ಪ್ಯಾರಿಸ್ ಒಲಿಂಪಿಕ್ಸ್ ಅಮೋಘ ಪ್ರದರ್ಶನ ನೀಡಿದ ಭಾರತ ಹಾಕಿ ತಂಡ, ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಸ್ಪೇನ್ ತಂಡವನ್ನು ಮಣಿಸಿ, ಪದಕದ ಬೇಟೆ ನಡೆಸಿದೆ. ಒಲಿಂಪಿಕ್ಸ್ ಬಳಿಕ ಟೀಮ್ ಇಂಡಿಯಾ ಯಾವಾಗ ಅಂಗಳಕ್ಕೆ ಇಳಿಯುತ್ತದೆ ಎಂಬ ಪ್ರಶ್ನೆಗೆ ಉತ್ತರ ಲಭಿಸಿದೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಚೀನಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಏಷ್ಯಾದ ಆರು ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಎಲ್ಲರ ಚಿತ್ತ ಭಾರತ-ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದ ಮೇಲೆ ನೆಟ್ಟಿದ್ದಾರೆ.

ಒಲಿಂಪಿಕ್ಸ್ ಬಳಿಕ ಹಾಕಿ ತಂಡ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಂಗಳಕ್ಕೆ ಪ್ರವೇಶಿಸಲಿದೆ. ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ತಂಡಗಳು ಈ ಚಾಂಪಿಯನ್ ಶಿಪ್‌ನಲ್ಲಿ ಕಾದಾಟ ನಡೆಸಲಿವೆ. ಈ ಹೈ-ವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ. ಈ ಟೂರ್ನಿ ಸೆಪ್ಟಂಬರ್ 8 ರಿಂದ 17 ವರೆಗೆ ನಡೆಯಲಿದೆ. ಈ ಟೂರ್ನಿಯ ವೇಳಾಪಟ್ಟಿ ಸೋಮವಾರ ಬಿಡುಗಡೆ ಆಗಿದೆ. ಈ ಟೂರ್ನಿಯನ್ನು ಚೀನಾದ ಹುಲುನ್‌ಬುಯರ್‌ನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಈ ಟೂರ್ನಿಯಲ್ಲಿ ಭಾರತ, ಪಾಕ್, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ ಹಾಗೂ ಆತಿಥೇಯ ಚೀನಾ ತಂಡಗಳು ಕಾದಾಟ ನಡೆಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಸೆಪ್ಟಂಬರ್ 8 ರಂದು ದಕ್ಷಿಣ ಕೊರಿಯಾ ಹಾಗೂ ಜಪಾನ್ ತಂಡಗಳು ಸೆಣಸಾಡಲಿವೆ. ಇದೇ ದಿನದಂದು ಭಾರತ ಹಾಗೂ ಆತಿಥೇಯ ಚೀನಾ ತಂಡಗಳು ಅಂಗಳದಲ್ಲಿ ಕಾದಾಟ ನಡೆಸಲಿವೆ. ಭಾರತ, ಸೆಪ್ಟಂಬರ್ 9 ರಂದು ಜಪಾನ್, ಸೆಪ್ಟೆಂಬರ್ 11 ರಂದು ಮಲೇಷ್ಯಾ, ಸೆಪ್ಟೆಂಬರ್ 12 ರಂದು ದಕ್ಷಿಣ ಕೊರಿಯಾ ಮತ್ತು ನಂತರ ಸೆಪ್ಟೆಂಬರ್ 17 ರಂದು ಪಾಕಿಸ್ತಾನವನ್ನು ಎದುರಿಸಲಿದೆ.

ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಏಕೈಕ ಒಲಿಂಪಿಕ್ಸ್ ಅರ್ಹತೆ ಪಡೆದ ತಂಡ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ. ಹೀಗಾಗಿ ಹರ್ಮನ್ ಪ್ರೀತ್ ಸಿಂಗ್ ಪಡೆ ಈ ಟೂರ್ನಿಯಲ್ಲಿ ವಿಶ್ವಾಸದಿಂದ ಅಂಗಳ ಪ್ರವೇಶಿಸಲಿದೆ. ಇನ್ನು ಕಳೆದ ಬಾರಿಯ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಭಾರತ ಅಲಂಕರಿಸಿದೆ. ಬ್ಲ್ಯೂ ಬಾಯ್ಸ್ ಈ ವರೆಗೆ ನಾಲ್ಕು ಬಾರಿ ಟ್ರೋಫಿಗೆ ಮುತ್ತಿಟ್ಟಿದೆ.
ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ ಅಮಿತ್ ರೋಹಿದಾಸ್ ಅವರಿಗೆ ರೆಡ್ ಕಾರ್ಡ್ ನೀಡಲಾಯಿತು. ಹೀಗಾಗಿ ಎಂಟರ ಘಟ್ಟದ ಪಂದ್ಯದಲ್ಲಿ 10 ಆಟಗಾರರಿಂದ ಆಡ ಬೇಕಾಯಿತು. ಅಲ್ಲದೆ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶ ಪಡೆಯಿತು.
ಉಪಾಂತ್ಯ ಪಂದ್ಯದಲ್ಲಿ ಭಾರತ, ಜರ್ಮನಿಯ ವಿರುದ್ಧ ಸೋಲು ಕಂಡಿತು. ಹೀಗಾಗಿ ಭಾರತ ಬಂಗಾರ ಹಾಗೂ ಬೆಳ್ಳಿ ಪದಕ ಪಡೆಯುವ ಆಸೆಗೆ ಪೆಟ್ಟು ಬಿದ್ದಿತು. ಹೀಗಾಗಿ ಭಾರತ ತಂಡ ಕಂಚಿಗಾಗಿ ಸ್ಪೇನ್ ತಂಡದ ವಿರುದ್ಧ ಕಾದಾಟ ನಡೆಸಬೇಕಾಯಿತು. ಈ ಪಂದ್ಯದಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡಿ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. 1972ರ ನಂತರ ಭಾರತ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕ ಗೆದ್ದಿರುವುದು ಇದೇ ಮೊದಲು.