
ದಕ್ಷಿಣ ಭಾರತದ ಕರ್ನಾಟಕ, ತೆಲುಗು ರಾಜ್ಯಗಳು, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಇತ್ತೀಚಿನ ಕೆಲ ತಿಂಗಳುಗಳ ಹಿಂದಷ್ಟೇ ಆನ್‌ಲೈನ್ ಗೇಮಿಂಗ್ ಸಮಾಜಕ್ಕೆ ಮಾರಕ, ಯುವ ಪೀಳಿಗೆಯ ಹಾದಿಯನ್ನು ತಪ್ಪಿಸುತ್ತವೆ ಮತ್ತು ಜೂಜಾಟಕ್ಕೆ ವೇದಿಕೆಗಳಾಗುತ್ತಿವೆ ಎಂಬ ಕಾರಣಗಳನ್ನು ನೀಡಿ ಅವುಗಳನ್ನು ನಿಷೇಧ ಮಾಡಲು ಕಾನೂನನ್ನು ಜಾರಿಗೆ ತಂದಿದ್ದವು.
ತಮ್ಮ ರಾಜ್ಯದ ಜನರ ಹಿತಾಸಕ್ತಿಯ ದೃಷ್ಟಿಯಿಂದ ರಾಜ್ಯ ಸರ್ಕಾರಗಳು ಈ ಹೆಜ್ಜೆಯನ್ನು ಇಟ್ಟಿವೆ ಎಂದು ಸಾರ್ವಜನಿಕರು ಕೂಡ ರಾಜ್ಯ ಸರ್ಕಾರಗಳ ಈ ತೀರ್ಮಾನವನ್ನು ಒಪ್ಪಿಕೊಂಡಿದ್ದರು. ಆದರೆ ಇದೀಗ ನ್ಯಾಯಾಲಯಗಳು ಮಧ್ಯಪ್ರವೇಶಿಸುವಂತೆ ದೇಶದಲ್ಲಿನ ಹಲವಾರು ಪ್ರಮುಖ ಗೇಮಿಂಗ್ ವೇದಿಕೆಗಳೂ ಸೇರಿದಂತೆ ದಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಅಂಗೀಕರಿಸಿದ ಕಾನೂನುಗಳ ವಿರುದ್ಧ ದನಿ ಎತ್ತಿವೆ.
ಇನ್ನು ತಮಿಳುನಾಡು ಸರ್ಕಾರದ ಆನ್‌ಲೈನ್ ಗೇಮಿಂಗ್ ನಿಷೇಧದ ಕಾನೂನನ್ನು ರಾಜ್ಯದ ಉನ್ನತ ನ್ಯಾಯಾಲಯವಾದ ಮದ್ರಾಸ್ ಉಚ್ಚ ನ್ಯಾಯಾಲಯ ರದ್ದುಗೊಳಿಸಿತ್ತು. ಆದರೆ ತಮಿಳುನಾಡು ಸರ್ಕಾರ ತನ್ನ ಕಾನೂನನ್ನು ಮರು ದೃಢೀಕರಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇತ್ತ ಕರ್ನಾಟಕದ ಉಚ್ಚ ನ್ಯಾಯಾಲಯ ಆನ್‌ಲೈನ್ ಗೇಮಿಂಗ್ ನಿಷೇಧದ ಕಾನೂನಿನ ಕುರಿತು ಇನ್ನೂ ತೀರ್ಪು ನೀಡಬೇಕಿದೆ. ಹೀಗಿರುವಾಗಲೇ ವಿವಿಧ ಆನ್‌ಲೈನ್ ಗೇಮಿಂಗ್ ಉದ್ಯಮಗಳು ರಾಜ್ಯ ಸರ್ಕಾರಗಳ ನಡೆಯ ವಿರುದ್ಧ ಪ್ರಶ್ನೆಯನ್ನು ಹಾಕಿದ್ದು ಮುಂದಿನ ದಿನಗಳಲ್ಲಿ ಇದರಿಂದ ಸೃಷ್ಟಿಯಾಗಲಿರುವ ಹಲವಾರು ಉದ್ಯೋಗಾವಕಾಶಗಳಿಗೆ ಈ ರೀತಿಯ ಕಾನೂನುಗಳಿಂದ ಕಲ್ಲು ಬೀಳಲಿದೆ ಎಂಬ ಆತಂಕವನ್ನು ಕೂಡಾ ವ್ಯಕ್ತಪಡಿಸಿವೆ. ಜೊತೆಗೆ ಈ ನಿಷೇಧದ ಕಾನೂನಿನಿಂದ ಕುಶಲತೆಯನ್ನು ಉಪಯೋಗಿಸಿ ಆಡುವಂತಹ ಆಟಗಳ ನಿರ್ನಾಮ ಕೂಡ ಆಗಲಿದ್ದು ಗೇಮಿಂಗ್ ಕುರಿತು ವ್ಯಾಸಾಂಗ ಮಾಡಿರುವ ಅನೇಕ ಪ್ರತಿಭೆಗಳು ನಶಿಸಲಿವೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಇನ್ನು ಈ ಕಾನೂನುಗಳ ಕುರಿತಾಗಿ ಪ್ರತಿಕ್ರಿಯಿಸಿರುವ ವಕೀಲ ಮತ್ತು ಗೇಮಿಂಗ್ ಉದ್ಯಮ ವಿಶ್ಲೇಷಕ ಜೇ ಸಾಯ್ತಾ ಖಾಸಗಿ ಸುದ್ದಿ ವೆಬ್‌ತಾಣವಾದ ಅಲ್ ಜಜೀರಾ ಜೊತೆ ಮಾತನಾಡಿ "ಈ ಕಾನೂನುಗಳನ್ನು ನಿಲ್ಲಲು ಅನುಮತಿಸಿದರೆ, ಅದು ಭಾರತದಲ್ಲಿ ಗೇಮಿಂಗ್ ಕ್ಷೇತ್ರವನ್ನು ದುರ್ಬಲಗೊಳಿಸಬಹುದು" ಎಂದು ಹೇಳಿಕೆ ನೀಡಿದ್ದಾರೆ. ಹಾಗೂ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಪ್ರಕಾರ 2023ರ ವೇಳೆಗೆ ಭಾರತದಲ್ಲಿ 40,000 ಜನರಿಗೆ ಉದ್ಯೋಗ ನೀಡುವ ನಿರೀಕ್ಷೆಯಿರುವ ಉದ್ಯಮದ ಭವಿಷ್ಯವು ಅಪಾಯದಲ್ಲಿದೆಯಂತೆ. ಕೆ ಪಿ ಎಂ ಜಿ ತಿಳಿಸಿರುವ ಪ್ರಕಾರ ಕೊರೊನಾ ಲಾಕ್‌ಡೌನ್ ವೇಳೆಯಲ್ಲಿ ಭಾರತದಾದ್ಯಂತ ಈ ಆನ್‌ಲೈನ್ ಗೇಮಿಂಗ್ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತಾರಗೊಳಿಸಿಕೊಂಡಿದ್ದು ಸುಮಾರು 42 ಕೋಟಿ ಆಟಗಾರರು ಭಾರತದಲ್ಲಿದ್ದಾರೆ ಹಾಗೂ ಈ ಮೂಲಕ ಭಾರತ ಚೀನಾ ನಂತರ ವಿಶ್ವದಲ್ಲಿ ಅತಿಹೆಚ್ಚು ಆನ್‌ಲೈನ್ ಗೇಮರ್‌ಗಳನ್ನು ಹೊಂದಿರುವ ದೇಶವಾಗಿದೆ ಎಂಬುದನ್ನು ತಿಳಿಸಿದೆ. ಹಾಗೂ ಕೌಶಲ್ಯ ಆಧಾರಿತ ಆನ್‌ಲೈನ್ ಆಟಗಳಿಂದ 2023ರ ವೇಳೆಗೆ 3 ಬಿಲಿಯನ್ ಡಾಲರ್‌ಗಳಷ್ಟು ಆದಾಯ ಭಾರತದಲ್ಲಿಯೇ ಬರಲಿದೆ ಎಂಬ ನಿರೀಕ್ಷೆಯೂ ಇದೆ ಎಂಬ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದೆ.
ಇದೇ ಸಮಯದಲ್ಲಿ ಬೀಜಿಂಗ್ ಕೂಡ ಈ ಆನ್‌ಲೈನ್ ಗೇಮಿಂಗ್ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದು, ಒಟ್ಟಾರೆ ಜಾಗತಿಕವಾಗಿ ಗೇಮಿಂಗ್ ಉದ್ಯಮದ ಮೇಲೆ ಹೊಡೆತ ಬೀಳಲಿದೆ. ಅದರಲ್ಲಿಯೂ ಭಾರತದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ರೀತಿಯ ಹಲವು ಪ್ರಸಿದ್ಧ ಕ್ರೀಡಾಪಟುಗಳನ್ನು ರಾಯಭಾರಿಗಳನ್ನಾಗಿ ನೇಮಿಸಿಕೊಂಡಿರುವ ಪೋಕರ್‌ಸ್ಟಾರ್ ರೀತಿಯ ಹಲವಾರು ಉದ್ಯಮಗಳಿಗೆ ಹಿನ್ನಡೆಯುಂಟಾಗಲಿದೆ.
ಇನ್ನು ಭಾರತದ ಖ್ಯಾತ ಪೋಕರ್ ಆಟಗಾರ್ತಿ ನಿಕಿತಾ ಲೂಥರ್ ಕೂಡ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು "ಜನರಿಗೆ ಇದು ಅರ್ಥ ಆಗುವುದಿಲ್ಲ. ಆದರೆ ಪೋಕರ್ ಚಾಂಪಿಯನ್‍ಶಿಪ್ 16 ಗಂಟೆಗಳ ಕಾಲ ಕೇವಲ 5 ನಿಮಿಷದ ವಿರಾಮದೊಂದಿಗೆ ನಡೆಯಲಿದ್ದು, ಇದನ್ನು ಆಡಲು ಟನ್ನುಗಟ್ಟಲೆ ಸಾಮರ್ಥ್ಯ ಬೇಕು" ಎಂದು ಹೇಳಿಕೆ ನೀಡಿದ್ದಾರೆ. ಇನ್ನು ನಿಕಿತಾ ಈ ಆಟವನ್ನು ಅನೇಕ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಿ ಅಭ್ಯಾಸ ನಡೆಸಿದ್ದು, ಗಂಟೆಗಟ್ಟಲೆ ಯೋಗ ಮತ್ತು ಧ್ಯಾನ ಮಾಡಿ ಆಟಕ್ಕಾಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ನಿಕಿತಾ ಲೂಥರ್ ಈ ಆನ್‌ಲೈನ್ ಪೋಕರ್ ಆಟದಲ್ಲಿ ಕಡಗ ಗೆದ್ದ ಭಾರತದ ಪ್ರಥಮ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಹಾಗೂ ಇನ್ನೂ ಮುಂದುವರಿದು ಮಾತನಾಡಿರುವ ಆಕೆ ಪೋಕರ್ ರೀತಿಯ ಕೌಶಲ್ಯ ಆಧಾರಿತ ಆಟಗಳು ಜೂಜು ಎಂದಾದರೆ ದೇಶದಲ್ಲಿನ ಹಲವಾರು ವಿದ್ಯಾಸಂಸ್ಥೆಗಳು ಪೋಕರ್ ಆಟವನ್ನು ವಿದ್ಯಾಭ್ಯಾಸದ ರೂಪದಲ್ಲಿ ಕಲಿಸುತ್ತಾ ಎಂಬ ಗಂಭೀರ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಇನ್ನು ಆನ್‌ಲೈನ್ ಗೇಮಿಂಗ್ ಉದ್ಯಮಗಳು ಆಂಧ್ರಪ್ರದೇಶದಲ್ಲಿ ನಡೆದ ಬ್ಯಾಂಕ್ ದರೋಡೆ ಮತ್ತು ತಮಿಳುನಾಡಿನಲ್ಲಿ ಉಂಟಾದ ಸರಣಿ ಆತ್ಮಹತ್ಯೆಗಳು ರಮ್ಮಿ ಆಟದಿಂದ ನಡೆದಿದ್ದೇ ಹೊರತು ಪೋಕರ್ ಆಟದಿಂದಲ್ಲ ಎಂದು ವಾದಿಸುತ್ತಿವೆ. ಸದ್ಯ ಜೂಜಾಟದ ಆಟಗಳನ್ನು ನಿಷೇಧಿಸಲು ರಾಜ್ಯ ಸರ್ಕಾರಗಳು ಇಟ್ಟಿರುವ ಹೆಜ್ಜೆಯಿಂದ ಕೌಶಲ್ಯದ ಆಧಾರದ ಮೇಲೆ ಆಡುವ ಹಲವಾರು ಆಟಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಶ್ನೆ ಎತ್ತಿರುವ ಗೇಮಿಂಗ್ ಉದ್ಯಮಗಳಿಗೆ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ಕಹಿಯಾಗುತ್ತಾ ಅಥವಾ ಸಿಹಿ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಒಂದುವೇಳೆ ತಮಿಳುನಾಡು ಸರ್ಕಾರ ಮರುದೃಢೀಕರಿಸಲು ಇಟ್ಟಿರುವ ಗೇಮಿಂಗ್ ನಿಷೇಧದ ಕಾನೂನನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದರೆ ದೇಶದಲ್ಲಿ ಆನ್‌ಲೈನ್ ಗೇಮಿಂಗ್ ಉದ್ಯಮಗಳ ಅಂತ್ಯವಾಗುವುದಂತೂ ಖಚಿತ ಎನ್ನಬಹುದು.