ಅಜರ್‌ಜೈಜಾನ್ ರಾಜಧಾನಿ ಬಾಕುವಿನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದುಕೊಂಡಿದೆ. ಕನ್ನಡತಿ ದಿವ್ಯಾ ಟಿಎಸ್ ಹಾಗೂ ಸರಬ್‌ಜೋತ್ ಸಿಂಗ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಗೆದ್ದು ಈ ಸಾಧನೆ ಮಾಡಿದ್ದಾರೆ. ಸರ್ಬಿಯಾದ ಎದುರಾಳಿಗಳಾದ ದಮಿರ್ ಹಾಗೂ ಜೊರೊನಾ ಜೋಡಿಯ ವಿರುದ್ಧ ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸಿದ ಭಾರತೀಯ ಜೋಡಿ 16-14 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅಂದಹಾಗೆ ಈ ಫೈನಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳಾದ ದಿವ್ಯಾ ಹಾಗೂ ಸರಬ್‌ಜೋತ್ ಸಿಂಗ್‌ಗೆ ಭಾರ ಪೈಪೋಟಿ ಎದುರಾಗಿತ್ತು. ಒಂದು ಹಂತದಲ್ಲಿ ಸ್ಪರ್ಧೆ 14-14 ಅಂಕಗಳಿಂದ ಸಮಬಲದಲ್ಲಿತ್ತು. ಆದರೆ ಅಂತಿಮ ಸುತ್ತಿನ ಪ್ರಯತ್ನದಲ್ಲಿ ಭಾರತೀಯ ಜೋಡಿ ನಿಖರ ಗುರಿಯಿಡುವಲ್ಲಿ ಯಶಸ್ವಿಯಾದರು.

ಅಂತಿಮ ಸುತ್ತಿನಲ್ಲಿ ಸರಬ್ಜೋತ್ 10.6 ಅಂಕಗಳಿಸಿದರೆ ದಿವ್ಯಾ 9.9 ಪಾಯಿಂಟ್ಸ್‌ಗೆ ಗುರಿಯಿಟ್ಟರು. ಇದಕ್ಕೆ ಪ್ರತಿಯಾಗಿ ಸರ್ಬಿಯದ ದಾಮಿರ್ 10.3 ಪಾಯಿಂಟ್ಸ್ ಗಳಿಸಿದರೆ ಜೊರಾನಾ ಎಡವಿದರು. ಜೊರಾನಾ 8.6 ಪಾಯಿಂಟ್ಸ್ ಮಾತ್ರ ಗಳಿಸಿ ಕಾರಣ ಭಾರತದ ಜೋಡಿಗೆ ಚಿನ್ನ ಒಲಿಯಿತು.
ಇನ್ನು ISSF ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಕನ್ನಡತಿ ದಿವ್ಯಾ ಟಿಎಸ್ ಮೂಲತಃ ಕೋಲಾರದ ಶ್ರೀನಿವಾಸಪುರ ತಾಲೋಕಿನ ತಾಡಿಗೋಳ್ ಗ್ರಾಮದವರಾಗಿದ್ದಾರೆ. ಇವರಿಗೆ ಇದು ಐಎಸ್‌ಎಸ್‌ಎಫ್ ವಿಶ್ವಕಪ್‌ನ ಮೊದಲ ಚಿನ್ನದ ಪದಕ. ಇನ್ನು ಛತ್ತೀಸ್‌ಘಡ ಮೂಲದ ಸರಬ್‌ಜೋತ್ ಸಿಂಗ್ ಈ ಹಿಂದೆ ಮಾರ್ಚ್‌ನಲ್ಲಿ ಭೋಪಾಲ್‌ನಲ್ಲಿ ನಡೆದಿದ್ದ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು. ಸರಬ್ಜೋತ್ ಸಿಂಗ್‌ಗೆ ಇದು 2ನೇ ISSF ವಿಶ್ವಕಪ್ ಚಿನ್ನದ ಪದಕ.
ಭಾರತ ಒಂದು ಚಿನ್ನ ಮತ್ತು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೀನಾ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಈವರೆಗೆ ಒಂದು ಚಿನ್ನ ಮತ್ತು ಬೆಳ್ಳಿ ಪದಕದೊಂದಿಗೆ ತನ್ನ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂದಿನ ಮೂರು ದಿನಗಳ ಕಾಳ ಈ ಸ್ಪರ್ಧೆ ಮುಂದುವರಿಯಲಿದ್ದು ಈ ಸ್ಪರ್ಧೆಯಲ್ಲಿ ಇನ್ನೂ ಆರು ಚಿನ್ನದ ಪದಕಗಳಿಗಾಗಿ ಪೈಪೊಟಿ ನಡೆಯಲಿದೆ.