
ಅಪಿಯಾ, ಜುಲೈ 12: ಭಾರತದ ವೇಟ್ ಲಿಫ್ಟರ್ ಅಜಯ್ ಸಿಂಗ್ ಅವರು ಶುಕ್ರವಾರ (ಜುಲೈ 12) ಕಾಮನ್ವೆಲ್ತ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಮೋವಾದ ಅಪಿಯಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಅಜಯ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.
ಪುರುಷರ 81 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ 22ರ ಹರೆಯದ ಅಜಯ್ ಸಿಂಗ್, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ತನ್ನ ದೇಹದ ತೂಕಕ್ಕಿಂತಲೂ ಎರಡುಪಟ್ಟು ಅಂದರೆ ಒಟ್ಟು 190 ಕೆಜಿ ಭಾರ ಎತ್ತುವುದರೊಂದಿಗೆ ಟೋಕಿಯೋ ಒಲಿಂಪಿಕ್ಸ್ ಅರ್ಹತೆಗಾಗಿ ಪ್ರಮುಖ ಅಂಕ ಗಳಿಸಿದ್ದಾರೆ.
ಕ್ಲೀನ್ ಆ್ಯಂಡ್ ಜರ್ಕ್ ಮತ್ತು ಸ್ನ್ಯಾಚ್ ಸೇರಿ (190+148) ಒಟ್ಟು 338 ಕೆಜಿ ಭಾರ ಎತ್ತಿರುವ ಅಜಯ್, ತನ್ನ ಹಿಂದಿನ ವೈಯಕ್ತಿಕ ಅತ್ಯುತ್ತಮ ಸಾಧನೆ 320 ಕೆಜಿಗಿಂತ 18 ಕೆಜಿ ಹೆಚ್ಚುವರಿ ತೂಕ ಎತ್ತಿದ್ದಾರೆ. 81 ಕೆಜಿ ವಿಭಾಗದಲ್ಲೇ ಸ್ಪರ್ಧಿಸಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ಪಪುಲ್ ಚಂಗ್‌ಮಯಿ ಅವರು ಅಜಯ್ ಬೆನ್ನಲ್ಲೇ ಸ್ಪರ್ಧೆ ಮುಗಿಸಿ (135 ಕೆಜಿ+178 ಕೆಜಿ) ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.