
ಮೀರತ್, ಜೂ. 9: ಒಲಿಂಪಿಕ್ಸ್ ನಂಥ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಭಾರತದ ಪದಕ ಪಟ್ಟಿಯೇಕೆ ಉದ್ದಕ್ಕೆ ಬೆಳೆಯೋಲ್ಲ ಅನ್ನೋದಕ್ಕೆ ಇಂಥ ಕಣ್ಣು ಪಸೆಯಾಗಿಸುವ ನೂರು ಕಥೆಗಳು ಸಿಕ್ಕುತ್ತವೆ. ನಮ್ಮಲ್ಲಿ ಪ್ರತಿಭಾನ್ವಿತ ಬಡ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವವರಿಗೆ ಬರಗಾಲವಿದೆ ಎನ್ನುವುದಕ್ಕೆ ಪ್ರಿಯಾ ಅವರಂತ ಅನೇಕ ಅಸಹಾಯಕ ಮುಖಗಳು ಸಾಕ್ಷಿ ಹೇಳುತ್ತವೆ.
ಉತ್ತರ ಪ್ರದೇಶದ ಮೀರತ್ ನ ಮವಾನ ಉಪ ವಿಭಾಗದಲ್ಲಿ ಕಾರ್ಮಿಕ ದಲಿತ ಕಾರ್ಮಿಕನೊಬ್ಬನ ಮಗಳು ಪ್ರಿಯಾ ಸಿಂಗ್, ಜರ್ಮನಿಯ ಸುಹ್ಲ್ ನಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ಜೂನಿಯರ್ ವರ್ಲ್ಡ್ ಕಪ್ ಗೆ ಆಯ್ಕೆಯಾಗಿದ್ದಾರೆ. ಆದರೆ ಸ್ಪರ್ಧೆಗೆ ತೆರೆಳಲು ಅವರಲ್ಲಿ ಹಣವಿಲ್ಲ. ಜೊತೆಗೆ ನೆರವು ನೀಡುವವರೂ ಯಾರೂ ಇಲ್ಲ.
ದುಡ್ಡಿಲ್ಲದೆ ಪರದಾಡುತ್ತಿದ್ದ ಯುವ ಮಹಿಳಾ ಶೂಟರ್‌ಗೆ ಯೋಗಿ ಸರ್ಕಾರ ನೆರವು
ಜೂನ್ 22ರಿಂದ ಜರ್ಮನಿಯಲ್ಲಿ ನಡೆಯಲಿರುವ ಐಎಸ್ಎಸ್ಎಫ್ ಜೂನಿಯರ್ ವರ್ಲ್ಡ್ ಕಪ್ ನ 50 ಮೀ. ರೈಫಲ್ ಪ್ರೋನ್ ನಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ 6 ಮಂದಿಯಲ್ಲಿ 19ರ ಹರೆಯದ ಪ್ರಿಯಾ ಕೂಡ ಒಬ್ಬರು. ಬಾಡಿಗೆ ರೈಫಲ್ ನಲ್ಲಿ ಸ್ಪರ್ಧಿಸಿದ್ದ ಪ್ರಿಯಾ ಅವರ ಹೆಸರೂ ಮುಂದಿನ ಸ್ಪರ್ಧೆಗಾಗಿ ಆಯ್ಕೆಯಾಗಿರುವ 6 ಮಂದಿಯ ಶಾರ್ಟ್ ಲಿಸ್ಟ್ ಕಾಣಿಸಿಕೊಂಡಿತ್ತು.
ಸುಹ್ಲ್ ಜೂನಿಯರ್ ಶೂಟಿಂಗ್ ವರ್ಲ್ಡ್ ಕಪ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ 6 ಮಂದಿಯ ನಡುವೆ ತನ್ನ ಹೆಸರೂ ಇರುವುದನ್ನು ಕಂಡು ಪ್ರಿಯಾ ಖುಷಿಗೊಂಡಿದ್ದರು. ಆದರೆ ಆಯ್ಕೆಯಾದವರಲ್ಲಿ ಮೊದಲ ಮೂರು ಜನರಿಗಷ್ಟೇ ಆರ್ಥಿಕ ಸಹಾಯ ನೀಡುವುದಾಗಿ ಸರ್ಕಾರ ಪ್ರಕಟಿಸಿದ್ದರಿಂದ ಶಾರ್ಟ್ ಲಿಸ್ಟ್ ನಲ್ಲಿ 4ನೇ ಸ್ಥಾನದಲ್ಲಿರುವ ಪ್ರಿಯಾ ಕನಸು ಕಮರುವ ಸ್ಥಿತಿಯಲ್ಲಿದೆ. ಅರ್ಹತಾ ಸ್ಪರ್ಧೆಯಲ್ಲಿ ಬಾಡಿಗೆ ರೈಫಲ್ ನಲ್ಲಿ ಸ್ಪರ್ಧಿಸಿ ಆಯ್ಕೆ ಗಿಟ್ಟಿಸಿಕೊಂಡಿರುವ ಈ ಪ್ರತಿಭಾನ್ವಿತೆ, ಸರ್ಕಾರ ಅಥವಾ ಪ್ರೋತ್ಸಾಹಕರ ಬೆಂಬಲವಿಲ್ಲದೆ ವಿದೇಶದಲ್ಲಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಾದರೂ ಹೇಗೆ?
'ಗುತ್ತಿಗೆದಾರರೊಬ್ಬರ ಅಡಿಯಲ್ಲಿ ನಾನು ಕೂಲಿ ಕೆಲಸ ಮಾಡಿಕೊಂಡಿದ್ದೇನೆ. ತಿಂಗಳಿಗೆ 10 ಸಾವಿರ ಗಳಿಕೆಯಿದೆ. ಆದರೆ ಗಳಿಕೆ ನಾಲ್ಕು ಮಕ್ಕಳಿರುವ ಕುಟುಂಬವನ್ನು ಸಲಹಲು ಸಾಲುತ್ತಿಲ್ಲ. ಈ ನಡುವೆ ಮಗಳನ್ನು ಪ್ರೋತ್ಸಾಹಿಸಲಾಗದೆ ಅಸಹಾಯಕನಾಗಿದ್ದೇನೆ. ಮಗಳನ್ನು ಸ್ಪರ್ಧೆಗೆ ಕಳಿಸಲು ನೆರವು ಬೇಕು ಎಂದು ಸಾಲಗಾರರ ಬಳಿ ಬೇಡಿದ್ದಾಯಿತು. ಆದರೆ ಯಾರೊಬ್ಬರೂ ಸಹಾಯ ಮಾಡುತ್ತಿಲ್ಲ' ಎಂದು ಪ್ರಿಯಾ ತಂದೆ ಬ್ರಿಜ್ಪಾಲ್ ಸಿಂಗ್ ಅಳಲನ್ನು ತೋಡಿಕೊಂಡಿದ್ದಾರೆ.
ಸರ್ಕಾರದ ಕಲ್ಲು ಮನಸ್ಥಿತಿಯ ಬಗ್ಗೆ ಬೇಸರ ಮೂಡಿಸುವ ಇನ್ನೊಂದು ಸಂಗತಿಯಿದೆ. ತಮ್ಮ ಕುಟುಂಬ ಬಡತನದಲ್ಲಿರುವುದರಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆರ್ಥಿಕ ನೆರವು ನೀಡಿ ಎಂದು ಪ್ರಿಯಾ ಮತ್ತವರ ತಂದೆ, ಯೂಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಹಿಡಿದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನೂ ಅಂಗಲಾಚಿದ್ದಾಗಿದೆ. ಆದರೆ ಸರ್ಕಾರ ಸಹಿತ ಎಲ್ಲರೂ ಕೈಚೆಲ್ಲಿದವರೇ ಎನ್ನುವುದು ದುರಂತ.
ಕಾಸಿನ ಬೆಂಬಲವಿದ್ದು ಕ್ರೀಡೆಯಲ್ಲಿ ಸಾಧಿಸೋದು ಇದ್ದೇ ಇದೆ. ಆದರೆ ಬಡತನವಿದ್ದೂ ಅಪೂರ್ವ ಪ್ರತಿಭೆ ತೋರ್ಪಡಿಸುವ ಕ್ರೀಡಾಪಟುಗಳನ್ನು ನಿಜವಾಗಿ ಸರ್ಕಾರ, ಸಂಸ್ಥೆಗಳು ಬೆಂಬಲಿಸಬೇಕಿದೆ. ಕ್ರೀಡೆ ಸಹಜವಾಗೇ ಕೊಂಚ ಆರ್ಧಿಕ ನೆರವು ಬೇಡುವುದರಿಂದ ಬಡ ಕ್ರೀಡಾಪಟುಗಳನ್ನು ಸರ್ಕಾರ, ಸಹೃದಯರು ಪ್ರೋತ್ಸಾಹಿಸುವ ಅಗತ್ಯವಿದೆ.
ಇಲ್ಲಿ ಪ್ರಿಯಾ ಅನುಭವಿಸುತ್ತಿರುವ ಸಂಕಟ ಎಂಥದ್ದು ಅನ್ನೋದು ಇಂಥದ್ದೇ ಸಂಕಟಕ್ಕೆ ಒಳಗಾದ ಇನ್ನೊಬ್ಬ ಬಡ ಕ್ರೀಡಾಪಟುವಿಗಷ್ಟೇ ಅರಿವಾಗಲು ಸಾಧ್ಯ. ಪ್ರಿಯಾ ಸ್ಥಾನದಲ್ಲಿ ನಿಂತು ಯೋಚಿಸಿದರೆ ನಮ್ಮೊಳಗಿನ ಮೃದು ಮನಸ್ಸಿಗೂ ಅವರ ಸಂಕಟ ಅರಿವಾಗಬಹುದು. ಪ್ರಿಯಾ ಸ್ಥಾನದಲ್ಲಿ ನಿಂತು ಸರ್ಕಾರಗಳು ಯೋಚಿಸುವಂತಾದರೆ ನಮ್ಮಲ್ಲಿ ಖಂಡಿತಾ ನೂರಾರು ಬಡ ಕುಟುಂಬದ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬಲ್ಲರು. ಒಟ್ಟಿನಲ್ಲಿ ಪ್ರಿಯಾ ಅವರು ಜರ್ಮನಿ ಶೂಟಿಂಗ್ ವರ್ಲ್ಡ್ ಕಪ್ ನಲ್ಲಿ ಪಾಲ್ಗೊಳ್ಳುವಂತಾಗಲಿ, ಸರ್ಕಾರ ನೆರವು ನೀಡಲಿ ಎಂದು ಆಶಿಸೋಣ.