ಕಿರಣ್ ಪಹಲ್ ಬಹುತೇಕ 400 ಮೀಟರ್ ಓಟದ ಸ್ಪರ್ಧೆಯಲ್ಲಿ ವೇಗದ ಭಾರತೀಯ ಮಹಿಳಾ ಓಟಗಾರ್ತಿ ಎನಿಸಿದರು. 24 ವರ್ಷದ ಕಿರಣ್ ಪಹಲ್ ಪಂಚಕುಲದಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ 50.92 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.
ಈ ಸಮಯವು ಇದೀಗ ಎರಡನೇ ಅತ್ಯುತ್ತಮ ರಾಷ್ಟ್ರೀಯ ಓಟವಾಗಿದ್ದು, ಹಿಮಾ ದಾಸ್ ಅವರ 50.79 ಸೆಕೆಂಡುಗಳ ನಂತರದ ಸ್ಥಾನವನ್ನು ಕಿರಣ್ ಪಹಲ್ ಪಡೆದಿದ್ದಾರೆ.

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸ್ವಯಂಚಾಲಿತ ಕಟ್ ಆಫ್ 50.95 ಸೆಕೆಂಡುಗಳು ಮತ್ತು ಸೆಮಿಫೈನಲ್‌ನಲ್ಲಿ 50.92 ಸೆಕೆಂಡುಗಳಲ್ಲಿ ರೋಚಕ ಸಮಯದೊಂದಿಗೆ, ಕಿರಣ್ ಪಹಲ್ ಈಗಾಗಲೇ ಒಲಿಂಪಿಕ್ಸ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಶುಕ್ರವಾರ, ಜೂನ್ 28ರಂದು ನಡೆಯುವ ಫೈನಲ್‌ನಲ್ಲಿ ಹಿಮಾ ದಾಸ್ ದಾಖಲೆಯನ್ನು ಮುರಿದರೆ ಕಿರಣ್ ಪಹಲ್ ಮೇಲೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಒಲಿಂಪಿಕ್ಸ್‌ನಲ್ಲಿ ಪದಕ ಖಚಿತದ ಭರವಸೆ ಮೂಡಿಸಲಿದ್ದಾರೆ.
400 ಮೀ ಓಟವನ್ನು 51 ಸೆಕೆಂಡ್ ಒಳಗೆ ತಲುಪಿದ ಎರಡನೇ ಭಾರತೀಯ ಮಹಿಳೆ
ಹಿಮಾ ದಾಸ್ ನಂತರ, ಕಿರಣ್ ಪಹಲ್ 400 ಮೀಟರ್ ಓಟವನ್ನು 51 ಸೆಕೆಂಡ್‌ಗಳ ಒಳಗೆ ದಾಟಿದ ಎರಡನೇ ಭಾರತೀಯ ಮಹಿಳಾ ಓಟಗಾರ್ತಿ ಎನಿಸಿದ್ದಾರೆ. ಕಿರಣ್ ಪಹಲ್ ತನ್ನ ಸಹ ಸ್ಪರ್ಧಿಗಳನ್ನು ಬೃಹತ್ ಸಮಯದ ಅಂತರದಿಂದ ಹಿಂದಿಕ್ಕುವ ಮೂಲಕ ಓಟದ ಸ್ಪರ್ಧೆಯಲ್ಲಿ ದಾಖಲೆ ಬರೆದಿದ್ದಾರೆ.
ಗುಜರಾತ್‌ನ ದೇವಿ ಅನಿಬಾ ಝಲಾ 53.44 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಮತ್ತೊಂದೆಡೆ ಕೇರಳದ ಸ್ನೇಹಾ ಕೆ 53.51 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು.