For Quick Alerts
ALLOW NOTIFICATIONS  
For Daily Alerts

ಸ್ಟೆತಸ್ಕೋಪ್ ಹಿಡಿಯುವ ಕೈಯಲ್ಲಿ ಚಿನ್ನಿದಾಂಡು, ಲಗೋರಿ, ಬುಗುರಿ; ದೇಸಿ ಕ್ರೀಡೆಗಳನ್ನಾಡಿದ ಭವಿಷ್ಯದ ವೈದ್ಯೆಯರು

By ದಾವಣಗೆರೆ ಪ್ರತಿನಿಧಿ

ದಾವಣಗೆರೆ, ಆಗಸ್ಟ್ 7: ನಿತ್ಯವೂ ಕ್ಲಾಸ್, ಪ್ರಾಕ್ಟಿಕಲ್, ಥಿಯರಿ ಎಂದೆಲ್ಲಾ ಓಡಾಡುತ್ತಾ, ಕೈಯಲ್ಲಿ ಸ್ಟೆತಸ್ಕೋಪ್, ನೆಫ್ರಾನ್ ಧರಿಸಿ ಯಾವಾಗಲೂ ಓದು ಅಂತಾನೇ ಬ್ಯುಸಿ ಇರುತ್ತಾರೆ. ಬರೀ ಅಧ್ಯಯನದಲ್ಲೇ ಮುಳುಗಿ ಹೋಗಿದವರಾಗಿದ್ದು, ಆಸ್ಪತ್ರೆಗಳಿಗೆ ಹೋಗಿ ರೋಗಿಗಳ ಆರೈಕೆ ಮಾಡುತ್ತಿರುತ್ತಾರೆ.

ದೇಸಿ ಕ್ರೀಡೆಗಳ ಗಂಧ-ಗಾಳಿಯೂ ಗೊತ್ತಿಲ್ಲದ ಕೆಲವರು, ನಗರ ಪ್ರದೇಶದಲ್ಲೇ ಹುಟ್ಟಿ, ಬೆಳೆದು, ಓದಿದವರಾಗಿದ್ದಾರೆ. ಅಂತಹವರಿಗೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆಟಗಳು ಇವರಿಗೆಲ್ಲಾ ಒಂದಕ್ಕಿಂತ ಒಂದು ಹೊಸದು ಮತ್ತು ಸ್ಪೆಷಲ್ ಆಗಿದ್ದವು.

Medical Students Celebrated With Playing Rural Sports in Davanagere

ಇವರೆಲ್ಲಾ ಇಂತಹ ದೇಸಿ ಕ್ರೀಡೆಗಳನ್ನು ಆಡಿದ್ದು ಕಡಿಮೆಯೇ. ಎಷ್ಟೋ ಮಂದಿಗೆ ಈ ಆಟಗಳು ಗೊತ್ತಿದ್ದರೂ ಆಡಿದ್ದು ಕಡಿಮೆಯೇ. ಆದರೆ ಪ್ರತಿಯೊಬ್ಬರು ನುರಿತ ಆಟಗಾರರಂತೆ ಪಾಲ್ಗೊಂಡು, ಕುಣಿದು ಕುಪ್ಪಳಿಸಿದರು. ಆಟವಾಡಿ ನಲಿದರು. ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಲು ಕಾರಣ, ದಾವಣಗೆರೆ ನಗರದ ಜೆ.ಜೆ.ಎಂ ಮೆಡಿಕಲ್ ಕಾಲೇಜಿನ "ಮಾನ್ಸೂನ್ ಫಿಯಸ್ಟ'ದ ಹೊರಾಂಗಣ ದೇಸಿ ಆಟಗಳು.

ದೇಸಿ ಕ್ರೀಡೆಗಳ ಕಲರವ

ಲಗೋರಿ, ಗೋಲಿ, ಚಿನ್ನಿದಾಂಡು, ಬುಗುರಿ ಮತ್ತು ಕುಂಟೆ ಬಿಲ್ಲೆ ಆಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವೈದ್ಯಕೀಯ ವಿದ್ಯಾರ್ಥಿಗಳು ಖುಷಿಪಟ್ಟರು. ಗ್ರಾಮೀಣ ಪ್ರದೇಶದಲ್ಲಿ ಆಟವಾಡುವ ಕುಂಟೆ ಬಿಲ್ಲೆ ಆಡಿದ ವೈದ್ಯ ವಿದ್ಯಾರ್ಥಿನಿಯರು, ಬಾಕ್ಸ್‌ನೊಳಗೆ ಹೆಜ್ಜೆ ಹಾಕುತ್ತಾ ಸಂತಸಗೊಂಡರು.

ಲಗೋರಿಯ ಸೊಬಗು

ಲಗೋರಿ ಆಟದಲ್ಲಿ ಪಾಲ್ಗೊಂಡ ವೈದ್ಯ ವಿದ್ಯಾರ್ಥಿನಿಯರು ಚೆನ್ನಾಗಿಯೇ ಆಡಿದರು. ಲಗೋರಿ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಇತ್ತೀಚಿನ ದಿನಗಳ ಒತ್ತಡದ ಜೀವನದಲ್ಲಿ ಸ್ನೇಹಿತರೆಲ್ಲಾ ಒಟ್ಟಿಗೆ ಸೇರಿ ಆಟವಾಡುವುದು ಕಡಿಮೆ. ಸ್ನೇಹಿತರೆಲ್ಲರೂ ಸೇರಿಕೊಂಡು "ಫ್ರೆಂಡ್‌ಶಿಪ್ ಡೇ' ಸಂಭ್ರಮದಲ್ಲಿಯೇ ಆಚರಿಸಿದರು. ಕಾಕತಾಳೀಯ ಎಂಬಂತೆ ಭಾನುವಾರ ಸ್ನೇಹಿತರ ದಿನವಾಗಿತ್ತು. ಅಂದೇ ಎಲ್ಲಾ ಸಹಪಾಠಿಗಳು ಒಟ್ಟಿಗೆ ಸೇರಿ ಈ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದು ಸಹ ವಿಶೇಷವಾಗಿತ್ತು.

Medical Students Celebrated With Playing Rural Sports in Davanagere

ಬುಗುರಿ ಆಡಿಸಿದ ಭವಿಷ್ಯದ ವೈದ್ಯೆಯರು

ಇನ್ನು ಬುಗುರಿ ಆಡಿಸುವುದು ಅಷ್ಟು ಸುಲಭವಲ್ಲ. ಬುಗುರಿಗೆ ದಾರ ಸುತ್ತಿ ಅದನ್ನು ಗಿರ ಗಿರ ಅಂತಾ ತಿರುಗಿಸುವುದು ಅಂದರೆ ಸುಲಭದ ಮಾತಾ. ಪರಿಣಿತಿ ಹೊಂದಿರುವವರೇ ಕೆಲವೊಮ್ಮೆ ಎಡವುತ್ತಾರೆ. ಆದರೆ ಕೆಲ ಭವಿಷ್ಯದ ವೈದ್ಯೆಯರು ತಮಗೆ ಆಟ ಗೊತ್ತಿದೆ ಎಂಬಂತೆ ಗಿರ ಗಿರ ಅಂತಾ ಬುಗುರಿ ತಿರುಗಿಸಿದರು. ಕೆಲವೊಬ್ಬರು ಕೈಯ ಮೇಲೆ ಬುಗುರಿ ಹಾಕಿಕೊಳ್ಳುತ್ತಾ ಅಭ್ಯಾಸ ಮಾಡುತ್ತಿರುವುದು ಕಂಡುಬಂತು.

ಗೋಲಿ ಮಾರ್

ಇನ್ನು ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಗೋಲಿ ಆಟವೂ ಗಮನ ಸೆಳೆಯಿತು. ಸಣ್ಣ ಸಣ್ಣ ಗೋಲಿಗಳನ್ನು ಹಿಡಿದು ಗೋಲಿ ಆಟದಲ್ಲಿ ಪಾಲ್ಗೊಂಡ ಮೆಡಿಕಲ್ ವಿದ್ಯಾರ್ಥಿಗಳು ಚೆನ್ನಾಗಿಯೇ ಆಡಿದರು. ಎಲ್ಲರೂ ಖುಷಿ ಖುಷಿಯಿಂದಲೇ ಪಾಲ್ಗೊಂಡು ಸಂಭ್ರಮ ಪಟ್ಟಿದ್ದು ಗಮನ ಸೆಳೆಯಿತು.

ಯೋಗ ಗುರುಗಳು ಏನಂದ್ರು?

ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗ ಗುರುಗಳಾದ ಮಂಜುನಾಥ್ ಮಾತನಾಡಿ, "ಇಂತಹ ದೇಸಿ ಆಟಗಳಲ್ಲಿ ಆಕ್ಯುಪಂಚರ್ ಚಿಕಿತ್ಸೆ ಅಡಗಿರುತ್ತದೆ. ಇಂಥ ಆಟಗಳನ್ನು ಆಡುವುದರಿಂದ ಎಷ್ಟೋ ನರರೋಗಗಳು ಬಾರದಂತೆ
ತಡೆಯಬಹುದು," ಎಂದರು.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಪ್ರಾಂಶುಪಾಲರ ಡಾ. ಎಸ್.ಬಿ. ಮುರುಗೇಶ್ ಮಾತನಾಡಿ, "ಇಂತಹ ದೇಸಿ ಆಟಗಳಿಂದ ನಮ್ಮ ದೇಹ ಅಂಗಾಂಗಗಳು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗೋಲಿ, ಬುಗುರಿಯಂತಹ ಆಟಗಳಿಂದ ನಮ್ಮ ಮೆದುಳು ಚುರುಕುಗೊಂಡು ದೃಷ್ಟಿ ಉತ್ತಮವಾಗುತ್ತದೆ. ಇಂತಹ ಆಟಗಳಿಂದ ಆಗುವ ದೈಹಿಕ ಹಾಗೂ ಮಾನಸಿಕ ಉಪಯೋಗಗಳನ್ನು ಎಲ್ಲರಿಗೂ ತಿಳಿಸುವುದು ಈ ದೇಸಿ ಆಟಗಳ ಮುಖ್ಯ ಉದ್ದೇಶವಾಗಿದೆ. ನಮ್ಮ ಕಾಲೇಜಿನಿಂದ ಇಂತಹ ಒಂದು ಉತ್ಸವವನ್ನು ಆಯೋಜಿಸಲು ಅವಕಾಶ ಮಾಡಿಕೊಟ್ಟ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ," ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಕ್ರೀಡೆಗೆ ಚಾಲನೆ ನೀಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲಕೃಷ್ಣ, ವಿದ್ಯಾರ್ಥಿ ಸಂಘದ ಕ್ರೀಡಾ ಸಮಿತಿಯ ಆಸ್ಟಿನ್, ಚಂದನ್, ನಿರೀಕ್ಷಾ, ಮಹಾಲಕ್ಷ್ಮಿ, ನಿಖಿಲ್, ದೀಪ್ ಅವರು ಕ್ರೀಡೆಗಳ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡಿದ್ದರು.

ವೇದಿಕೆಯಲ್ಲಿ ಯೋಗ ಗುರು ಗೀತಮ್ಮ, ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ್ ತೆಂಬದ್, ಡಾ. ಶಿವಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಾತ್ವಿಕ್ ಅರಸ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

Story first published: Monday, August 7, 2023, 18:35 [IST]
Other articles published on Aug 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+