
ಮಥುರಾ: 23ರ ಹರೆಯದವರಾಗಿದ್ದಾಗ ಹರಿ ಓ ಶುಕ್ಲಾ ಎಂಬ ಇವರು ಜೂನಿಯರ್ ಮತ್ತು ಸೀನಿಯರ್ ವಿಭಾಗಗಳ ಕರಾಟೆಯಲ್ಲಿ ಸುಮಾರು 60 ಪದಕಗಳನ್ನು ಗೆದ್ದಿದ್ದರು. ಅದೇ ಶುಕ್ಲಾಗೆ ಈಗ 28ರ ಹರೆಯದ. ಬದುಕಿನ ಬಂಡಿ ಎಳೆಯೋದಕ್ಕಾಗಿ ಶುಕ್ಲಾ ಈಗ ಮಥುರಾ ಜಿಲ್ಲೆಯಲ್ಲಿ ಟೀ ಮಾರುವ ಕಾಯಕ ನಡೆಸುತ್ತಿದ್ದಾರೆ.
ಕ್ರೀಡಾಪಟುವಾಗಿ ಮಿಂಚಿದ್ದ ಕೇವಲ 5 ವರ್ಷಗಳಲ್ಲಿ ಹರಿ ಓ ಶುಕ್ಲಾ ಟೀ ಮಾರಿ ಬಂದ ಹಣದಿಂದ ಬಿಡಿಗಾಸು ಎಣಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಶುಕ್ಲಾ ಅವರು ಹಲವಾರು ಖಾಸಗೀ ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಅಲೆದಾಡಿದ್ದಾರೆ. ಸರ್ಕಾರಿ ಉದ್ಯೋಗಕ್ಕೂ ಪರದಾಡಿದ್ದಾರೆ. ಆದರೆ ಯಾವುದೂ ಕೈ ಹಿಡಿದಿಲ್ಲ.
'ಇದೆಲ್ಲ ಈಗ ಕನಸಾಗಿ ಕಾಣುತ್ತಿದೆ. ಇದಕ್ಕೂ ಮುನ್ನ ನಾನು ಖಾಸಗೀ ವಿದ್ಯಾಭ್ಯಾಸ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ನನಗೆ ನನ್ನ ಆಸಕ್ತಿಯ ಕ್ಷೇತ್ರಕ್ಕೆ ನೆರವೂ ಸಿಗುತ್ತಿತ್ತು. ಆದರೆ ಆ ಬಳಿಕ ಅವರು ನನಗೆ ಹಣ ನೀಡೋದನ್ನು ನಿಲ್ಲಿಸಿದರು. ಬಳಿಕ ನಾನು ಶಾಲಾ ಮಕ್ಕಳಿಗೆ ಕರಾಟೆ ಹೇಳಿ ಕೊಡುತ್ತಿದ್ದೆ. ಆದರೆ ಲಾಕ್‌ಡೌನ್ ಕಾರಣ ಆ ಕೆಲಸವೂ ನಿಂತಿದೆ. ಹೀಗಾಗಿ ಬದುಕಿನ ಅನಿವಾರ್ಯತೆಗೆ ನಾನು ಟೀ ಮಾರುತ್ತಿದ್ದೇನೆ,' ಎಂದು ಶುಕ್ಲಾ ಹೇಳಿದ್ದಾರೆ.
ಶುಕ್ಲಾ ತಂದೆ ಟೀ ಸ್ಟಾಲ್ ನಡೆಸುತ್ತಿದ್ದಾರೆ. ಹೀಗಾಗಿ ಶುಕ್ಲಾ ಕೂಡ ತನ್ನ ತಂದೆ ಜೊತೆ ಟೀ ಮಾರುವ ಕೆಲಸದಲ್ಲಿ ಕೈ ಸೇರಿಸುತ್ತಿದ್ದಾರೆ. ತಂದೆ-ತಾಯಿ, ಪತ್ನಿಯ ಜೊತೆಯಿರುವ ಶುಕ್ಲಾಗೆ 2 ವರ್ಷದ ಮಗನಿದ್ದಾನೆ. ಈ ಮೊದಲು ಶುಕ್ಲಾ ಅವರು ಮಥುರಾ ಎಂಪಿ ಹೇಮಾ ಮಾಲಿನಿ (ಬಿಜೆಪಿ) ಮತ್ತು ಇಂಥನ ಸಚಿವ ಶ್ರೀಕಾಂತ್ ಶರ್ಮಾ ಅವರನ್ನು ಭೇಟಿಯಾಗಿದ್ದಾರಂತೆ. ಆದರೆ ಯಾವುದೇ ಸಹಾಯ ಆಗಲಿಲ್ಲ ಎಂದು ಶುಕ್ಲಾ ಹೇಳುತ್ತಿದ್ದಾರೆ.