ಖೇಲೊ ಇಂಡಿಯಾ ಆದಿವಾಸಿ ಕ್ರೀಡೆಗಳು ರಾಯಪುರದಲ್ಲಿ ನಡೆಯುತ್ತಿವೆ. ಈ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟು ಮಣಿಕಂಠ ಅಮೋಘ ಪ್ರದರ್ಶನ ನೀಡಿದ್ದಾರೆ. ಹಲವು ಬಂಗಾರದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ. ಮಣಿಕಂಠ ಈ ಸ್ಪರ್ಧೆಯಲ್ಲಿ ಮಿಂಚು ಹರಿಸಿದ್ದಾರೆ. ಈಗಾಗಲೇ 8 ಬಂಗಾರವನ್ನು ಪಡೆದಿರುವ ಮಣಿಕಂಠ, 9ನೇ ಸ್ವರ್ಣ ಪದಕದ ಗುರಿ ಹೊಂದಿದ್ದಾರೆ. ಇಷ್ಟೇ ಅಲ್ಲದೆ ಇವರು ಒಂದು ಬೆಳ್ಳಿ ಪದಕವನ್ನು ಸಹ ಗೆದ್ದಿದ್ದಾರೆ.
ನಿಜಕ್ಕೂ ಮಣಿಕಂಠ ಕ್ರೀಡಾಕೂಟದಲ್ಲಿ ಸ್ಟಾರ್ ರೀತಿ ಕಾಣಿಸಿಕೊಂಡಿದ್ದಾರೆ. ಅವರು ಪೋಡಿಯಂ ಏರಿ ಪದಕವನ್ನು ಹಾಕಿಸಿಕೊಳ್ಳುವಷ್ಟರಲ್ಲಿ ಇನ್ನೊಂದು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಇವರು ಪರಿಣಿತಿ ಹೊಂದಿದ್ದರೂ ಸಹ ಈಗ ನಾಲ್ಕೂ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಬ್ಯಾಕ್‌ಸ್ಟ್ರೋಕ್, ಬಟರ್‌ಫ್ಲೈ, ಫ್ರೀಸ್ಟೈಲ್‌ನಲ್ಲೂ ಈಗ ಮಣಿಕಂಠ ಈಜುಕೊಳ ಪ್ರವೇಶಿಸುತ್ತಿದ್ದಾರೆ.

ಮಣಿಕಂಠ ಈ ಬಗ್ಗೆ ಮಾತನಾಡಿದ್ದು, ಒಂದು ಸ್ಪರ್ಧೆಯಿಂದ ಇನ್ನೊಂದು ಸ್ಪರ್ಧೆಗೆ ಹೊಂದಿಕೊಳ್ಳುವುದು ತುಸು ಕಷ್ಟ. ಅಲ್ಲದೆ ವಿಭಿನ್ನ ತಂತ್ರಗಾರಿಕೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಈ ಸ್ಪರ್ಧೆಗಳ ನಡುವಿನ ಅಂತರ ಸಹ ಕಡಿಮೆ ಇರುತ್ತಿತ್ತು. ಇದು ಸಹ ನಿಜಕ್ಕೂ ಸವಾಲು ಆಗಿತ್ತು ಎಂದು ತಿಳಿಸಿದ್ದಾರೆ.
ದಿನಕ್ಕೆ ಸದ್ಯ ಆರು ರೇಸ್ ಶೆಡ್ಯೂಲ್ ನಡೆಯುತ್ತಿದೆ. ಕರ್ನಾಟಕದ ಈಜು ಪಟು ಸದ್ಯಕ್ಕಂತೂ ಎಲ್ಲ ರೇಸ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಮೂರು ದಿನಗಳ ಖೇಲೊ ಇಂಡಿಯಾ ಆದಿವಾಸಿ ಕ್ರೀಡಾಕೂಟದಲ್ಲಿ ಮಣಿಕಂಠ ಪೋಡಿಯಂ ಹಾಗೂ ಈಜುಕೊಳಕ್ಕೆ ಇಳಿಯುವಲ್ಲೇ ಸುಸ್ತಾಗಿದ್ದರು. ಇವರು ಮೂರನೇ ದಿನದಂದು 50 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ವರ್ಣ ಪಡೆಯುವಲ್ಲಿ ವಿಫಲರಾದರು.
ಸ್ಪರ್ಧೆಯ ಬಗ್ಗೆ ಮಾತನಾಡಿರುವ ಅವರು, ನಾನು ನೀರಿಗೆ ಇಳಿದಾಗ ಕೊಂಚ ಭಯಪಟ್ಟಂತೆ ಆಯಿತು. ಬಳಿಕ ನಾನು ವೇಗವನ್ನು ಹೆಚ್ಚಿಸಿಕೊಂಡಿದ್ದೇನೆ. ಇದೇ ಮೊದಲ ಬಾರಿಗೆ ನಾನು ಹಲವು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಖುಷಿ ತಂದಿದೆ ಎಂದಿದ್ದಾರೆ.
ಇದಕ್ಕೂ ಮೊದಲು ಮಣಿಕಂಠ ಅವರು ಜೈಪುರದಲ್ಲಿ ನಡೆದಿದ್ದ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲೂ 2 ವೈಯಕ್ತಿಕ ಹಾಗೂ 2 ಗುಂಪು ವಿಭಾಗದಲ್ಲಿ ಬಂಗಾರ ಗೆದ್ದು ಸಾಧನೆ ಮಾಡಿದ್ದರು. ಮಣಿಕಂಠ ಅವರು 2019ರಲ್ಲಿ ಬಟರ್‌ಫ್ಲೈ ವಿಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಆದರೆ ಗಾಯದ ಸಮಸ್ಯೆಯಿಂದ ಅವರು ತಮ್ಮ ವಿಭಾಗವನ್ನು ಬದಲಿಸಬೇಕಾಯಿತು.
ಈ ಕ್ರೀಡಾಕೂಟಕ್ಕೆ ನಡೆಸಿದ ತಯಾರಿಯ ಬಗ್ಗೆಯೂ ಮಣಿಕಂಠ ಮಾತನಾಡಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ನಾನು ಗುರಿಯನ್ನು ಗಮನದಲ್ಲಿಟ್ಟುಕೊಂಡು ಕಠಿಣ ಅಭ್ಯಾಸ ಮಾಡಿದ್ದೇನೆ. ಹೀಗಾಗಿಯೇ ನಾನು ಇಲ್ಲಿ ಈ ಒಂಬತ್ತು ಸ್ಪರ್ಧೆಗಳಲ್ಲಿ ಉತ್ತಮವಾಗಿ ಸ್ಪರ್ಧಿಸಲು ಸಾಧ್ಯವಾಯಿತು. ಏಷ್ಯನ್ ಕ್ರೀಡಾಕೂಟದ ತಂಡಕ್ಕೆ ಸೇರುವುದು ತುಂಬಾ ಕಷ್ಟ ಎಂಬ ಅರಿವು ಇದ್ದು, ಅದನ್ನು ಇಷ್ಟ ಪಟ್ಟು ಮಾಡುವ ಆಸೆ ನನ್ನದಿದೆ. ಈಜು ಸಾಧನೆಯ ಆಧಾರದ ಮೇಲೆ ಒಂದು ದಿನ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಪಡೆಯುವ ಭರವಸೆ ಮಣಿಕಂಠ ಅವರದ್ದಾಗಿದೆ.
ಈ ವರೆಗೆ ಮಣಿಕಂಠ ಅವರು 20 ಖೇಲೊ ಇಂಡಿಯಾ ಪದಕವನ್ನು ಪಡೆದಿದ್ದಾರೆ. ಇದರಲ್ಲಿ 2 ಬೆಳ್ಳಿ, 1 ಕಂಚಿನ ಪದಕ ಸೇರಿದೆ.