ಒಲಿಂಪಿಕ್ಸ್ ಕ್ರೀಡಾ ಕೂಟ ಇತ್ತೀಚಿಗೆ ಮುಗಿದಿದೆ. ಈ ಕ್ರೀಡಾ ಕೂಟದಲ್ಲಿ ಭಾರತದ 117 ಜನ ಅಥ್ಲೀಟ್‌ಗಳು ಭಾಗವಹಿಸಿದ್ದರು. ಅದರಲ್ಲಿ 9ಕ್ಕೂ ಹೆಚ್ಚು ಜನ ಕನ್ನಡದವರು ಇದ್ದರು. ಅದರಲ್ಲಿ ಎಲ್ಲರ ಚಿತ್ತವನ್ನು ಕದ್ದ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್. ತನ್ನ ಚಿಕ್ಕ ವಯಸ್ಸಿನಲ್ಲೇ ಅರ್ಚನಾ ಒಲಿಂಪಿಕ್ಸ್ ಅಖಾಡದಲ್ಲಿ ಹೆಸರು ಮಾಡಿದ ಕನ್ನಡತಿ. ಈಗ ಇವರ ಆ ಒಂದು ನಿರ್ಧಾರ ಕ್ರೀಡಾ ಲೋಕವನ್ನು ಅಚ್ಚರಿ ಗೊಳಿಸಿದೆ.
ಅರ್ಚನಾ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಕ್ರೀಡಾ ವೃತ್ತಿಜೀವನಕ್ಕೆ ಗುಡ್‌ಬೈ ಹೇಳಲು ಮುಂದಾಗಿದ್ದಾರೆ. ಅರ್ಚನಾ ಈಗ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರವನ್ನು ಕಲಿಯಲು ಬಯಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಅರ್ಚನಾ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಮಹಿಳಾ ಟೇಬಲ್ ಟೆನಿಸ್ ತಂಡದಲ್ಲಿ ಅವರು ಕ್ವಾರ್ಟರ್ ಫೈನಲ್ ತಲುಪಿದ್ದರು. ಇದು ಒಲಿಂಪಿಕ್ಸ್‌ನಲ್ಲಿ ಇದುವರೆಗಿನ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.
ಈ ನಿರ್ಧಾರದ ಬಗ್ಗೆ ಅರ್ಚನಾ ಅವರ ತಂದೆ ಮಾತನಾಡಿದ್ದಾರೆ. ನಮಗೆ ಅವಳ ನಿರ್ಧಾರದ ಬಗ್ಗೆ ಯಾವುದೇ ಬೇಸರವಿಲ್ಲ. 15 ವರ್ಷಗಳ ಕಾಲ ಕ್ರೀಡೆಯನ್ನು ಆಡಿದ್ದಾಳೆ. ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಅವಳಿಗೆ ಮೊದಲಿನಿಂದಲೂ ಅಧ್ಯಯದ ಬಗ್ಗೆ ಹೆಚ್ಚಿನ ಆಸಕ್ತಿ ಇದೆ ಎಂದು ತಿಳಿಸಿದ್ದಾರೆ.
ಅರ್ಚನಾ ಅರ್ಥಶಾಸ್ತ್ರದಲ್ಲಿ ಪದವಿಯ ಹೊರತಾಗಿ, ಅವರು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಮಾಡಿದ್ದಾರೆ. ಅರ್ಚನಾ ಸಂದರ್ಶನವೊಂದರಲ್ಲಿ ನಾಸಾದಲ್ಲಿ ಕೆಲಸ ಮಾಡುತ್ತಿರುವ ತನ್ನ ಸಹೋದರನನ್ನು ರೋಲ್ ಮಾಡೆಲ್ ಎಂದು ತಿಳಿಸಿದ್ದಾರೆ.