For Quick Alerts
ALLOW NOTIFICATIONS  
For Daily Alerts

KIWG 2026: ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಮಿಂಚಿದ ಕರ್ನಾಟಕದ ಜಿಯಾ ಆರ್ಯನ್: ಅರಸಿ ಬಂದ 2 ಕಂಚಿನ ಪದಕ

ಗುಲ್ಮಾರ್ಗ್, ಫೆಬ್ರವರಿ 24: ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ (KIWG) 2026ರಲ್ಲಿ ಕರ್ನಾಟಕದ ಯುವ ಪ್ರತಿಭೆ ಜಿಯಾ ಆರ್ಯನ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ 17 ವರ್ಷದ ಈ ಆಲ್ಪೈನ್ ಸ್ಕೀಯರ್, ಸತತ ಎರಡು ದಿನಗಳಲ್ಲಿ ಎರಡು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಅವರು ಫೆಬ್ರವರಿ 23ರಂದು ಮೊದಲ ದಿನ ನಡೆದ 'ಸ್ಲಾಲಂ' (Slalom) ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿದರು. ಮರುದಿನ ಅಂದರೆ ಫೆಬ್ರವರಿ 24ರಂದು ನಡೆದ ಎರಡನೇ ದಿನ 'ಜೈಂಟ್ ಸ್ಲಾಲಂ' ವಿಭಾಗದಲ್ಲೂ ಮತ್ತೊಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ವಿವಿಧ ಸ್ಕೀಯಿಂಗ್ ವಿಭಾಗಗಳಲ್ಲಿ ತಮ್ಮ ಅದ್ಭುತ ಸ್ಥಿರತೆಯನ್ನು ಸಾಬೀತುಪಡಿಸಿದ ಜಿಯಾ, ಭಾರತೀಯ ಆಲ್ಪೈನ್ ಸ್ಕೀಯಿಂಗ್ ಕ್ಷೇತ್ರದಲ್ಲಿ ತಾನೊಬ್ಬ ಬೆಳೆಯುತ್ತಿರುವ ಬಲಿಷ್ಠ ಪ್ರತಿಭೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.

KIWG 2026 Karnataka s Jiah Aryan Wins Back-to-Back Bronze Medals in Alpine Skiing at Gulmarg

ಮೈಖೇಲ್‌ನೊಂದಿಗೆ ನಡೆಸಿದ ವಿಶೇಷ ಸಂಭಾಷಣೆಯಲ್ಲಿ, ಜಿಯಾ ಅವರು ತಮ್ಮ ಸ್ಪರ್ಧೆಗಳ, ಮಂಜಿನ ಕಠಿಣ ಪರಿಸ್ಥಿತಿಗಳು, ಹಿರಿಯ ಕ್ರೀಡಾಪಟುಗಳ ವಿರುದ್ಧದ ಪೈಪೋಟಿ, ಇಟಲಿಯಲ್ಲಿ ತಾವು ಪಡೆದ ತರಬೇತಿ ಮತ್ತು ಮುಂದಿನ ತಮ್ಮ ಗುರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

'ಸತತ ಪದಕಗಳು ಬಂದಿದ್ದರೂ ಸ್ವಲ್ಪ ನಿರಾಸೆಯಾಗಿದೆ'

ಸತತ ಎರಡು ಬಾರಿ ಪದಕ ಗೆದ್ದು ವೇದಿಕೆ (Podium) ಏರಿದರೂ, ಜಿಯಾ ಅವರು ತಮ್ಮ 'ಜೈಂಟ್ ಸ್ಲಾಲಂ' ಓಟದ ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. "ಸತತ ಎರಡು ಪದಕಗಳು ಬಂದಿವೆ. ಆದರೆ ಎರಡೂ ಪದಕಗಳ ಬಣ್ಣ ಒಂದೇ ಆಗಿರುವುದು (ಕಂಚು) ಸ್ವಲ್ಪ ನಿರಾಸೆ ತಂದಿದೆ," ಎಂದು ಬೆಂಗಳೂರಿನ ಈ ಪ್ರತಿಭಾನ್ವಿತ ಹುಡುಗಿ ಅಭಿಪ್ರಾಯಪಟ್ಟಿದ್ದಾರೆ.

ಜಿಯಾ ಆರ್ಯನ್ ಅವರು ತಮ್ಮ ರೇಸ್‌ನ ಎರಡನೇ ಹಂತದಲ್ಲಿ ಎದುರಾದ ಸವಾಲಿನ ಬಗ್ಗೆ ಹೀಗೆ ವಿವರಿಸಿದ್ದಾರೆ. "ಮೊದಲ ಸುತ್ತಿನಲ್ಲಿ ನಾನು ಅತ್ಯುತ್ತಮ ಪ್ರದರ್ಶನ ನೀಡಿದ್ದೆ, ಹಾಗಾಗಿ ಗೆಲುವಿನ ಉತ್ತಮ ಅವಕಾಶ ನನಗಿತ್ತು. ಆದರೆ ಎರಡನೇ ಸುತ್ತಿನಲ್ಲಿ, ಒಳಗಿನ ಸ್ಕೀ ಮೇಲೆ ಸ್ವಲ್ಪ ವಾಲಿಬಿಟ್ಟೆ. ಆಗ ನಿಯಂತ್ರಣ ಕಳೆದುಕೊಂಡೆ. ಆದರೂ, ತಕ್ಷಣವೇ ಚೇತರಿಸಿಕೊಂಡು, ಮತ್ತೆ ಟ್ರ್ಯಾಕ್‌ಗೆ ಹಿಂತಿರುಗಿದೆ," ಎಂದು ಅವರು ವಿವರಿಸಿದರು.

ಆ ತಪ್ಪಿನ ನಂತರ ಮಾಡಿಕೊಂಡ ಚೇತರಿಕೆ ಅತ್ಯಂತ ಮಹತ್ವದ್ದಾಗಿತ್ತು. ಆ ಕ್ಷಣದಲ್ಲೇ ಆತ್ಮವಿಶ್ವಾಸ ಕಳೆದುಕೊಳ್ಳದೇ, ತನ್ನ ಓಟವನ್ನು ಅವರು ಮುಂದುವರಿಸಿದರು. "ಆದರೂ ನಾನು ಮತ್ತೆ ಟ್ರ್ಯಾಕ್‌ಗೆ ಹಿಂತಿರುಗಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಮತ್ತು ಸೋಲೊಪ್ಪಿಕೊಳ್ಳದೆ ಹೋರಾಡಿದ್ದಕ್ಕಾಗಿ ನನ್ನ ಬಗ್ಗೆ ನನಗೆ ಹೆಮ್ಮೆಯಿದೆ," ಎಂದು ರಿಲಯನ್ಸ್ ಫೌಂಡೇಶನ್ ಅಥ್ಲೀಟ್ ಜಿಯಾ ಹೆಮ್ಮೆಯಿಂದ ಹೇಳಿದರು.

'ಮಂಜಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದೇ ಸವಾಲಾಗಿತ್ತು'

ಕಠಿಣ ಮಂಜಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಈ ಸ್ಪರ್ಧೆಯಲ್ಲಿ ದೊಡ್ಡ ಸವಾಲಾಗಿತ್ತು. "ಹವಾಮಾನ ಮತ್ತು ಮಂಜಿನ ಗುಣಮಟ್ಟ ಸ್ಪರ್ಧೆಯ ಸಮಯದಲ್ಲಿ ಮಹತ್ವದ ಪಾತ್ರವಹಿಸಿತು. ಟ್ರ್ಯಾಕ್‌ನ ಮೇಲಿನ ಹಿಮದ ಸ್ಥಿತಿ ಬದಲಾಗುತ್ತಿದ್ದು, ಆಟಗಾರರು ಹೊಸ ಸವಾಲುಗಳನ್ನು ಎದುರಿಸಬೇಕಾಯಿತು. ಈ ರೀತಿಯ ಕಠಿಣ ಪರಿಸ್ಥಿತಿಗಳಿಗೆ ತಕ್ಷಣ ಹೊಂದಿಕೊಳ್ಳುವ ಸಾಮರ್ಥ್ಯವೇ ಸ್ಪರ್ಧೆಯಲ್ಲಿ ನಿರ್ಣಾಯಕವಾಗಿತ್ತು.

ಬೆಳಗ್ಗೆ ಬೇಗನೆ ಸ್ಪರ್ಧೆ ಆರಂಭ

"ನಾವು ಬೆಳಿಗ್ಗೆ ಬೇಗನೆ ಸ್ಪರ್ಧೆ ಆರಂಭಿಸಿದ್ದರಿಂದ ಟ್ರ್ಯಾಕ್ ಸ್ಥಿತಿ ನಿಜಕ್ಕೂ ತುಂಬಾ ಚೆನ್ನಾಗಿತ್ತು. ಆದ್ದರಿಂದ ಮೊದಲ ಸುತ್ತಿನ ಸಮಯದಲ್ಲಿ ಮಂಜು ಗಟ್ಟಿಯಾದ ಸ್ಥಿತಿಯಲ್ಲಿ ಇತ್ತು," ಎಂದು ಹೇಳಿದರು. ಆದರೆ, ಆದರೆ ನಂತರ ತಾಪಮಾನ ಹೆಚ್ಚಾದಂತೆ ಮಂಜಿನ ಮೇಲ್ಮೈ ಮೃದುವಾಗತೊಡಗಿತು. ಆಗ ಟ್ರ್ಯಾಕ್‌ನಲ್ಲಿ ಬದಲಾವಣೆ ಕಂಡುಬಂದಿತು

"ಸಹಜವಾಗಿಯೇ, ಎರಡನೇ ಸುತ್ತಿನ ವೇಳೆಗೆ ಬಿಸಿಲು ಹೆಚ್ಚಾದಂತೆ ಮಂಜಿನ ಗುಣಮಟ್ಟ ಕಡಿಮೆಯಾಗುತ್ತದೆ. ಆದರೆ, ನಮಗೆ ಸಿಕ್ಕ ಪರಿಸ್ಥಿತಿಯಲ್ಲೇ ನಾವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಹಾಗಾಗಿ ನಾವು ಅಂತಹ ಸವಾಲುಗಳನ್ನು ಎದುರಿಸಲು ಸದಾ ಸಿದ್ಧರಿರುತ್ತೇವೆ," ಎಂದು ಜಿಯಾ ಅವರು ಹೇಳಿದರು.

ಅವರ ಈ ಶಾಂತ ಮತ್ತು ಪ್ರಬುದ್ಧವಾದ ವಿಶ್ಲೇಷಣೆಯು ಒಬ್ಬ ವೃತ್ತಿಪರ ರೇಸರ್‌ನ ಪಕ್ವತೆಯನ್ನು ಪ್ರತಿಬಿಂಬಿಸುತ್ತದೆ. ಅಂದರೆ, ಪರಿಸ್ಥಿತಿಗಳನ್ನು ದೂರುವ ಬದಲು, ಅವುಗಳಿಗೆ ತಕ್ಕಂತೆ ತಮ್ಮನ್ನು ತಾವು ಒಗ್ಗಿಸಿಕೊಳ್ಳುವ ಅವರ ಗುಣ ಇಲ್ಲಿ ಎದ್ದು ಕಾಣುತ್ತದೆ.

ಅತ್ಯುತ್ತಮ ಕ್ರೀಡಾಪಟುಗಳೊಂದಿಗೆ ಪೈಪೋಟಿ

ಜಿಯಾ ಅವರು ಕಳೆದ ವರ್ಷ ಹಾರ್ಬಿನ್‌ನಲ್ಲಿ ನಡೆದ ವಿಂಟರ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಆಂಚಲ್ ಠಾಕೂರ್ ಮತ್ತು ಸಂಧ್ಯಾ ಠಾಕೂರ್ ಅವರಂತಹ ಘಟಾನುಘಟಿಗಳ ಜೊತೆಗೆ ಮತ್ತು ಇತರ ಪ್ರಬಲ ಸ್ಪರ್ಧಿಗಳ ವಿರುದ್ಧ ಕಣಕ್ಕಿಳಿದಿದ್ದರು.

"ಅವರ ವಿರುದ್ಧ ಸ್ಪರ್ಧಿಸುವುದು ಸಂತೋಷದ ವಿಷಯ. ವಿಶೇಷವಾಗಿ ಅನ್ಶುಲ್, ತನುಜಾ ಮತ್ತು ಸಂಧ್ಯಾ ಅವರು ಉತ್ತಮ ವ್ಯಕ್ತಿತ್ವ ಹೊಂದಿರುವವರು. ಕ್ರೀಡಾಂಗಣದ ಹೊರಗೆ ಎಷ್ಟು ಒಳ್ಳೆಯವರೋ, ಕ್ರೀಡಾಂಗಣದ ಒಳಗೆ ಅಷ್ಟೇ ಅದ್ಭುತವಾದ ಕ್ರೀಡಾಪಟುಗಳು," ಎಂದು ಹೇಳಿದರು. "ಅವರು ಹುರಿದುಂಬಿಸುತ್ತಾರೆ ಮತ್ತು ಇಂತಹ ಉನ್ನತ ಮಟ್ಟದ ಸ್ಪರ್ಧೆಯಲ್ಲಿ ಇಂತಹ ಕ್ರೀಡಾ ಮನೋಭಾವವನ್ನು ನೋಡುವುದೇ ಒಂದು ಸಂಭ್ರಮದ ಸಂಗತಿ," ಎಂದು ಹೇಳಿದರು.

KIWG 2026: "ಸ್ಪರ್ಧೆಯ ಮಟ್ಟ ಹೆಚ್ಚಿದೆ"

ಕಳೆದ ವರ್ಷ ಜಿಯಾ ಅವರು ದೇಶದ ಹೊರಗಿದ್ದ ಕಾರಣ ವಿಂಟರ್ ಗೇಮ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಇಲ್ಲಿನ ವೃತ್ತಿಪರತೆ ಹಾಗೂ ವ್ಯವಸ್ಥೆಯನ್ನು ಕಂಡು ಅವರು ಬೆರಗಾಗಿದ್ದಾರೆ.

ಜಿಯಾ ಅವರು ಹಿಂದಿನ ರಾಷ್ಟ್ರೀಯ ಸ್ಪರ್ಧೆಗಳಿಗೆ ಹೋಲಿಸಿದರೆ ಈ ಬಾರಿ ಕ್ರೀಡಾಕೂಟದ ಒಟ್ಟಾರೆ ಮಟ್ಟ ಗಣನೀಯವಾಗಿ ಸುಧಾರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಉತ್ತಮವಾದ ಕೋರ್ಸ್ ಸೆಟ್ಟಿಂಗ್ ಮತ್ತು ಸಂಘಟನೆಯನ್ನು ಅವರು ಶ್ಲಾಘಿಸಿದ್ದಾರೆ. ಅವರ ಪ್ರಕಾರ, ಇಳಿಜಾರುಗಳ ತಾಂತ್ರಿಕ ವಿನ್ಯಾಸವು ಕ್ರೀಡಾಪಟುಗಳಿಗೆ ರೇಸ್ ಅನ್ನು ಆನಂದಿಸುವುದರ ಜೊತೆಗೆ ಸಂಪೂರ್ಣವಾಗಿ ತಮ್ಮ ಪ್ರದರ್ಶನದ ಮೇಲೆ ಗಮನಹರಿಸಲು ಸಹಾಯ ಮಾಡಿತು. ಕಾಶ್ಮೀರವನ್ನು ತಮ್ಮ 'ಎರಡನೇ ಮನೆ' ಎಂದು ಕರೆದ ಜಿಯಾ, ಮತ್ತೆ ಗುಲ್ಮಾರ್ಗ್‌ಗೆ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಜಿಯಾಗೆ ತಂದೆಯೇ ಪ್ರೇರಣೆ

ಜಿಯಾ ಕಳೆದ ಏಳು ವರ್ಷಗಳಿಂದ ಸ್ಕೀಯಿಂಗ್ ಮಾಡುತ್ತಿದ್ದು, ಐದು ವರ್ಷಗಳ ಹಿಂದೆ ವೃತ್ತಿಪರರಾಗಿ ಗುರುತಿಸಿಕೊಂಡರು. ಸಾಹಸ ಕ್ರೀಡೆಗಳ ಮೇಲೆ ಅವರಿಗಿದ್ದ ಆಸಕ್ತಿಗೆ ಅವರ ತಂದೆಯೇ ಪ್ರೇರಣೆ. ಗುಲ್ಮಾರ್ಗ್‌ನಲ್ಲಿ ನಡೆದ ಮಿಲಿಟರಿ ತರಬೇತಿ ಶಿಬಿರವೊಂದು ಅವರ ಬದುಕಿನಲ್ಲಿ ಮಹತ್ವದ ತಿರುವು ನೀಡಿತು. ಅಲ್ಲಿ ಜಿಯಾ ಅವರ ಪ್ರತಿಭೆಯನ್ನು ಗುರುತಿಸಿ, ಅವರನ್ನು ಒಬ್ಬ 'ಪ್ರತಿಭಾವಂತ ಅಥ್ಲೀಟ್' ಎಂದು ಪರಿಗಣಿಸಲಾಯಿತು ಹಾಗೂ ವ್ಯವಸ್ಥಿತ ತರಬೇತಿ ಮಾರ್ಗಗಳ ಮೂಲಕ ಬೆಳೆಸಲಾಯಿತು.

ಶಿಕ್ಷಣ ಮತ್ತು ಕ್ರೀಡೆಯನ್ನು ಸಮತೋಲನದಲ್ಲಿ ಕೊಂಡೊಯ್ಯುತ್ತಿರುವ ಅವರು, ಪ್ರಸ್ತುತ ಎನ್‌ಐಒಎಸ್ (National Institute of Open Schooling) ಮೂಲಕ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ತಾಯಿ ಐಬಿಎಂ ಸಂಸ್ಥೆಯಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ ಮತ್ತು ತಂದೆ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ. ಇಂತಹ ಸದೃಢ ಮತ್ತು ಬೆಂಬಲಿತ ಕುಟುಂಬವು ಅವರ ಆಲ್ಪೈನ್ ಕನಸುಗಳ ಹಿಂದೆ ಭದ್ರ ಬುನಾದಿಯಾಗಿ ನಿಂತಿದೆ.

ತರಬೇತಿ ಕೇಂದ್ರ: ಕ್ರಾನ್‌ಪ್ಲಾಟ್ಜ್, ಇಟಲಿ

ಭಾರತದಲ್ಲಿ ಸ್ಕೀಯಿಂಗ್‌ಗೆ ಪೂರಕವಾದ ಮೂಲಸೌಕರ್ಯಗಳು ಸೀಮಿತವಾಗಿರುವುದರಿಂದ, ಜಿಯಾ ಅವರು ಚಳಿಗಾಲದ ಅವಧಿಯಲ್ಲಿ ಪ್ರಮುಖವಾಗಿ ಇಟಲಿಯ ಕ್ರಾನ್‌ಪ್ಲಾಟ್ಜ್‌ನಲ್ಲಿ ತರಬೇತಿ ಪಡೆಯುತ್ತಾರೆ. ಇನ್ನು ಬೇಸಿಗೆಯ ಸಮಯದಲ್ಲಿ ಜಿಮ್ ಅಭ್ಯಾಸ, ಓಟ ಮತ್ತು ಶಕ್ತಿ ಅಭಿವೃದ್ಧಿ ತರಬೇತಿಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಇದು ಸ್ಕೀಯಿಂಗ್ ಚಲನೆಗಳನ್ನು ಅನುಕರಿಸಲು ಮತ್ತು ಸ್ನಾಯುಗಳ ಸಹಿಷ್ಣುತೆಯನ್ನು ಹೆಚ್ಚಿಸಲು ಅವರಿಗೆ ಸಹಾಯ ಮಾಡುತ್ತದೆ.

ಜಿಯಾ ಅವರ ಪ್ರಮುಖ ಸಾಧನೆಗಳು

* ಖೇಲೋ ಇಂಡಿಯಾದಲ್ಲಿ ಹಿಂದಿನ ಬಾರಿ ಕಂಚಿನ ಪದಕ ಜಯಿಸಿದ್ದರು.

* ಇಟಲಿಯಲ್ಲಿ ನಡೆದ 18 ವರ್ಷದೊಳಗಿನವರ (U18) ಸ್ಲಾಲಮ್ ವಿಭಾಗದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳು

* ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ

* ಚಿನ್ನಾರ್ ಕಪ್ (Chinnar Cup): ಚಿನ್ನದ ಪದಕ

* ತಮ್ಮ ಮೊದಲ ರಾಷ್ಟ್ರೀಯ ಕ್ರೀಡಾಕೂಟದಲ್ಲೇ ಬೆಳ್ಳಿ ಪದಕ

* ಸರ್ಬಿಯಾದಲ್ಲಿ ನಡೆದ 16 ವರ್ಷದೊಳಗಿನವರ (U16)ಸ್ಪರ್ಧೆಯಲ್ಲಿ ಚಿನ್ನದ ಪದಕ

ಜಿಯಾ ಅವರಿಗೆ ಸ್ಪೂರ್ತಿ ಇವರೇ ನೋಡಿ

ಜಿಯಾ ಅವರು ಇತ್ತೀಚೆಗೆ ನಡೆದ 2026ರ ವಿಂಟರ್ ಒಲಿಂಪಿಕ್ಸ್ ಅನ್ನು ಹತ್ತಿರದಿಂದ ಗಮನಿಸಿದ್ದು, ಇಟಲಿಯ ಆಲ್ಪೈನ್ ಸ್ಕೀಯರ್ ಫೆಡೆರಿಕಾ ಬ್ರಿಗೋನ್ ಅವರನ್ನು ತಮ್ಮ ಆದರ್ಶವಾಗಿ ಪರಿಗಣಿಸಿದ್ದಾರೆ. ಬ್ರಿಗೋನ್ ಅವರು ಇಟಲಿಯ ಕಾರ್ಟಿನಾದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಉನ್ನತ ಮಟ್ಟದ ಕ್ರೀಡೆಗೆ ಮರಳಿದ ಬ್ರಿಗೋನ್ ಅವರ ಛಲ ಮತ್ತು ಆತ್ಮವಿಶ್ವಾಸವನ್ನು ಜಿಯಾ ಮೆಚ್ಚಿಕೊಂಡಿದ್ದಾರೆ. ಅವರ ಈ ಚೇತರಿಸಿಕೊಳ್ಳುವ ಗುಣ ಮತ್ತು ಸ್ವಯಂ ನಂಬಿಕೆಯೇ ಜಿಯಾ ಅವರಿಗೆ ದೊಡ್ಡ ಸ್ಫೂರ್ತಿಯಾಗಿದೆ.

ಜಿಯಾ ಮತ್ತು ಅವರ ಸಹ-ಕ್ರೀಡಾಪಟುಗಳಿಗೆ 'ಖೇಲೋ ಇಂಡಿಯಾ' ಎಂಬುದು ಈಗ ಕೇವಲ ಒಂದು ಕ್ರೀಡಾ ಹಬ್ಬವಲ್ಲ. ಅದು ಒಂದು ನಿರ್ಣಾಯಕ ರಾಷ್ಟ್ರೀಯ ವೇದಿಕೆಯಾಗಿ ರೂಪಾಂತರಗೊಂಡಿದೆ. ಅಧಿಕೃತ ಮಾನ್ಯತೆ ಮತ್ತು ಹೆಚ್ಚುತ್ತಿರುವ ಗುಣಮಟ್ಟದೊಂದಿಗೆ, ಭಾರತೀಯ ಸ್ಕೀಯರ್‌ಗಳು ದೇಶದ ಅತ್ಯುತ್ತಮ ಕ್ರೀಡಾಪಟುಗಳ ವಿರುದ್ಧ ತಮ್ಮ ಸಾಮರ್ಥ್ಯವನ್ನು ಅಳೆದುಕೊಳ್ಳಲು ಇರುವ "ಅಂತಿಮ ಹಣಾಹಣಿ" ಎಂದು ಜಿಯಾ ಇದನ್ನು ಬಣ್ಣಿಸಿದ್ದಾರೆ.

ಎರಡು ರೇಸ್. ಎರಡು ಕಂಚಿನ ಪದಕಗಳು. ಕೇವಲ 17ನೇ ವಯಸ್ಸಿನಲ್ಲಿಯೇ ಜಿಯಾ ಆರ್ಯನ್ ಈ ಅದ್ಭುತ ಸಾಧನೆ ಬರೆದಿದ್ದಾರೆ. ಅವರು ಕೇವಲ ಪದಕಗಳನ್ನು ಸಂಗ್ರಹಿಸುತ್ತಿಲ್ಲ, ಬದಲಾಗಿ ಭಾರತೀಯ ಆಲ್ಪೈನ್ ಸ್ಕೀಯಿಂಗ್‌ನಲ್ಲಿ ತಮ್ಮದೇ ಆದ ಭವ್ಯ ಹಾದಿಯನ್ನು ರೂಪಿಸಿಕೊಳ್ಳುತ್ತಿದ್ದಾರೆ.

Story first published: Tuesday, February 24, 2026, 21:05 [IST]
Other articles published on Feb 24, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+