನಲ್‌ನಲ್ಲಿ ಕಾದಾಟವನ್ನು ನಡೆಸಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಿಷ್ಠವಾಗಿವೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಹರ್ಮನ್ ಪ್ರಿತ್ ಬಳಗ ಈ ಒಂದು ಪಂದ್ಯವನ್ನು ಗೆದ್ದು ಪದಕ ಪಕ್ಕಾ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.
ಭಾರತ ಹಾಗೂ ಜರ್ಮನಿ ತಂಡಗಳು ಈಗಾಗಲೇ ಒಟ್ಟು 18 ಬಾರಿ ಮುಖಾಮುಖಿ ಆಗಿವೆ. ಅದರಲ್ಲಿ ಭಾರತ 8 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, ನಾಲ್ಕು ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿದೆ. ಈ ವೇಳೆ ಭಾರತ 41 ಗೋಲು ಬಾರಿಸಿದರೆ, ಎದುರಾಳಿ ಜರ್ಮನಿ 37 ಬಾರಿ ಗೋಲು ಪೆಟ್ಟಿಗೆಯಲ್ಲಿ ಚೆಂಡನ್ನು ನೂಕುವಲ್ಲಿ ಸಫಲವಾಗಿದೆ. ಈ ಎರಡೂ ತಂಡಗಳು ಕಳೆದ ಬಾರಿ ಒಲಿಂಪಿಕ್ಸ್ ಕಂಚಿನ ಪದಕದ ಹೋರಾಟದಲ್ಲಿ ಮುಖಾಮುಖಿ ಆಗಿದ್ದವು. ಇದರಲ್ಲಿ ಭಾರತ 5-4ರಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲೂ ಶ್ರೀಜೇಶ್ ಅಮೋಘ ಪ್ರದರ್ಶನ ನೀಡಿದ್ದರು.

ಭಾರತದ ಸ್ಟಾರ್ ಆಟಗಾರ ಹರ್ಮನ್ ಪ್ರೀತ ಸಿಂಗ್ ಈ ಬಾರಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುವ ಹರ್ಮನ್ ಭಾರತದ ಪರ ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದಿದ್ದ ಭಾರತದ ರಕ್ಷಣಾ ಆಟಗಾರ ಅಮಿತ್ ರೋಹಿದಾಸ್, ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕೆ ಇಳಿಯುವುದಿಲ್ಲ. ಇವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ. ಇವರ ಸ್ಥಾನವನ್ನು ಯಾರು ತುಂಬುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಜರ್ಮನಿ ಸಹ ಈ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾಲ್ಕು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದಿರುವ ಜರ್ಮನಿ 3-2 ರಿಂದ ಅರ್ಜೆಂಟೀನಾ ತಂಡವನ್ನು ಮಣಿಸಿತ್ತು. ಹೀಗಾಗಿ ಅತಿ ಉತ್ಸಾಹದಿಂದ ಕಣಕ್ಕೆ ಇಳಿಯಲಿದೆ. ಮಂಗಳವಾರ ನಡೆಯುವ ಪಂದ್ಯದಲ್ಲೂ ಜಿದ್ದಾಜಿದ್ದಿನ ಕಾದಾಟ ಕಾಣುವ ಸಾಧ್ಯತೆ ಇದೆ.