ಪ್ಯಾರಿಸ್ ಒಲಿಂಪಿಕ್ಸ್‌ನ ಫೈನಲ್‌ಗೆ ಮುನ್ನ ಅನರ್ಹರಾಗಿದ್ದ ಮಹಿಳಾ ಕುಸ್ತಿ ಪಟು ವಿನೇಶ್ ಪೋಗಟ್ ಭಾರೀ ಸುದ್ದಿಯಲ್ಲಿದ್ದರು. ಈಗ ಅವರು ಮತ್ತೊಮ್ಮೆ ಸುದ್ದಿಗೆ ಆಹಾರವಾಗಿದ್ದಾರೆ. ತಮ್ಮ ಚಲನ ವಲನದ ನಿಖರ ಮಾಹಿತಿಯನ್ನು ವಿನೇಶ್ ನೀಡದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ನೋಟಿಸ್ ಜಾರಿಗೊಳಿಸಿದೆ.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ನೀಡಿರುವ ನೋಟಿಸ್‌ಗೆ ಒಲಿಂಪಿಯನ್ ಕುಸ್ತಿ ಪಟು ವಿನೇಶ್ ಪೋಗಟ್ 14 ದಿನಗಳಲ್ಲಿ ಉತ್ತರಿಸಬೇಕೆಂದು ತಿಳಿಸಿದೆ. ಡೋಪ್ ಪರೀಕ್ಷೆಗೆ ನಿಗದಿತ ಸಮಯ ಮತ್ತು ಸ್ಥಳದಲ್ಲಿ ಅಥ್ಲೀಟ್ ಭೇಟಿಯಾಗದಿದ್ದಲ್ಲಿ, ಇದು ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಿ NADA ಈ ಸೂಚನೆಯನ್ನು ನೀಡುತ್ತದೆ.

ವಿನೇಶ್ ಫೋಗಟ್ ಅವರಿಗೆ ನಾಡಾ ನೋಟಿಸ್ ಜಾರಿ ಮಾಡಿದ್ದು, 14 ದಿನಗಳಲ್ಲಿ ಉತ್ತರಿಸುವಂತೆ ತಿಳಿಸಿದೆ. ಅಲ್ಲದೆ ವಿನೇಶ್ ನಾಡಾಗೆ ತಮ್ಮ ಸರಿಯಾದ ಮಾಹಿತಿಯನ್ನು ನೀಡಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಿದೆ. ಸೆಪ್ಟೆಂಬರ್ 9 ರಂದು ವಿನೇಶ್ ಸೋನಿಪತ್‌ನ ಖಾರ್ಖೋಡಾ ಗ್ರಾಮದ ತನ್ನ ಮನೆಯಲ್ಲಿ ಡೋಪ್ ಪರೀಕ್ಷೆಗೆ ಲಭ್ಯವಿರುವುದಾಗಿ ತಿಳಿಸಿದ್ದರು. ಆದರೆ ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ವಿನೇಶ್ ಅಲ್ಲಿ ಪತ್ತೆಯಾಗಲಿಲ್ಲ. ಇದು ನಾಡಾ ನಿಯಮದ ಉಲ್ಲಂಘನೆ ಆಗಿದೆ. ಹೀಗಾಗಿ ನಿಮ್ಮ ಅಭಿಪ್ರಾಯವನ್ನು ತಿಳಿಯಲು ನೋಟಿಸ್ ನೀಡಲಾಗಿದೆ ಎಂದು ನಾಡಾ ತಿಳಿಸಿದೆ.
ವಿನೇಶ್ ಪೋಗಟ್‌ಗೆ ನೀಡಿರುವ ನೋಟಿಸ್‌ನ್ನು ಅವರು ಒಪ್ಪಿಕೊಳ್ಳಬೇಕು. ಅಥವಾ ಡೋಪಿಂಗ್‌ಗೆ ನಿಗದಿ ಪಡಿಸಿದ್ದ ಸ್ಥಳದಲ್ಲಿ ತಾವು ತಂಗಿದ್ದರು ಎಂದು ಸಾಬೀತು ಪಡಿಸಬೇಕಾಗಿದೆ.

ಪ್ಯಾರೀಸ್ ಒಲಿಂಪಿಕ್ಸ್ 50 ಕೆ.ಜಿ ಮಹಿಳೆಯರ ಫ್ರಿ ಸ್ಟೈಲ್ ಕುಸ್ತಿಯ ಫೈನಲ್‌ಗೂ ಮುನ್ನ ವಿನೇಶ್ ಪೋಗಟ್ ಅವರನ್ನು ಅನರ್ಹ ಗೊಳಿಸಲಾಗಿತ್ತು. ಅವರು ನಿಗದಿತ ತೂಕಕ್ಕಿಂತ 100 ಗ್ರಾಮ್ ಹೆಚ್ಚಿನ ತೂಕವನ್ನು ಹೊಂದಿದ್ದರಿಂದ ಅವರನ್ನು ಫೈನಲ್ ಆಡದಂತೆ ತಿಳಿಸಲಾಯಿತು. ಇದರಿಂದ ಬೇಸತ್ತ ವಿನೇಶ್ ಪೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯಲ್ಲಿ ತಾನು ಫೈನಲ್ ವರೆಗೂ ಅರ್ಹತೆ ಪಡೆದಿದ್ದೇನೆ ತನಗೂ ಬೆಳ್ಳಿಯ ಪದಕ ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ವಾದ ಹಾಗೂ ಪ್ರತಿವಾದವನ್ನು ಆಲಿಸಿದ ಕೋರ್ಟ್ ವಿನೇಶ್ ಅರ್ಜಿಯನ್ನು ವಜಾ ಮಾಡಿತ್ತು. ಇದಕ್ಕೂ ಮೊದಲೇ ವಿನೇಶ್ ಪೋಗಟ್ ಕುಸ್ತಿಗೆ ಗುಡ್ ಬೈ ಹೇಳಿದ್ದರು. ವಿನೇಶ್ ಮತ್ತು ಬಜರಂಗ್ ಪುನಿಯಾ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಂಬರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ವಿನೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಅವರು ಜೂಲಾನಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.