ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಕ್ರಿಕೆಟ್ ವೃತ್ತಿಜೀವನದಲ್ಲಿ ಉನ್ನತ ಸಾಧನೆಗಳನ್ನು ಹೊಂದಿದ್ದಾರೆ. ಬ್ಯಾಟರ್ ಮತ್ತು ವಿಕೆಟ್ ಕೀಪರ್ ಜೊತೆಗೆ ನಾಯಕನಾಗಿ ತಂಡವನ್ನು ಚಾಕಚಕ್ಯತೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಎಂಎಸ್ ಧೋನಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಎಲ್ಲಾ ಮೂರು ಐಸಿಸಿ ಪಂದ್ಯಾವಳಿಗಳಾದ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವದ ಮೊದಲ ನಾಯಕರೆನಿಸಿದ್ದಾರೆ.
1981ರಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಜನಿಸಿದ ಮಹೇಂದ್ರ ಸಿಂಗ್ ಧೋನಿ ಅವರು ಜುಲೈ 7ರಂದು 42ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅವರ ಅಭಿಮಾನಿಗಳಿಂದ ಅದ್ಧೂರಿ ತಯಾರಿ ನಡೆಸಲಾಗುತ್ತಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಅಭಿಮಾನಿಗಳು ಎಂಎಸ್ ಧೋನಿ ಅವರ 42ನೇ ಹುಟ್ಟುಹಬ್ಬಕ್ಕೆ ಭರ್ಜರಿ ಸಿದ್ಧತೆಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

ತಮ್ಮ ಆಳವಾದ ಅಭಿಮಾನವನ್ನು ಪ್ರದರ್ಶಿಸಲು ಉತ್ಸುಕರಾಗಿರುವ ಎಂಎಸ್ ಧೋನಿ ಅಭಿಮಾನಿಗಳು ಆಂಧ್ರಪ್ರದೇಶದ ನಂದಿಗಾಮದಲ್ಲಿ ಮಾಜಿ ಭಾರತೀಯ ನಾಯಕನ 77 ಅಡಿ ಎತ್ತರದ ಕಟೌಟ್ ಅನ್ನು ಅನಾವರಣಗೊಳಿಸಿದ್ದಾರೆ.
ಅದೇ ರೀತಿ ತೆಲಂಗಾಣದ ಆರ್‌ಟಿಸಿ ಎಕ್ಸ್ ರೋಡ್ಸ್ ಹೈದರಾಬಾದ್‌ನಲ್ಲಿ 52 ಅಡಿ ಕಟೌಟ್ ನಿಲ್ಲಿಸಲಾಗಿದೆ. ಎತ್ತರದ ಕಟೌಟ್‌ನಲ್ಲಿ ಎಂಎಸ್ ಧೋನಿ ಅವರು ಭಾರತೀಯ ತಂಡದ ಜೆರ್ಸಿ, ಹೆಲ್ಮೆಟ್ ಮತ್ತು ಕೈಯಲ್ಲಿ ಬ್ಯಾಟ್ ಹಿಡಿದು ಮಿಂಚುತ್ತಿದ್ದಾರೆ.
ಎಂಎಸ್ ಧೋನಿ ಅವರು ಇತ್ತೀಚಿಗೆ 2023ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದರು. ರೋಹಿತ್ ಶರ್ಮಾ ನಂತರ ಈ ಸಾಧನೆ ಮಾಡಿದ ಎರಡನೇ ನಾಯಕರೆನಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ಸುಮಾರು 15 ವರ್ಷಗಳ ವೃತ್ತಿಜೀವನದೊಂದಿಗೆ, ಎಂಎಸ್ ಧೋನಿ ಪ್ರತಿಷ್ಠಿತ ಟ್ರೋಫಿಗಳು ಮತ್ತು ಪುರಸ್ಕಾರಗಳನ್ನು ಸಂಗ್ರಹಿಸಿದ್ದಾರೆ. ಎಂಎಸ್ ಧೋನಿ ನಾಯಕತ್ವದ ಅವಧಿಯಲ್ಲಿ 2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು.
ನಂತರ ಎಂಎಸ್ ಧೋನಿಯ ಅಸಾಧಾರಣ ನಾಯಕತ್ವ ಕೌಶಲ್ಯವು 2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಗೆಲುವಿಗೆ ಕಾರಣವಾಯಿತು. ಬಳಿಕ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಭಾರತದ ಯಶಸ್ಸು ಸಾಧಿಸಿತು.
ಎಂಎಸ್ ಧೋನಿ ಅವರ 42ನೇ ಹುಟ್ಟುಹಬ್ಬದ ದಿನದಂದು ದೇಶದ ಮೂಲೆ ಮೂಲೆಗಳಿಂದ ಅವರ ಅಭಿಮಾನಿಗಳು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಲು ಮತ್ತು ಕ್ರಿಕೆಟ್ ಶ್ರೇಷ್ಠನಿಗೆ ಗೌರವ ಸಲ್ಲಿಸುವ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಆಗಸ್ಟ್ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಎಂಎಸ್ ಧೋನಿ ನಿವೃತ್ತರಾಗಿದ್ದರೂ, ದೇಶದ ಅತ್ಯಂತ ಪ್ರೀತಿಯ ಕ್ರಿಕೆಟಿಗರಾಗಿ ಮುಂದುವರೆದಿದ್ದಾರೆ. ಸಕ್ರಿಯ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲದಿದ್ದರೂ, ಐಕಾನ್ ಕ್ರಿಕೆಟಿಗನ ಜನಪ್ರಿಯತೆಯಲ್ಲಿ ಯಾವುದೇ ಕುಂದು ಬಂದಿಲ್ಲ.
ಟೆಸ್ಟ್ ಕ್ರಿಕೆಟ್: 90 ಟೆಸ್ಟ್ ಪಂದ್ಯಗಳನ್ನಾಡಿರುವ ಭಾರತದ ಮಾಜಿ ನಾಯಕ ಎಂಎಸ್ ಧೋನಿ 38.1ರ ಸರಾಸರಿ ಮತ್ತು 59.1ರ ಸ್ಟ್ರೈಕ್‌ರೇಟ್‌ನಲ್ಲಿ 4876 ರನ್ ಗಳಿಸಿದ್ದಾರೆ.
ಏಕದಿನ ಕ್ರಿಕೆಟ್: 350 ಏಕದಿನ ಪಂದ್ಯಗಳನ್ನಾಡಿರುವ ಎಂಎಸ್ ಧೋನಿ 50.6ರ ಸರಾಸರಿ ಮತ್ತು 87.6ರ ಸ್ಟ್ರೈಕ್‌ರೇಟ್‌ನಲ್ಲಿ 10773 ರನ್ ಬಾರಿಸಿದ್ದಾರೆ.
ಟಿ20 ಕ್ರಿಕೆಟ್: 98 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಎಂಎಸ್ ಧೋನಿ 37.6 ಸರಾಸರಿ ಮತ್ತು 126.1 ಸ್ಟ್ರೈಕ್‌ರೇಟ್‌ನಲ್ಲಿ 1617 ರನ್ ಕಲೆಹಾಕಿದ್ದಾರೆ.
ಐಪಿಎಲ್: 250 ಐಪಿಎಲ್ ಪಂದ್ಯಗಳನ್ನು ಆಡಿದ್ದು, 38.8 ಸರಾಸರಿ ಮತ್ತು 135.9 ಸ್ಟ್ರೈಕ್‌ರೇಟ್‌ನಲ್ಲಿ 5082 ರನ್ ಬಾರಿಸಿದ್ದಾರೆ.