For Quick Alerts
ALLOW NOTIFICATIONS  
For Daily Alerts

Lok Sabha Election 2024: ಕಾಂಗ್ರೆಸ್ ನಾಯಕನನ್ನು ಸೋಲಿಸಿದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್

ಭಾರತ ಕ್ರಿಕೆಟ್ ತಂಡದ ಎರಡು ಬಾರಿ ವಿಶ್ವಕಪ್ ವಿಜೇತ ಹಾಗೂ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.

ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯೂಸುಫ್ ಪಠಾಣ್ ಅವರು ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರು.

Lok Sabha Election 2024 Former Cricketer Yusuf Pathan Wins From Baharampur Constituency

ಯೂಸುಫ್ ಪಠಾಣ್ 5,18,066 ಮತಗಳನ್ನು ಪಡೆದರೆ, ತಮ್ಮ ಸಮೀಪದ ಪ್ರತಿಸ್ಪರ್ಧಿ ಅಧೀರ್ ರಂಜನ್ ಚೌಧರಿ 4,32,340 ಮತಗಳನ್ನು ಮಾತ್ರ ಪಡೆದರು. ಈ ಮೂಲಕ ಯೂಸುಫ್ ಪಠಾಣ್ 85,726 ಮತಗಳ ಅಂತರದಿಂದ ಗೆದ್ದು ಬೀಗಿದರು.

ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಲೋಕಸಭೆ ಚುನಾವಣೆಗೂ ಕೆಲವೇ ದಿನಗಳ ಮೊದಲು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಪಕ್ಷವನ್ನು ಸೇರ್ಪಡೆಯಾಗಿದ್ದರು ಮತ್ತು ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಹಲವು ಬಾರಿ ಭೇಟಿ ನೀಡಿದ್ದರು.

ಈ ಹಿಂದೆ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಟಗಾರನಾಗಿದ್ದ ಯೂಸುಫ್ ಪಠಾಣ್ ಪಶ್ಚಿಮ ಬಂಗಾಳದಲ್ಲಿ ಸ್ಟಾರ್ ಮುಖವಾಗಿದ್ದರು. ಅದರಲ್ಲೂ ಮುಸ್ಲಿಂ ಬಾಹುಳ್ಯವಿರುವ ಬಹರಂಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದರು.

Lok Sabha Election 2024 Former Cricketer Yusuf Pathan Wins From Baharampur Constituency

ಇದೇ ವೇಳೆ, ತನ್ನ ಗೆಲುವಿನ ನಂತರ, ಇರ್ಫಾನ್ ಪಠಾಣ್ ತನಗೆ ಮತ ಚಲಾಯಿಸಿದ ಕ್ಷೇತ್ರದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ತನ್ನ ಪಕ್ಷದ ಸಹ ಅಭ್ಯರ್ಥಿಗಳನ್ನು ಅಭಿನಂದಿಸಿದರು.

ಬಹರಂಪುರದಲ್ಲಿ ಸ್ಪೋರ್ಟ್ಸ್ ಅಕಾಡೆಮಿ ನಿರ್ಮಿಸುವ ಇಚ್ಛೆ ವ್ಯಕ್ತಪಡಿಸಿದ ಯೂಸುಫ್ ಪಠಾಣ್, ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವುದಾಗಿ ತಿಳಿಸಿದರು.

41ರ ಹರೆಯದ ಯೂಸುಫ್ ಪಠಾಣ್ ಅವರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಮತ್ತು ಗೆಲುವಿನಿಂದ ಸಂತೋಷವಾಗಿದೆ ಎಂದು ಹೇಳಿದರು.

"ನನಗೆ ಸಂತೋಷವಾಗಿದೆ, ನನ್ನೊಂದಿಗಿದ್ದ ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ. ಇದು ನನ್ನ ಗೆಲುವು ಮಾತ್ರವಲ್ಲ, ಎಲ್ಲ ಕಾರ್ಯಕರ್ತರ ಗೆಲುವು. ದಾಖಲೆಗಳನ್ನು ಮುರಿಯುವಂತೆ ಮಾಡಲಾಗಿದೆ. ನಾನು ಅಧೀರ್ ರಂಜನ್ ಚೌಧರಿ ಅವರನ್ನು ಗೌರವಿಸುತ್ತೇನೆ".

"ನಾನು ಮೊದಲು ಕ್ರೀಡಾ ಅಕಾಡೆಮಿ ಮಾಡುತ್ತೇನೆ, ಇದರಿಂದ ಯುವ ಪ್ರತಿಭೆಗಳು ವೃತ್ತಿಜೀವನ ಕಟ್ಟಿಕೊಳ್ಳಬಹುದು. ಕೈಗಾರಿಕೆಗಳಿಗೂ ಕೆಲಸ ಮಾಡುತ್ತೇನೆ. ನಾನು ಇಲ್ಲಿಯೇ ವಾಸಿಸುತ್ತೇನೆ ಮತ್ತು ಜನರಿಗಾಗಿ ಕೆಲಸ ಮಾಡುತ್ತೇನೆ. ನನ್ನ ಕುಟುಂಬ ಇರುವುದರಿಂದ ನಾನು ಕೂಡ ಗುಜರಾತ್‌ನಲ್ಲಿ ಇರುತ್ತೇನೆ. ನನಗೆ ಬಹರಂಪುರದಲ್ಲಿ ಹೊಸ ಕುಟುಂಬ ಸಿಕ್ಕಿದೆ. ನಾನು ದೀದಿ (ಮಮತಾ ಬ್ಯಾನರ್ಜಿ) ಜೊತೆ ಮಾತನಾಡಿದ್ದೇನೆ, ಅವರು ಸಂತೋಷವಾಗಿದ್ದಾರೆ," ಎಂದು ಯೂಸುಫ್ ಪಠಾಣ್ ತಿಳಿಸಿದರು.

"ನಾನು ಪ್ರಯತ್ನಿಸಿದೆ, ಆದರೆ ಸೋತಿದ್ದೇನೆ. ಆದರೆ ರಾಜಕೀಯದಲ್ಲಿ ಸೋಲು ಇಲ್ಲ. ಯೂಸುಫ್ ಪಠಾಣ್ ಅವರಿಗೆ ಅಭಿನಂದನೆಗಳು. ಇಂದು ಯಾರೋ ಗೆಲ್ಲುತ್ತಾರೆ, ಇನ್ನೊಂದು ದಿನ ವಿರೋಧ ಪಕ್ಷದವರು ಗೆಲ್ಲುತ್ತಾರೆ," ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೋಲಿನ ನಂತರ ಪ್ರತಿಕ್ರಿಯಿಸಿದರು.

ಮತ್ತೊಬ್ಬ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಗೆಲುವು

ಇದೇ ವೇಳೆ, ಮತ್ತೊಬ್ಬ ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರು ಬರ್ಧಮಾನ್-ದುರ್ಗಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದಿಲೀಪ್ ಘೋಷ್ ಅವರನ್ನು ಸೋಲಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಟಿಎಂಸಿ ಅಭ್ಯರ್ಥಿ ಕೀರ್ತಿ ಆಜಾದ್ 7,20,667 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ದಿಲೀಪ್ ಘೋಷ್ 5,82,686 ಮತಗಳನ್ನು ಪಡೆದರು. ಈ ಮೂಲಕ 1,37,981 ಮತಗಳಿಂದ ಮಾಜಿ ಕ್ರಿಕೆಟಿಗ ಗೆಲುವು ಸಾಧಿಸಿದರು.

ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಈ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷವನ್ನು ಪ್ರತಿನಿಧಿಸಿದ್ದಾರೆ. ಆದರೆ ಗೋವಾ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ನವೆಂಬರ್ 2021ರಲ್ಲಿ ಟಿಎಂಸಿ ಪಕ್ಷವನ್ನು ಸೇರಿದರು.

Story first published: Tuesday, June 4, 2024, 18:34 [IST]
Other articles published on Jun 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+