ವಿಶ್ವ 10ಕೆ ಓಟಕ್ಕೆ ಸಜ್ಜಾಗಿದ್ದಾರೆ ಮೈಸೂರು ಮಹಾರಾಜ ಯದುವೀರ್

ಬೆಂಗಳೂರು, ಮೇ 23: ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ 10ಕೆ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಟಾಟಾ ಕನ್ಸಲ್ಟಾನ್ಸಿ ಸರ್ವೀಸಸ್ ಸಂಸ್ಥೆ ಈ ಓಟವನ್ನು ಮೇ 27ರಂದು ಆಯೋಜಿಸುತ್ತಿದ್ದು, ಚಾರಿಟಿ ಸಂಸ್ಥೆಗೆ ದೇಣಿಗೆ ಸಂಗ್ರಹಿಸುವುದಕ್ಕಾಗಿ ಈ ಓಟದಲ್ಲಿ ಮೈಸೂರು ಮಹಾರಾಜರು ಓಡಲಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಬೆಳಿಗ್ಗೆ 7ರ ಸುಮಾರಿಗೆ ಓಟ ಆರಂಭಗೊಳ್ಳಲಿದೆ. ವಿಶೇಷವೆಂದರೆ ಓಟದಲ್ಲಿ ಪಾಲ್ಗೊಳ್ಳುವ ಮಹಾರಾಜ ಯದುವೀರ್ ಅವರು ಅಷ್ಟುದೂರ ಓಡಿ ಓಟವನ್ನು ನಿಲ್ಲಿಸುವುದಿಲ್ಲ. ಬದಲಿಗೆ ಭರ್ತಿ 10 ಕಿ.ಮೀ. ದೂರದ ಓಟವನ್ನು ಓಡಲಿದ್ದಾರೆ. ಇದಕ್ಕಾಗಿ ತರಬೇತಿಯನ್ನೂ ಪಡೆಯುತ್ತಿರುವ ಮಹಾರಾಜರು 60 ನಿಮಿಷಗಳ ಒಳಗೆ ಓಟವನ್ನು ಮುಗಿಸುವ ಗುರಿಯನ್ನಿಟ್ಟುಕೊಂಡಿದ್ದಾರೆ.
ಮೈಸೂರಿನ 'ಕಲಿಸು ಫೌಂಡೇಶನ್'ಗೆ ದೇಣಿಗೆ ಸಂಗ್ರಹಿಸುವುದಕ್ಕಾಗಿ 10 ಕಿ.ಮೀ. ಓಟದಲ್ಲಿ ಪಾಲ್ಗೊಳ್ಳುವುದಾಗಿ ಮಹಾರಾಜ ಯದುವೀರ್ ಖಾತರಿಪಡಿಸಿದ್ದಾರೆ. ಈ ಬಗ್ಗೆ ಫೌಂಡೇಶನ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ನಿಖಿಲೇಶ್ ಎಂಎಂ ಅವರೂ ಖುಷಿ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ನಿಖಿಲೇಶ್, 'ಮಹಾರಾಜ ವೈಕೆಸಿ ಒಡೆಯರ್ ನಮ್ಮ ಚಾರಿಟಿ ಸಂಸ್ಥೆಗಾಗಿ ಓಡುತ್ತಿರುವುದು ನಿಜಕ್ಕೂ ಖುಷಿ ನೀಡಿದೆ. ಅವರು ಇಂಥ ದೂರದ ಓಟದಲ್ಲಿ ಎಂದೂ ಪಾಲ್ಗೊಂಡಿಲ್ಲ. ಆದರೆ ಈ ಬಾರಿ ಒಳ್ಳೆಯ ಉದ್ದೇಶಕ್ಕಾಗಿ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ತರಬೇತಿಯೂ ಪಡೆಯುತ್ತಿದ್ದಾರೆ' ಎಂದರು.
ಈ ಓಟ ಮೇ ತಿಂಗಳ ಆರಂಭದಲ್ಲೇ ನಡೆಸಲುದ್ದೇಶಿಸಲಾಗಿತ್ತಾದರೂ ಚುನಾವಣೆಯ ಕಾರಣಕ್ಕಾಗಿ ದಿನಾಂಕ ಮುಂದೂಡಲ್ಪಟ್ಟಿತು. ಟಿಸಿಎಸ್ ಸಂಸ್ಥೆ ನಡೆಸುವ ಈ 10 ಕಿ.ಮೀ. ಓಟದ ಸ್ಪರ್ಧೆ ಹಿಂದಿನಿಂದಲೂ ಚಾರಿಟಿ ಸಂಸ್ಥೆಗಳ ಅಭಿವೃದ್ಧಿಗೆ ನೆರವಾಗುತ್ತಿದ್ದು, ಈ ಬಾರಿಯೂ ಸಂಗ್ರಹವಾಗುವ ದೇಣಿಯಿಂದ ಅನೇಕ ಚಾರಿಟಿ ಸಂಸ್ಥೆಗಳಿಗೆ ನೆರವಾಗುವ ಉದ್ದೇಶವನ್ನು ಟಿಸಿಎಸ್ ಇರಿಸಿಕೊಂಡಿದೆ.
ಈ ನಡುವೆ ಕ್ರೀಡಾಪ್ರೇಮಿ, ಯುವ ಉತ್ಸಾಹಿಯೂ ಆಗಿರುವ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒಳ್ಳೆಯ ಉದ್ದೇಶಕ್ಕಾಗಿ ಓಡಲು ನಿರ್ಧರಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಲಿದ್ದಾರೆ, ಇನ್ನಷ್ಟು ಎತ್ತರಕ್ಕೇರಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications