
ಜಕಾರ್ತಾ, ಆಗಸ್ಟ್ 21 : ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರಲ್ಲಿ 10 ಮೀ ಏರ್ ಪಿಸ್ಟಲ್ ಸ್ಪರ್ಧೆಯಲ್ಲಿ 240.7 ಅಂಕಗಳೊಂದಿಗೆ ಚಿನ್ನ ಗೆದ್ದಿರುವ ಭಾರತದ 16 ವರ್ಷದ ಬಾಲಕ ಸೌರಭ್ ಚೌಧರಿ ದಾಖಲೆ ನಿರ್ಮಿಸಿದ್ದಾರೆ.
ಇದೇ ಸ್ಪರ್ಧೆಯಲ್ಲಿ 29 ವರ್ಷದ ಭಾರತದ ಶೂಟಿಂಗ್ ಪಟು ಅಭಿಷೇಕ್ ವರ್ಮಾ ಅವರು 219.3 ಅಂಕ ಗಳಿಸಿ, 3ನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಇಬ್ಬರು ಶೂಟರ್ ಗಳಿಗೂ ಅಭಿನಂದನೆಗಳು.
ಏಷ್ಯನ್ ಗೇಮ್ಸ್ 2018ರ ವಿಶೇಷಪುಟಕ್ಕಾಗಿ ಕ್ಲಿಕ್ ಮಾಡಿ
ಈ ಸ್ಪರ್ಧೆಯಲ್ಲಿ ಎಲ್ಲರ ಕಣ್ಣು ಹದಿನಾರರ ಹರೆಯದ, ಜ್ಯೂನಿಯರ್ ಶೂಟಿಂಗ್ ವರ್ಲ್ಡ್ ಚಾಂಪಿಯನ್ ಸೌರಭ್ ಚೌಧರಿ ಮೇಲಿತ್ತು. 2018ರ ಜೂನ್ 26ರಂದು ಜ್ಯೂನಿಯರ್ ಶೂಟಿಂಗ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ 243.7 ಅಂಕ ಗಳಿಸಿ ವಿಶ್ವ ದಾಖಲೆ ಸ್ಥಾಪಿಸಿದ್ದರು.
ಈಗ ಜಕಾರ್ತಾದಲ್ಲಿಯೂ ಅಂತಹುದೇ ಅಮೋಘ ಪ್ರದರ್ಶನ ನೀಡಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಸೌರಭ್ ಚೌಧರಿ. ಕ್ವಾಲಿಫಿಕೇಷನ್ ಸುತ್ತಿನಲ್ಲಿಯೇ ಸೌರಭ್ ಚೌಧರಿ ಅವರು 586 ಅಂಕ ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು.
ಯುವ ಶೂಟಿಂಗ್ ಸ್ಟಾರ್ ಗೆ ಈ ವರ್ಷ ಅದ್ಭುತವಾಗಿದೆ. ಜರ್ಮನಿಯಲ್ಲಿ ನಡೆದ ಐಎಸ್ಎಸ್ಎಫ್ ಜ್ಯೂನಿಯರ್ ವರ್ಲ್ಡ್ ಕಪ್ ನಲ್ಲಿ ಚಿನ್ನದ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡಿದ್ದರು. ಇದಕ್ಕೂ ಮೊದಲು 2017 ಡಿಸೆಂಬರ್ ನಲ್ಲಿ ಯುತ್ ಓಲಿಂಪಿಕ್ಸ್ ಗೇಮ್ಸ್ ಗೆ ಕೂಡ ಅವರು 243.1 ಅಂಕ ಪಡೆದು ಚಿನ್ನದ ಪದಕ ಗೆದ್ದಿದ್ದರು.
ಪ್ರಧಾನಿ ಮೋದಿ ಅಭಿನಂದನೆ : 16 ವರ್ಷದ ಸೌರಭ್ ಚೌಧರಿ ಯುವಜನತೆಯಲ್ಲಿ ಎಂಥ ಸಾಮರ್ಥ್ಯ ಇರುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಪ್ರತಿಭಾವಂತ ಬಾಲಕ ಪುರುಷರ 10 ಮೀ. ಏರ್ ಪಿಸ್ಟಲ್ ನಲ್ಲಿ ಚಿನ್ನ ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಶುಭಹಾರೈಸಿದ್ದಾರೆ.