ಖೋ ಖೋ ವಿಶ್ವಕಪ್ 2025ರ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಮಿಂಚಿನ ಪ್ರದರ್ಶನ ನೀಡುತ್ತಿದೆ. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇರಾನ್ ತಂಡವನ್ನು 84 ಅಂಕಗಳಿಂದ ಸೋಲಿಸುವ ಮೂಲಕ ಭಾರತ ಮಹಿಳಾ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಆರಂಭಿಕ ಸೆಕೆಂಡುಗಳಿಂದಲೇ ಪ್ರಾಬಲ್ಯ ಸಾಧಿಸಿತು. ಈ ಮೂಲಕ ತಮ್ಮ ಗುಂಪಿನಲ್ಲಿ ಭಾರತ 100-16 ಅಂಕಗಳನ್ನು ಗಳಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಮಂಗಳವಾರ ದಕ್ಷಿಣ ಕೊರಿಯಾ ವಿರುದ್ಧ ಭಾರತ 175-18 ಅಂತರದ ಐತಿಹಾಸಿಕ ಗೆಲುವು ಕಂಡಿತ್ತು. ಇದೀಗ ಇರಾನ್ ತಂಡವನ್ನು 84 ಅಂಕಗಳಿಂದ ಸೋಲಿಸುವ ಮೂಲಕ ಭಾರತ ಮಹಿಳಾ ತಂಡ ಕ್ವಾರ್ಟರ್ ಫೈನಲ್ ತಲುಪಿದೆ. ಅಲ್ಲದೆ, ಪ್ರಶಸ್ತಿ ಎತ್ತಿ ಹಿಡಿಯುವ ತಂಡವಾಗಿದೆ.

ಭಾರತ ಆಕ್ರಮಣಕಾರಿ ಆಟದೊಂದಿಗೆ ಪಂದ್ಯವನ್ನು ಆರಂಭಿಸಿತು. ಇರಾನ್‌ನ ಮೊದಲ ಬ್ಯಾಚ್ ಅನ್ನು 33 ಸೆಕೆಂಡುಗಳಲ್ಲಿ ಔಟ್ ಮಾಡಿತು. ಅಶ್ವಿನಿ ದಾಳಿಯನ್ನು ಮುನ್ನಡೆಸಿದರೆ, ಮೀನು ಬಹು ಟಚ್ ಪಾಯಿಂಟ್‌ಗಳೊಂದಿಗೆ ತನ್ನ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದರು. ಭಾರತವು ಟರ್ನ್ 1 ರಲ್ಲಿ ಪ್ರಭಾವಶಾಲಿ 50 ಅಂಕಗಳನ್ನು ಗಳಿಸಲು ಸಹಾಯ ಮಾಡಿತು.
ನಾಲ್ಕು ಟರ್ನ್‌ಗಳಲ್ಲಿ ಭಾರತದ ಆಕ್ರಮಣವು ಮುಂದುವರೆಯಿತು. ಟರ್ನ್ 3 ರಲ್ಲಿ 6-ನಿಮಿಷ-8-ಸೆಕೆಂಡ್ ಡ್ರೀಮ್ ರನ್ ಮೂಲಕ ಪಂದ್ಯವನ್ನು ಭಾರತ ವಶಪಡಿಸಿಕೊಂಡಿತು. ವಜೀರ್ ನಿರ್ಮಲಾ ಅವರ ರಣತಂತ್ರ ಮತ್ತು ನಾಯಕಿ ಪ್ರಿಯಾಂಕಾ ಇಂಗಲ್, ನಿರ್ಮಲಾ ಭಾಟಿ ಮತ್ತು ನಸ್ರೀನ್ ತಂಡಕ್ಕೆ ಹೆಚ್ಚಿನ ಅಂಕಗಳನ್ನು ತಂದು ಕೊಟ್ಟರು. ಇದರೊಂದಿಗೆ ಟೀಮ್ ಇಂಡಿಯಾ ಮತ್ತೊಂದು ಭರ್ಜರಿ ಗೆಲುವಿನೊಂದಿಗೆ ತಮ್ಮ ಚಾಂಪಿಯನ್‌ಶಿಪ್ ಅರ್ಹತೆಯನ್ನು ಪ್ರದರ್ಶಿಸಿತು. ಈ ಮೂಲಕ ಟೂರ್ನಿಯಲ್ಲಿ ಯಾವುದಾದರೂ ತಂಡ ಚಾಂಪಿಯನ್ ಆಗಬೇಕಿದ್ದರೆ, ಸೋಲಿಸಬೇಕಾದ ಏಕೈಕ ತಂಡ ಟೀಮ್ ಇಂಡಿಯಾ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಈ ಪಂದ್ಯದಲ್ಲಿ ಅತ್ಯುತ್ತಮ ಅಟಾಕ್ಯರ್ ಪ್ರಶಸ್ತಿಯನ್ನು ಮೊಬಿನಾ ಪಡೆದರೆ, ಪಂದ್ಯದ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ ಮೀನು ಹಾಗು ಪಂದ್ಯಶ್ರೇಷ್ಠ ಆಟಗಾರ್ತಿ ಪ್ರಶಸ್ತಿಯನ್ನು ಪ್ರಿಯಾಂಕಾ ಇಂಗಲ್ ಸ್ವೀಕರಿಸಿದ್ದಾರೆ.
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತ ಪುರುಷರ ಖೋ ಖೋ ತಂಡ ಪೆರು ವಿರುದ್ಧ 70-38 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಖೋ ಖೋ ವಿಶ್ವಕಪ್ 2025ರ ಟೂರ್ನಿಯಲ್ಲಿ ಭಾರತ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದೆ.
ಟರ್ನ್ 1 ರ ಪ್ರಾಬಲ್ಯ ಸಾಧಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಿತು. ಆದರೂ ಪೆರು ಟರ್ನ್ 2 ರಲ್ಲಿ ರಕ್ಷಣಾತ್ಮಕ ನಿಲುವಿನೊಂದಿಗೆ ತನ್ನ ಆಟವನ್ನು ತೋರಿಸಿತು. ಆದರೆ ಭಾರತ ಆದಿತ್ಯ ಪೋಟೆ, ಶಿವಾ ರೆಡ್ಡಿ ಮತ್ತು ಸಚಿನ್ ಭಾರ್ಗೊ ಅವರ ಅತ್ಯುತ್ತಮ ಪ್ರದರ್ಶನದೊಂದಿಗೆ ಪುಟಿದೇಳಿತು. ಹೀಗೆ ಭಾರತದ ಪ್ರಾಬಲ್ಯ ಟರ್ನ್ 3 ರವರೆಗೆ ಸಾಗಿತು. ಟರ್ನ್ 4 ರ ಹೊತ್ತಿಗೆ ಭಾರತ ತಂಡ 70 ಅಂಕಗಳನ್ನು ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.