
ಮಾಧ್ಯಮಗಳಲ್ಲಿ ಧೋನಿ ಬಗ್ಗೆ ಟೀಕೆ
ಸ್ವಿಂಗ್ ಪಿಚ್ ಗಳಲ್ಲಿ ಆಡುವ ಅನುಭವ ಇಲ್ಲದ ತಂಡವನ್ನು ಆಯ್ಕೆ ಮಾಡಿದ್ದು ಮೊದಲ ತಪ್ಪು. ಜೊತೆಗೆ ಧೋನಿ ತಂತ್ರಗಾರಿಕೆ ಸಂಪೂರ್ಣ ವೈಫಲ್ಯ ಕಂಡಿದೆ. ವಿಶ್ವದ ಶ್ರೇಷ್ಠ ಬೌಲರ್ ಗಳಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಎದುರಿಸುವ ಯಾವುದೇ ಸಾಮರ್ಥ್ಯ ಇದ್ದಂತೆ ಕಾಣಲಿಲ್ಲ. ವೇಗ ಹಾಗೂ ಕರಾರ್ ವಾಕ್ ಬೌಲಿಂಗ್ ಮುಂದೆ ಮಂಡಿಯೂರಿದ ಕುರಿಗಳನ್ನು ಸುಲಭವಾಗಿ ಕತ್ತರಿಸಲಾಯಿತು

ವಿರಾಟ್ ಕೊಹ್ಲಿ ಬಗ್ಗೆ ಭಾರಿ ಟೀಕೆ
29.2 ಓವರ್ ಗಳಲ್ಲಿ 94ಕ್ಕೆ ಕುಸಿಯುವ ಭಾರತ ತಂಡದಲ್ಲಿ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡ ವಿರಾಟ್ ಕೊಹ್ಲಿ ಸಪ್ಪೆಯಾಟ ಭಾರಿ ಟೀಕೆಗೆ ಒಳಗಾಗಿದೆ. ದಿ ಇಂಡಿಪೆಂಡೆಂಟ್ ಪತ್ರಿಕೆ ಬರೆಯುತ್ತಾ, ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಿಂದಾಗಿ ಬ್ಯಾಟಿಂಗ್ ಸೌಧವೇ ಕುಸಿದು ಬಿದ್ದಿದೆ ನಾಯಕತ್ವದ ಪ್ರಶ್ನೆ ಹಾಗಿರಲಿ, ಭುವನೇಶ್ವರ್ ಕುಮಾರ್ ಬಿಟ್ಟರೆ ಬ್ಯಾಟಿಂಗ್ ಬಲ್ಲ ಆಟಗಾರರು ಕಾಣಲಿಲ್ಲ ಎನ್ನಲಾಗಿದೆ.

ನವಯುಗದ ತೆಂಡೂಲ್ಕರ್ ಎನ್ನಬೇಡಿ
ಕೆಲವರು ವಿರಾಟ್ ಕೊಹ್ಲಿಯನ್ನು ಎಲ್ಲಾ ಬಗೆಯ ಕ್ರಿಕೆಟ್ ಆಡಬಲ್ಲ ಸಮರ್ಥ ಬ್ಯಾಟ್ಸ್ ಮನ್ ಎಬಿ ಡಿವಿಲೆಯರ್ಸ್ ಗೆ ಹೋಲಿಸಿದರು. ವಿದೇಶಿ ಪಿಚ್ ಗಳಲ್ಲಿ ಭಾರತಕ್ಕೆ ಆಧಾರವಾಗಬಲ್ಲ ಏಕೈಕ ಬ್ಯಾಟ್ಸ್ ಮನ್ ಎಂದರು. ಮತ್ತೆ ಕೆಲವರು ನವಯುಗದ ತೆಂಡೂಲ್ಕರ್ ಎಂದೇ ಕರೆದರು.ಆದರೆ, ವಿರಾಟ್ ಕೊಹ್ಲಿ ಎಲ್ಲವನ್ನೂ ಮಣ್ಣುಗೂಡಿಸಿದರು. ಈ ಸರಣಿಯಲ್ಲಿ 13.40 ರನ್ ಸರಾಸರಿ ಹೊಂದಿದ್ದು, ಜೇಮ್ಸ್ ಆಂಡರ್ಸನ್ ಗಿಂತ 22 ರನ್ ಹೆಚ್ಚಿಗೆ ಹೊಡೆದಿದ್ದಾರೆ ಅಷ್ಟೇ.

ಮೂರು ದಿನಕ್ಕೆ ಟೆಸ್ಟ್ ಗೆಲ್ಲಿಸಿದ ಬೌಲರ್ಸ್
ಐದು ದಿನಗಳ ಟೆಸ್ಟ್ ಪಂದ್ಯ ಕಿಂಗ್ಸ್‌ಸ್ಟನ್ ಓವಲ್‌ನಲ್ಲಿ ಮೂರೇ ದಿನಗಳಲ್ಲಿ ಕೊನೆಗೊಂಡಿದ್ದು, ಭಾರತ ತಂಡ ಎರಡನೆ ಇನಿಂಗ್ಸ್‌ನಲ್ಲಿ ಜೋರ್ಡನ್ (4-18), ಆಂಡರ್ಸನ್(2-16), ಬ್ರಾಡ್(1-22) ಮತ್ತು ವೋಕೆಸ್(1-24) ದಾಳಿಗೆ ಸಿಲುಕಿ 29.2 ಓವರ್‌ಗಳಲ್ಲಿ 94 ರನ್‌ಗಳಿಗೆ ಆಲೌಟಾಯಿತು.

ಎರಡಂಕಿ ದಾಟದ ಬ್ಯಾಟ್ಸ್ ಮನ್ ಗಳು
ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ (ಔಟಾಗದೆ 25) ತಂಡದ ಪರ ಗರಿಷ್ಠ ರನ್ ದಾಖಲಿಸಿದರು. ಬಿನ್ನಿ, ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಅವರನ್ನು ಹೊರತುಪಡಿಸಿದರೆ ತಂಡದ ಸಹ ಆಟಗಾರರು ಎರಡಂಕೆಯ ಸ್ಕೋರ್ ದಾಖಲಿಸುವಲ್ಲಿ ಎಡವಿದರು

ಐದು ನಿಮಿಷ ಕಾಲ ಕ್ರೀಸ್‌ನಲ್ಲಿದ್ದ ಧೋನಿ
ಅಜಿಂಕ್ಯ ರಹಾನೆ ನಿರ್ಗಮನದ ಬಳಿಕ ಕ್ರೀಸ್‌ಗೆ ಆಗಮಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿ ಕೇವಲ ಐದು ನಿಮಿಷ ಕಾಲ ಕ್ರೀಸ್‌ನಲ್ಲಿ ಇದ್ದರು. ಐದು ಎಸೆತಗಳನ್ನು ಎದುರಿಸಿದ ಧೋನಿ ಖಾತೆ ತೆರೆಯುವ ಮೊದಲೇ ವೋಕೆಸ್ ಅವರು ಧೋನಿಗೆ ಪೆವಿಲಿಯನ್ ಹಾದಿ ತೋರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಏಕಾಂಗಿ ಹೋರಾಟ ನಡೆಸಿ ತಂಡದ ಖಾತೆಗೆ 82 ರನ್ ಕೊಡುಗೆ ನೀಡಿದ್ದ ಧೋನಿ ಸೊನ್ನೆ ಸುತ್ತಿದರು.

ಸರಣಿಯಲ್ಲಿ ಆರಂಭಿಕ ಜೋಡಿಯೆ ಸರಿ ಇಲ್ಲ
ಆರಂಭಿಕ ಬ್ಯಾಟಿಂಗ್ ಜೋಡಿ ಕಂಡುಕೊಳ್ಳುವಲ್ಲಿ ಭಾರತ ವಿಫಲವಾಗಿದ್ದು ಸರಣಿ ಸೋಲಿಗೆ ಮತ್ತೊಂದು ಕಾರಣವಾಯಿತು. ಶಿಖರ್ ಧವನ್ ವಿಫಲರಾದ ಮೇಲೆ ತಂಡ ಸೇರಿದ ಗಂಭೀರ್ ಕೂಡಾ ಏನು ಸಾಧನೆ ಮಾಡಲಿಲ್ಲ.
ಮುರಳಿ ವಿಜಯ್(2) ಮತ್ತು ಗೌತಮ್ ಗಂಭೀರ್(3) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ತಂಡದ ಸ್ಕೋರ್ 4.5 ಓವರ್‌ಗಳಲ್ಲಿ 6 ರನ್ ಆಗಿದ್ದಾಗ ವಿಜಯ್ ಅವರನ್ನು ಆಂಡರ್ಸನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. 7ನೆ ಓವರ್‌ನ ಮೊದಲ ಎಸೆತದಲ್ಲಿ ಗಂಭೀರ್ ಅನಗತ್ಯವಾಗಿ ರನ್ ಗಳಿಸಲು ಹೋಗಿ ರನೌಟಾದರು. ಗಂಭೀರ್ ನಿರ್ಗಮಿಸುತ್ತಿದ್ದಂತೆ ಮಳೆ ಬಂದು ಆಟ ಸ್ಥಗಿತಗೊಂಡಿತು.

ವಿರಾಟ್ ಕೊಹ್ಲಿ ಪಂದ್ಯ ಉಳಿಸುವ ಯತ್ನ ವಿಫಲ
ಉಪನಾಯಕ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲುವ ಸೂಚನೆ ನೀಡಿದ್ದರು. ಆದರೆ ಅವರ ವೈಯಕ್ತಿಕ ಸ್ಕೋರ್ 20ಕ್ಕಿಂತ ಮೇಲೇರಲಿಲ್ಲ. ಜೋರ್ಡನ್ ಅವರ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು.

ಜೋ ರೂಟ್ ಅಮೋಘ ಆಟ ಪ್ರದರ್ಶನ
ಎರಡನೆ ದಿನದಾಟದಂತ್ಯಕ್ಕೆ 105 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 385 ರನ್ ಮಾಡಿದ್ದ ಇಂಗ್ಲೆಂಡ್ ತಂಡ ಇಂದು ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 101 ರನ್ ಸೇರಿಸಿತು.
92 ರನ್ ಗಳಿಸಿ ಔಟಾಗದೆ ಉಳಿದಿದ್ದ ಜೋ ರೂಟ್ ಇಂದು ಈ ಮೊತ್ತಕ್ಕೆ 57 ರನ್ ಸೇರಿಸಿದರು. 22ನೆ ಟೆಸ್ಟ್ ಆಡುತ್ತಿರುವ 23ರ ಹರೆಯದ ರೂಟ್ 5ನೆ ಶತಕ ದಾಖಲಿಸಿದರು. 135 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ರೂಟ್ ಶತಕ ಪೂರ್ಣಗೊಳಿಸಿದರು. ಮೊದಲ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದ ರೂಟ್, ಎರಡನೆ,ಮೂರನೆ ಮತ್ತು ನಾಲ್ಕನೆ ಟೆಸ್ಟ್‌ಗಳಲ್ಲಿ ಅರ್ಧಶತಕಗಳನ್ನು ಸಿಡಿಸಿದ್ದರು.

ಯಾವುದೇ ಮ್ಯಾಜಿಕ್ ಪಂದ್ಯ ಉಳಿಸಲಿಲ್ಲ
ಆರ್.ಅಶ್ವಿನ್ (7), ಭುವನೇಶ್ವರ ಕುಮಾರ್(4), ವರುಣ್ ಆ್ಯರನ್(1), ಇಶಾಂತ್ ಶರ್ಮ(2) ಅವರಿಂದ ಯಾವುದೇ ಮ್ಯಾಜಿಕ್ ನಡೆಯಲಿಲ್ಲ. ಇಂಗ್ಲೆಂಡ್ ತಂಡ ಇದಕ್ಕೂ ಮೊದಲು ಪ್ರಥಮ ಇನಿಂಗ್ಸ್‌ನಲ್ಲಿ 486 ರನ್‌ಗಳಿಗೆ ಆಲೌಟಾಗುವ ಮೂಲಕ ಭಾರೀ ಮುನ್ನಡೆ ಪಡೆದಿತ್ತು


Click it and Unblock the Notifications