ಆಗಸ್ಟ್ 14 ಬುಧವಾರ, ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ. ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನೂ 22 ವರ್ಷದ ಮನು ಭಾಕರ್ ಸಾಬೀತುಪಡಿಸಿದ್ದಾರೆ.
ಭಾಕರ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆ ಎರಡರಲ್ಲೂ ಕಂಚಿನ ಪದಕ ಗೆದ್ದು ವಿಶೇಷ ದಾಖಲೆ ಬರೆದಿದ್ದಾರೆ. ಒಲಿಂಪಿಕ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮನು ಭಾಕರ್ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಅವರು ತಮ್ಮ ಅಸಾಧಾರಣ ಸಾಧನೆಗಳಿಂದ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದು ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಿದ್ದಾರೆ.

ಇದೀಗ ಮನು ಭಾಕರ್ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. 'ದಿ ವರ್ಡ್ ಮ್ಯಾಗಜೀನ್' ಮುಖಪುಟವನ್ನು ಮನು ಭಾಕರ್ ಅಲಂಕರಿಸಿದ್ದಾರೆ. ಈ ಮೂಲಕ ದಿ ವರ್ಡ್ ಮ್ಯಾಗಜೀನ್ ಮನು ಭಾಕರ್ ಅವರ ಯಶಸ್ಸಿನ ಶಿಖರದ ಎತ್ತರವನ್ನು ತೋರಿಸುತ್ತಿದೆ. ದಿ ವರ್ಡ್ ಮ್ಯಾಗಜೀನ್ ಮುಖಪುಟವನ್ನು ಅಲಂಕರಿಸುವುದು ಅಷ್ಟು ಸುಲಭವಲ್ಲ.
ಏಕೆಂದರೆ ದಿ ವರ್ಡ್ ಮ್ಯಾಗಜೀನ್ ಪ್ರಕಟಣೆ ಮಾರುಕಟ್ಟೆಯಲ್ಲಿ ತನ್ನದೆ ಛಾಪು ಮೂಡಿಸಿದ್ದು, ಫ್ಯಾಷನ್, ಸೌಂದರ್ಯ, ಐಷಾರಾಮಿ , ಕಲೆ ಮತ್ತು ಸಂಸ್ಕೃತಿಯಂತಹ ವೈಶಿಷ್ಟ್ಯಗಳ ಪ್ರಕಟಣೆ ಮಾಡುವುದರಲ್ಲಿ ಹೆಸರುವಾಸಿಯಾಗಿದೆ.
ದಿ ವರ್ಡ್ ಮ್ಯಾಗಜೀನ್‌ನ ಪ್ರಧಾನ ಸಂಪಾದಕಿ ನಂದಿನಿ ಭಲ್ಲಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮನು ತನ್ನ ಐತಿಹಾಸಿಕ ಗೆಲುವಿನ ಸಂತಸದ ಕ್ಷಣಗಳನ್ನು ಕುರಿತು ಮಾತನಾಡಿದ್ದಾರೆ. ಭಾರತಕ್ಕೆ ಹೆಮ್ಮೆ ತಂದಿರುವ ಬಗ್ಗೆ ಮನು ಅವರಿಗೆ ಕೇಳಿದಾಗ, ಹಲವು ವರ್ಷಗಳಿಂದ ಜನರು ನನಗೆ ನೀಡುತ್ತಿರುವ ಪ್ರೀತಿಗೆ ಕೃತಜ್ಞನಾಗಿದ್ದೇನೆ. ಇದೀಗ ಇನ್ನಷ್ಟು ಕೃತಜ್ಞತೆ ಮತ್ತು ಸಂತೋಷದಿಂದ ಇದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಕುಟುಂಬದ ಬಗ್ಗೆ ಮಾತಾನಾಡಿರುವ ಮನು, "ಆಂತರಿಕ ಶಕ್ತಿ ಕುಟುಂಬದ ಬೆಂಬಲದಿಂದ ಬರಬೇಕು. ಇದು ಒಬ್ಬ ವ್ಯಕ್ತಿಯ ಕೆಲಸವಾಗಲಾರದು. ಸ್ವತಂತ್ರವಾಗಿರುವುದು ನಿಮ್ಮನ್ನು ನಿಮ್ಮಲ್ಲಿ ನಿಜವಾಗಿಯೂ ಬಲಶಾಲಿಯನ್ನಾಗಿ ಮಾಡುತ್ತದೆ ಎಂದಿದ್ದಾರೆ.
ಕ್ರೀಡೆಗಳು ಜನರನ್ನು ಹೇಗೆ ಒಂದುಗೂಡಿಸುತ್ತವೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಮನು, ಕ್ರೀಡೆ ಮತ್ತು ಕ್ರೀಡಾ ಮನೋಭಾವವು ಮಾನವೀಯತೆಗೆ ಸಂಬಂಧಿಸಿದೆ. ಕ್ರೀಡೆಯಲ್ಲಿ ನಿಮ್ಮ ಸಂಸ್ಕೃತಿ, ಗುರುತು, ಹಿನ್ನೆಲೆ ಇವು ಯಾವುದೂ ಮುಖ್ಯವಲ್ಲ. ಮುಖ್ಯವಾದ ಏಕೈಕ ವಿಷಯವೆಂದರೆ ನೀವು ಸ್ಪರ್ಧೆಯಲ್ಲಿ ನೀಡುವ ಪ್ರದರ್ಶನ. ಇದೊಂದೆ ನಿಮ್ಮನ್ನು ಜನರೊಂದಿಗೆ ಒಂದುಗೂಡಿಸುತ್ತದೆ ಎಂದು ತಿಳಿಸಿದ್ದಾರೆ.