ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನಮೋಹಕ ಪ್ರದರ್ಶನ ನೀಡಿ ಭಾರತಕ್ಕೆ ಹೆಮ್ಮೆ ತಂದಿರುವ ಶೂಟರ್ ಮನು ಭಾಕರ್. ತಮ್ಮ ಸ್ಥಿರ ಪ್ರದರ್ಶನದಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಡಬಲ್ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಈ ಮೂಲಕ ಮನು ದೇಶಕ್ಕೆ ಕೀರ್ತಿ ತಂದಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಮೂರು ಪದಕ ಗೆಲ್ಲುವ ಸುವರ್ಣ ಅವಕಾಶ ಅವರಿಗಿತ್ತು. ಆದರೆ ಅವರು ಕೊಂಚದರಲ್ಲಿ ಕಳೆದುಕೊಂಡರು.
ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಮನು ಭಾರೀ ಸುದ್ದಿಯಲ್ಲಿದ್ದಾರೆ. ಹಲವು ಬ್ರ್ಯಾಂಡ್‌ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಅಲ್ಲದೆ ಇವರ ಬ್ರ್ಯಾಂಡ್ ವ್ಯಾಲ್ಯೂ ಸಹ ಬೆಳೆದಿದೆ. ಈ ಮಧ್ಯೆ ಮನು ಭಾಕರ್ ಹಾಗೂ ಖ್ಯಾತ ಅಥ್ಲೀಟ್ ನೀರಜ್ ಚೋಪ್ರಾ ಅವರ ಮದುವೆ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಗೆ ಸಂಬಂಧಿಸಿದಂತೆ ಮನು ಪಾಲಕರು ಸಹ ತುಟಿ ಬಿಚ್ಚಿದ್ದರು. ಆ ಬಳಿಕ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇತ್ತೀಚಿಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಮನು ತಮ್ಮ ನೆಚ್ಚಿನ ಅಥ್ಲೀಟ್ ಯಾರು ಎಂದು ತಿಳಿಸಿದ್ದಾರೆ.

ಒಂದು ಕಾರ್ಯಕ್ರಮದಲ್ಲಿ ಮನು ಭಾಕರ್ ಅವರಿಗೆ ನಿಮ್ಮ ನೆಚ್ಚಿನ ಕ್ರೀಡಾ ಪಟು ಯಾರು ಎಂದು ಪ್ರಶ್ನೆ ಕೇಳಲಾಯಿತು. ಆಗ ಮನು, ನಾನು ಹಲವು ಕ್ರೀಡಾಪಟುಗಳನ್ನು ಇಷ್ಟ ಪಡುತ್ತೇನೆ. ಜಮೈಕಾದ ಉಸೇನ್ ಬೋಲ್ಟ್ ಇಷ್ಟ. ಉಸೇನ್ ಬೋಲ್ಟ್ ಅವರ ಪುಸ್ತಕವನ್ನು ಹಲವು ಬಾರಿ ಓದಿದ್ದೇನೆ. ಹಲವು ಬಾರಿ ಅವರನ್ನು ಭೇಟಿ ಆಗುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಈ ಅಥ್ಲೀಟ್‌ಗಳ ಜೊತೆ ಸಮಯ ಕಳೆಯುವ ಬಯಕೆ
ಭಾರತದಲ್ಲಿ ತಮ್ಮ ನೆಚ್ಚಿನ ಅಥ್ಲೀಟ್ ಬಗ್ಗೆ ಸಹ ಮನು ಮಾತನಾಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಸರ್ ಮತ್ತು ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಕ್ರೀಡಾಪಟುಗಳು ಎಂದು ಹೇಳಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮನು ಭಾಕರ್ ಅವರು ಸಚಿನ್, ಧೋನಿ ಅಥವಾ ವಿರಾಟ್ ಅವರೊಂದಿಗೆ ಒಂದು ಗಂಟೆಯಾದರೂ ಸಮಯ ಕಳೆಯಬೇಕು ಎಂಬ ಆಶಯ ಹೊಂದಿದ್ದಾರೆ.

ಈ ಸಂದರ್ಭದಲ್ಲಿ ಮನು ನೀರಜ್ ಚೋಪ್ರಾ ಅವರ ಹೆಸರನ್ನು ತೆಗೆದುಕೊಳ್ಳಲಿಲ್ಲ. ನೀರಜ್, ಮನು ಭಾಕರ್ ಕೂಡ ಅವರಿಗೆ ಉತ್ತಮ ಸ್ನೇಹಿತರು. ಆದರೆ ಮನು ಭಾಕರ್ ಅವರು ತಮ್ಮ ನೆಚ್ಚಿನ ಭಾರತೀಯ ಅಥ್ಲೀಟ್‌ಗಳಲ್ಲಿ ಜಾವೆಲಿನ್ ಥ್ರೋ ತಾರೆಗೆ ಸ್ಥಾನ ನೀಡಲಿಲ್ಲ. ಭಾರತದಲ್ಲಿ ಕ್ರೀಡೆಗಳನ್ನು ಹೊಸ ಎತ್ತರಕ್ಕೆ ಕೊಂಡಯ್ಯುವ ಬಯಕೆ ಇರುವುದಾಗಿ ಮನು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತೀಯ ಅಥ್ಲೀಟ್‌ಗಳು ಹೆಚ್ಚು ಪದಕ ಗೆಲ್ಲಬೇಕು ಎಂದಿದ್ದಾರೆ.
ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ 10 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಪಡೆದಿದ್ದಾರೆ. ಅಲ್ಲದೆ ಮಿಶ್ರ ತಂಡ ವಿಭಾಗದಲ್ಲಿ ಸರ್‌ಬಜೋತ್ ಸಿಂಗ್ ಅವರೊಂದಿಗೆ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದಾರೆ.