
ವಾಷಿಂಗ್ಟನ್, ಆಗಸ್ಟ್ 14: ಅಮೆರಿಕಾದ ಮಾಜಿ ಬಾಸ್ಕೆಟ್‌ಬಾಲ್ ಆಟಗಾರ ಮೈಕಲ್ ಜೋರ್ಡನ್ ಅವರ ಒಂದು ಜೊತೆ ಶೂಗಳು (ಸ್ನೀಕರ್ಸ್) ಬರೋಬ್ಬರಿ $615,000 (4,60,80,043 ರೂ.) ಬೆಲೆಗೆ ಮಾರಾಟವಾಗಿದೆ. ಕ್ರಿಸ್ಟೀಸ್ ಹರಾಜು ಸಂಸ್ಥೆ ಈ ವಿಚಾರವನ್ನು ಗುರುವಾರ (ಆಗಸ್ಟ್ 13) ಖಾತರಿಪಡಿಸಿದೆ.
ಆಟದ ವೇಳೆ ಧರಿಸಿದ್ದ ಅಪರೂದ ಸ್ನೀಕರ್ಸ್ ಅನ್ನು ಮೈಕಲ್ ಜೋರ್ಡನ್ ಅವರು ಆನ್‌ಲೈನಲ್‌ನಲ್ಲಿ ಹರಾಜಿಗಿಟ್ಟಿದ್ದರು. ಜುಲೈ 30ರಿಂದ ಆಗಸ್ಟ್ 13ರ ವರೆಗೆ ಹರಾಜು ನಡೆದಿತ್ತು. ಕೇವಲ ಎರಡು ವಾರಗಳ ಅವಧಿಯಲ್ಲಿ ಶೂಗಳಿಗೆ 4.6 ಕೋ.ರೂ. ಮೌಲ್ಯ ಲಭಿಸಿದೆ.

ನೈಕ್ ಸಂಸ್ಥೆಯ ಅತೀ ಅಪರೂಪದಲ್ಲಿ ಅಪರೂಪದ 'ನೈಕ್ ಏರ್ ಜೋರ್ಡನ್ 1 ಹೈಸ್' ಮಾದರಿಯ ಶೂ ಅನ್ನು 1985ರಲ್ಲಿ ನಡೆದಿದ್ದ ಎನ್‌ಬಿಎ ಪ್ರದರ್ಶನ ಪಂದ್ಯದಲ್ಲಿ ಚಿಕಾಗೋ ಬುಲ್ಸ್ ಪರ ಆಡಿದ್ದ ಮೈಕಲ್ ಜೋರ್ಡನ್ ಧರಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ.
14 ವರ್ಷಗಳ ಕಾಲ ಎನ್‌ಬಿಎ ವೃತ್ತಿ ಬದುಕು ಕಂಡಿದ್ದ ಜೋರ್ಡನ್ ಅವರ ಗೌರವಾರ್ಥವಾಗಿ ಕ್ರಿಸ್ಟೀಸ್ ಸಂಸ್ಥೆ ಒಟ್ಟಿಗೆ 9 ಜೊತೆ ಜೋರ್ಡನ್ ಶೂಗಳನ್ನು ಮಾರಾಟ ನಡೆಸಿದೆ ಎಂದು ವರದಿ ಹೇಳಿದೆ.