ಆಗಸ್ಟ್ 11 ಭಾನುವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚು ಪದಕಗಳನ್ನು ಗೆಲ್ಲುವಲ್ಲಿ ವಿಫಲಾಗಿದ್ದಾರೆ. ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮಾತ್ರ ಏಕೈಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸಿಕ್ಕ ಮೊದಲ ಬೆಳ್ಳಿ ಪದಕವಾಗಿದೆ.
ಭಾರತ ಪರ ಸ್ವಾತಂತ್ರ್ಯ ನಂತರ ಒಲಂಪಿಕ್ಸ್‌ನಲ್ಲಿ ಇದುವರೆಗೆ ಒಟ್ಟು 7 ಆಟಗಾರರು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಆಟಗಾರರ ಸಂಪೂರ್ಣ ಮಾಹಿತಿ ಇಲ್ಲಿದೆ.

1) ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 89.45 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ದಾಖಲಿಸಿದ್ದರು. ಆದರೆ, ಬಂಗಾರದ ಪದಕ ಗೆಲ್ಲುವಲ್ಲಿ ಎಡುವಿ ಎರಡನೇ ಸ್ಥಾನ ಪಡೆದರು. ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್‌ಗಳ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.
2) ಹರಿಯಾಣದ ರವಿಕುಮಾರ್ ದಹಿಯಾ ಅವರು ಕಳೆದ ಬಾರಿಯ ಟೋಕಿಯೊ ಒಲಿಂಪಿಕ್ಸ್ 2020ರ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. ಅವರು ಮೂರು ಪಂದ್ಯಗಳನ್ನು ಸುಲಭವಾಗಿ ಗೆಲ್ಲುವ ಮೂಲಕ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಫೈನಲ್‌ನಲ್ಲಿ ಜೌರ್ ಉಗೇವ್ ವಿರುದ್ಧ ಸೋಲು ಕಂಡರು.
3) 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಣಿಪುರದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಒಟ್ಟು 202 ಕೆಜಿ (ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 115 ಕೆಜಿ) ಭಾರ ಎತ್ತಿ ದಾಖಲೆ ಬರೆದಿದ್ದರು. ಆದರೆ, ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 1 ಕೆಜಿ ಅಂತರದಿಂದ ಕಂಚಿನ ಪದಕವನ್ನೂ ಕಳೆದುಕೊಂಡರು.
4) ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ರಿಯೊ ಒಲಿಂಪಿಕ್ಸ್ 2016ರಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿದ್ದರು. ಈ ಮೂಲಕ ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಆದರೆ, ಫೈನಲ್‌ನಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸಿಂಧು ಪದಕದ ಹತ್ತಿರ ಬರಲು ಸಾಧ್ಯವಾಗಲಿಲ್ಲ.
5) ದೆಹಲಿಯ ಸುಶೀಲ್ ಕುಮಾರ್ ಅವರು ಬೀಜಿಂಗ್ ಒಲಿಂಪಿಕ್ಸ್ 2008ರ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಆದರೆ ಅವರು ನಾಲ್ಕು ವರ್ಷಗಳ ನಂತರ ಲಂಡನ್ ಒಲಿಂಪಿಕ್ಸ್‌ನಲ್ಲಿ ಅದನ್ನು ಬೆಳ್ಳಿಗೆ ಬದಲಾಯಿಸಿದರು. ಎರಡೂ ಬಾರಿ ಅವರು ಪುರುಷರ ಫ್ರೀಸ್ಟೈಲ್ 66 ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದರು. ಈ ಸಂದರ್ಭಗಳಲ್ಲಿ ಸತತ ಎರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಂಡಿದ್ದರು.
6) ಹರಿಯಾಣದ ವಿಜಯ್ ಕುಮಾರ್ ಲಂಡನ್ ಒಲಿಂಪಿಕ್ಸ್ 2012ರಲ್ಲಿ 25 ಮೀಟರ್ ರ್‍ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದರು. ವಿಜಯ್ ಫೈನಲ್‌ನಲ್ಲಿ 30 ಅಂಕಳನ್ನು ಗಳಿಸಿದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾರತ ಮೂರು ಕಂಚಿನ ಪದಕಗಳನ್ನು ಪಡೆದಿದೆ. ಆದರೆ ಒಂದೇ ಒಂದು ಬೆಳ್ಳಿ ಪದಕವನ್ನು ಪಡೆಯಲಿಲ್ಲ.
7) 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್‌ನಲ್ಲಿ ರಾಜಸ್ಥಾನದ ರಾಜ್ಯವರ್ಧನ್ ಸಿಂಗ್ ರಾಥೋಡ್ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎಣಬ ದಾಖಲೆ ಬರೆದಿದ್ದರು.