ಬೆಂಗಳೂರು, ಫೆ. 22 : ವಿಶ್ವಚಾಂಪಿಯನ್ ಹೆಸರಿಗೆ ತಕ್ಕಂತೆ ಆಡಿದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದೆ. ನಿಜಕ್ಕೂ ದಕ್ಷಿಣ ಆಫ್ರಿಕಾದಿಂದ ಪಂದ್ಯವನ್ನು ಕಸಿದುಕೊಂಡಿದ್ದು ಆ ಎರಡು ರನೌಟ್ ಗಳು.
ಆಫ್ರಿಕಾ ನಾಯಕ ಎಬಿ ಡೆವಿಲಿಯರ್ಸ್ ಮತ್ತು ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ಮಿಲ್ಲರ್ ರನೌಟ್ ಗಳು ಪಂದ್ಯದ ದಿಕ್ಕನ್ನೇ ಬದಲಾಯಿಸಿದವು, ಮಿಲ್ಲರ್ ಮತ್ತು ಡೆವಿಲಿಯರ್ಸ್ ಉತ್ತಮ ರನ್ ಗಳಿಸುತ್ತ ಜತೆಯಾಟ ನಿಭಾಯಿಸುತ್ತಿದ್ದರು. ಈ ವೇಳೆ ಇಲ್ಲದ ರನ್ ಕದಿಯಲು ಹೋಗಿ 38 ಎಸೆತಗಳಲ್ಲಿ 30 ನ್ ಗಳಿಸಿದ್ದ ಡೆವಿಲಿಯರ್ಸ್ ರನೌಟ್ ಗೆ ಬಲಿಯಾದರು.[ಮೆಲ್ಬೋರ್ನ್ ನಲ್ಲಿ ಇತಿಹಾಸ ನಿರ್ಮಿಸಿದ ಧೋನಿ ಪಡೆ]

ಮೋಹಿತ್ ಶರ್ಮಾ ಎಸೆದ ಚೆಂಡನ್ನು ವಿಕೆಟ್ ಕೀಪರ್ ಎಂಎಸ್ ಧೋನಿ ಯಾವುದೇ ತಪ್ಪು ಮಾಡದೇ ವಿಕೆಟ್ ಗೆ ತಾಗಿಸಿದ್ದರು. ಪರಿಣಾಮ ಡೆವಿಲಿಯರ್ಸ್ ಫೆವಿಲಿಯನ್ ಸೇರಿಕೊಳ್ಳಬೇಕಾಯಿತು.
ಎರಡು ಬೌಂಡರಿ ಸಿಡಿಸಿ 23 ಎಸೆತಗಳಲ್ಲಿ 22 ರನ್ ಗಳಿಸಿ ಮುನ್ನುಗ್ಗುತ್ತಿದ್ದ ಮಿಲ್ಲರ್ ಅವರು ರನೌಟ್ ಗೆ ಬಲಿಯಾಗಿದ್ದು ಆಫ್ರಿಕಾಕ್ಕೆ ದೊಡ್ಡ ಹೊಡೆತ ನೀಡಿತು. ಬೌಂಡರಿ ಗೆರೆಯಿಂದ ಉಮೇಶ್ ಯಾದವ್ ಎಸೆದ ಅತ್ಯುತ್ತಮ ಥ್ರೋ ವನ್ನು ಅಷ್ಟೇ ಉತ್ತಮವಾಗಿ ಎಂಎಸ್ ಧೋನಿ ವಿಕೆಟ್ ಗೆ ತಾಗಿಸಿದ್ದರು. ಪರಿಣಾಮ ಹರಿಣಗಳು 153ಕ್ಕೆ6 ವಿಕೆಟ್ ಕಳೆದುಕೊಂಡರು. ಇದು ಭಾರತದ ಗೆಲುವಿನ ಹಾದಿ ಮತ್ತಷ್ಟು ಸುಗಮವಾಗುವಂತೆ ಮಾಡಿತು.