ಬಾಕ್ಸಿಂಗಿನ ಮಹಾ ಕದನ ಗೆದ್ದು ಹೊಸ ದಾಖಲೆ ಬರೆದ ಫ್ಲಾಯ್ಡ್ ಮೇವೆದರ್
ಅಮೆರಿಕಾ, ಆಗಸ್ಟ್ 27: ಇಂದು ಇಲ್ಲಿನ ಲಾಸ್ ವೆಗಾಸ್ ನಲ್ಲಿ ನಡೆದ ಬಾಕ್ಸಿಂಗ್ ಲೋಕದ ಮಹಾ ಕದನದಲ್ಲಿ ಅಮೆರಿಕಾದ ಫ್ಲಾಯ್ಡ್ ಮೇವೆದರ್ ಐರಿಷ್ ನ ಕಾನರ್ ಮೆಕ್ ಗ್ರೆಗರ್ ರನ್ನು ಸೋಲಿಸಿದ್ದಾರೆ. ಪಂದ್ಯದ 10ನೇ ಸುತ್ತಿನಲ್ಲಿ ಬಾಕ್ಸಿಂಗ್ ಧ್ರುವತಾರೆ ಮೇವೆದರ್ ಮೆಕ್ ಗ್ರೆಗರ್ ರನ್ನು ಸೋಲಿಸಿದರು.
ಈ ಮೂಲಕ ಸತತ 50ನೇ ಪಂದ್ಯದಲ್ಲೂ ಗೆದ್ದು ಮೇವೆದರ್ ಹೊಸ ದಾಖಲೆ ಬರೆದಿದ್ದಾರೆ.
ಇಂದು ನಡೆದ ಮೆಗಾ ಪಂದ್ಯ ಬಾಕ್ಸಿಂಗ್ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ಪಂದ್ಯವಾಗಿತ್ತು. ಇದರಲ್ಲಿ ಮೇವೆದರ್ ಸುಲಭ ಜಯ ಸಾಧಿಸುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ, ಗ್ರೆಗರ್ ಅಂದುಕೊಂಡದ್ದಕ್ಕಿಂತ ತುರುಸಿನ ಸ್ಫರ್ಧೆ ನೀಡಿದ್ದರಿಂದ ಪಂದ್ಯ ದೀರ್ಘಾವಧಿವರೆಗೆ ನಡೆಯಿತು. ಹೀಗಿದ್ದೂ 5 ಬಾರಿಯ ವಿಶ್ವ ಚಾಂಪಿಯನ್ ಮೇವೆದರ್ ಗೆಲುವು ಸಾಧಿಸಿದರು.

ಮೇವೆದರ್ ಗೆ 40, ಗ್ರೆಗರ್ 29!
ಸದ್ಯ ಮೇವೆದರ್ ಗೆ 40 ವರ್ಷ. ನಿವೃತ್ತಿಯ ಅಂಚಿನಲ್ಲಿರುವ ಈ ಬಾಕ್ಸಿಂಗ್ ಸ್ಟಾರ್ ಗೆ 29ರ ಹರೆಯದ ಮೆಕ್ ಗ್ರೆಗರ್ ಪ್ರಬಲ ಸ್ಪರ್ಧೆ ಒಡ್ಡಿದರು. ಆರಂಭದ ಸುತ್ತುಗಳಲ್ಲಿ ಮೇವೆದರ್ ಸೋತರೂ ನಂತರ ನಿಧಾನಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಿ ಜಯ ಸಾಧಿಸಿದರು.

ಸತತ 50 ಗೆಲುವು
ಈ ಮೂಲಕ ಒಂದೇ ಒಂದು ಡ್ರಾ ಹಾಗೂ ಸೋಲಿಲ್ಲದೆ ಸತತ 50 ಗೆಲುವು ಸಾಧಿಸಿದರು ಮೇವೆದರ್. ಜಯದೊಂದಿಗೆ ಸತತ 49 ಗೆಲುವು ಸಾಧಿಸಿದ್ದ ರಾಕಿ ಮಾರ್ಕಿನೊ ದಾಖಲೆ ಮುರಿದಿದ್ದಾರೆ ಮೇವೆದರ್.

ಇದೇ ಕೊನೆಯ ಪಂದ್ಯ
ಗೆಲುವಿನ ನಂತರ ಮಾತನಾಡಿದ ಮೇವೆದರ್, "ನಿಜವಾಗಿಯೂ ಇದು ನನ್ನ ಕೊನೆಯ ಸ್ಪರ್ಧೆ. 50-0 ಕೇಳಿಸಲು ಹಿತವಾಗಿದೆ. ನಾನು 'ಹಾಲ್ ಆಫ್ ಫೇಮ್' ಪ್ರವೇಶಿಸುವುದನ್ನು ಎದುರು ನೋಡುತ್ತಿದ್ದೇನೆ," ಎಂದು ಹೇಳಿದ ಅವರು, "ನನಗೆ ಈ ಸಾಧನೆ ಮಾಡಲು ಅತ್ಯುತ್ತಮ ಸ್ಪರ್ಧಿ ಸಿಕ್ಕಿದರು," ಎಂದು ಮೆಕ್ ಗ್ರಗೊರ್ ರನ್ನು ಹೊಗಳಿದರು.

ದುಬಾರಿ ಬೆಲ್ಟ್ ಗೆದ್ದ ಮೇವೆದರ್
ಇಂದಿನ ಸ್ಪರ್ಧೆಗೆ ಕಳೆ ನೀಡಿದ್ದು ಫ್ಲಾಯ್ಡ್ ಮೇವೆದರ್ ಗೆದ್ದ ದುಬಾರಿ ಬೆಲ್ಟ್. ಸಾಮಾನ್ಯವಾಗಿ ಸ್ಪರ್ಧೆ ಗೆದ್ದವರಿಗೆ ಹಸಿರು ಬಣ್ಣದ ಬೆಲ್ಟ್ ನೀಡಲಾಗುತ್ತದೆ. ಆದರೆ ಈ ಬಾರಿ ವರ್ಲ್ಡ್ ಬಾಕ್ಸಿಂಗ್ ಕೌನ್ಸಿಲ್ ವಿಶೇಷ ಬೆಲ್ಟ್ ತಯಾರಿಸಿತ್ತು.
ಮೂಲಗಳ ಪ್ರಕಾರ ಈ ಬೆಲ್ಟ್ ಬರೋಬ್ಬರಿ 1.5 ಕೆಜಿ 24 ಕ್ಯಾರೆಟ್ ಚಿನ್ನವನ್ನು ಒಳಗೊಂಡಿದೆ. ಜತೆಗೆ 3,360 ವಜ್ರಗಳು, 600 ನೀಲಮಣಿಗಳು, 160 ಪಚ್ಚೆಕಲ್ಲುಗಳು ಈ ಬೆಲ್ಟ್ ನಲ್ಲಿವೆ.
ಈ ಗೆಲುವಿನೊಂದಿಗೆ ಮೇವೆದರ್ ಅಂದಾಜು 1900 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications