WFI Eletcions: ಜು.4ರಂದು ಭಾರತ ಕುಸ್ತಿ ಫೆಡರೇಶನ್‌ಗೆ ಚುನಾವಣೆ ನಡೆಸಲು ನಿರ್ಧರಿಸಿದ ಐಒಎ
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರನ್ನು ಜುಲೈ 4ರಂದು ನಡೆಯಲಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಯಾಗಿ ಸೋಮವಾರ, ಜೂನ್ 12ರಂದು ನೇಮಿಸಿದೆ.
ಜೂನ್ 7ರಂದು ಪ್ರತಿಭಟನಾ ನಿರತ ಕುಸ್ತಿಪಟುಗಳೊಂದಿಗಿನ ಸಭೆಯ ನಂತರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು, ಜೂನ್ 30ರೊಳಗೆ ಡಬ್ಲ್ಯುಎಫ್‌ಐ ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ ಈ ಗಡುವನ್ನು ಅನುಸರಿಸುವುದು ಕಷ್ಟ ಎಂದು ತಿಳಿದುಬಂದಿದೆ. ಏಕೆಂದರೆ ಡಬ್ಲ್ಯುಎಫ್‌ಐನ ವಿಶೇಷ ಸಾಮಾನ್ಯ ಸಭೆಗೆ ಕರೆ ನೀಡಲು 21 ದಿನಗಳ ಸೂಚನೆ ಅಗತ್ಯವಿದೆ.

ಕುಸ್ತಿ ಫೆಡರೇಶನ್ ಆಫ್ ಇಂಡಿಯಾಗೆ ಚುನಾವಣೆಗಳನ್ನು ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಅಥವಾ ವಿಶೇಷ ಸಾಮಾನ್ಯ ಸಭೆ (ಎಸ್‌ಜಿಎಂ)ನಲ್ಲಿ ನಡೆಸಬಹುದು.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ನಿರ್ಗಮಿತ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಅವರ ಕುಟುಂಬದ ಯಾವುದೇ ಸದಸ್ಯರು ಅಥವಾ ಸಹವರ್ತಿಗಳನ್ನು ಚುನಾವಣೆಗೆ ಸ್ಪರ್ಧಿಸಲು ಸರ್ಕಾರವು ಅನುಮತಿಸುವುದಿಲ್ಲ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಭರವಸೆ ನೀಡಿದ್ದರು. ಆ ಬಳಿಕ ಕುಸ್ತಿಪಟುಗಳು ಜೂನ್ 15ರವರೆಗೆ ತಮ್ಮ ಪ್ರತಿಭಟನೆಗೆ ವಿರಾಮ ನೀಡಿದ್ದಾರೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಸಿಇಒ ಕಲ್ಯಾಣ್ ಚೌಬೆ ಅವರು ನ್ಯಾಯಮೂರ್ತಿ ಮಿತ್ತಲ್ ಕುಮಾರ್ ಅವರ ನೇಮಕಾತಿಯ ಬಗ್ಗೆ ಮಾತನಾಡಿದ್ದು ಮತ್ತು ಚುನಾವಣಾಧಿಕಾರಿಯ ಜವಾಬ್ದಾರಿಗೆ ಅವರ ಒಪ್ಪಿಗೆಯನ್ನು ಕೋರಿದ್ದಾರೆ.
ಇದೆ ವೇಳೆ, ನ್ಯಾಯಮೂರ್ತಿ ಮಿತ್ತಲ್ ಕುಮಾರ್ ಅವರು ವಿಶೇಷ ಸಾಮಾನ್ಯ ಸಭೆ ಮತ್ತು ಚುನಾವಣೆಯ ದಿನಾಂಕವನ್ನು ಸ್ವತಂತ್ರವಾಗಿ ನಿರ್ಧರಿಸಬಹುದು ಮತ್ತು ಜುಲೈ 4 ಅಥವಾ ಕೆಲವು ದಿನಗಳ ನಂತರ ಚುನಾವಣೆಯನ್ನು ನಡೆಸುವ ಬಗ್ಗೆ ಅವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಮೂಲಗಳು ತಿಳಿಸಿವೆ.
ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ ಮತ್ತು ದೆಹಲಿ ಸೇರಿದಂತೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ 25 ಅಂಗಸಂಸ್ಥೆಗಳನ್ನು ಹೊಂದಿದೆ. ಪ್ರತಿ ರಾಜ್ಯ ಘಟಕವು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಬಹುದು ಮತ್ತು ಪ್ರತಿ ಪ್ರತಿನಿಧಿಯು ಒಂದು ಮತವನ್ನು ಹೊಂದಿರುತ್ತಾರೆ. ಹಾಗಾಗಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಚುನಾವಣೆಯಲ್ಲಿ 50 ಮತಗಳನ್ನು ಒಳಗೊಂಡಿರುತ್ತದೆ.
"ಡಬ್ಲ್ಯುಎಫ್‌ಐ ಕಾರ್ಯಕಾರಿ ಸಮಿತಿಯ ಚುನಾವಣೆಗಳನ್ನು ನಡೆಸಬೇಕಿದೆ ಮತ್ತು ಡಬ್ಲ್ಯುಎಫ್‌ಐನ ಚುನಾವಣೆಗಳನ್ನು ನಡೆಸಲು ನಿಮ್ಮನ್ನು ಚುನಾವಣಾಧಿಕಾರಿಯಾಗಿ ನೇಮಿಸಲು ನಾವು ಸಂತೋಷಪಡುತ್ತೇವೆ. ನೀವು ಒಬ್ಬ ಸಹಾಯಕ ಚುನಾವಣಾಧಿಕಾರಿ ಮತ್ತು ಇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳಬಹುದು," ಎಂದು ಐಒಎ ಸಿಇಒ ಕಲ್ಯಾಣ್ ಚೌಬೆ ಅವರು ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರಿಗೆ ಪತ್ರದಲ್ಲಿ ಹೇಳಿದ್ದಾರೆ.
"ಜುಲೈ 4ರಂದು ಕರೆಯಲಾದ ಡಬ್ಲ್ಯುಎಫ್‌ಐನ ವಿಶೇಷ ಸಾಮಾನ್ಯ ಸಭೆಯಲ್ಲಿ ಚುನಾವಣೆಗಳನ್ನು ನಡೆಸಬೇಕಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ಚುನಾವಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬೇಕಾಗುತ್ತದೆ. ನಿಮ್ಮ ಸ್ವೀಕಾರದ ದೃಢೀಕರಣವನ್ನು ನಾವು ಎದುರು ನೋಡುತ್ತೇವೆ ಮತ್ತು ಜುಲೈನಲ್ಲಿ ಡಬ್ಲ್ಯುಎಫ್‌ಐನ ಚುನಾವಣೆಗಳನ್ನು ಸುಗಮವಾಗಿ ನಡೆಸಬೇಕಿದೆ," ಎಂದು ಕಲ್ಯಾಣ್ ಚೌಬೆ ಪತ್ರದಲ್ಲಿ ತಿಳಿಸಿದ್ದಾರೆ.
ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಸಂವಿಧಾನದ ಪ್ರಕಾರ, ರಾಜ್ಯ ಘಟಕಗಳು ತಮ್ಮ ಕಾರ್ಯಕಾರಿ ಸಂಸ್ಥೆಗಳ ಸದಸ್ಯರಾಗಿರುವ ಪ್ರತಿನಿಧಿಗಳನ್ನು ಮಾತ್ರ ನಾಮನಿರ್ದೇಶನ ಮಾಡಬಹುದು.
ಇನ್ನು ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಸಂಬಂಧಿಸಿದ ಅರ್ಹ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದರೆ ಕುಸ್ತಿಪಟುಗಳ ನಿರ್ಧಾರ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪುತ್ರ ಕರಣ್ ಹಿಂದಿನ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿದ್ದರು ಮತ್ತು ಯುಪಿ ಕುಸ್ತಿ ಅಸೋಸಿಯೇಷನ್‌ನೊಂದಿಗೆ ಕೂಡ ಸಂಬಂಧ ಹೊಂದಿದ್ದಾರೆ. ಅಲ್ಲದೆ ಅವರ ಅಳಿಯ ವಿಶಾಲ್ ಸಿಂಗ್ ಬಿಹಾರ ರಾಜ್ಯ ಕುಸ್ತಿ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಅವರಿಬ್ಬರೂ ರಾಜ್ಯ ಪ್ರತಿನಿಧಿಗಳಾಗಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications