
ತೀರಾ ವಯಸ್ಸಾದ ನಂತರ ಕ್ರೀಡೆಗಳಲ್ಲಿ ಭಾಗವಹಿಸುವುದು ಕಷ್ಟ, ಭಾಗವಹಿಸಿದರೂ ಅದರಿಂದ ದೇಹಕ್ಕೆ ಸಮಸ್ಯೆ ಎಂಬ ಆತಂಕ ಮತ್ತು ಅಭಿಪ್ರಾಯಗಳೇ ಜನರಲ್ಲಿ ಹೆಚ್ಚಿವೆ. ಆದರೆ ಈ ಎಲ್ಲಾ ಆತಂಕ ಮತ್ತು ಅಭಿಪ್ರಾಯಗಳಿಗೆ ಸೆಡ್ಡು ಹೊಡೆದಿರುವ ಕರ್ನಾಟಕದ ಮಂಗಳೂರಿನ ಮೇರಿ ಹಿಲ್ಡಾ ಫೆರ್ನಾಂಡೀಸ್ ತಮ್ಮ 68ನೇ ವಯಸ್ಸಿನಲ್ಲಿ 4 ಚಿನ್ನದ ಪದಕಗಳನ್ನು ಗೆದ್ದು ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಈ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆ ಎಂದು ಆಸ್ಪತ್ರೆಯತ್ತ ಮುಖ ಮಾಡುವ ಬಹುತೇಕರ ನಡುವೆ ಮೇರಿ ಹಿಲ್ಡಾ ಫೆರ್ನಾಂಡೀಸ್ ಫಿಟ್‌ನೆಸ್ ಕಾಪಾಡಿಕೊಳ್ಳುವುದರ ಜತೆಗೆ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾಗಿ ಹೊರಹೊಮ್ಮಿ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಪದಕಗಳನ್ನು ಗಳಿಸಿರುವ ಮೇರಿ ಹಿಲ್ದಾ ಫೆರ್ನಾಂಡಿಸ್ ಅವರು ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ಫಿಲಿಪ್ ಕ್ಯಾಪಿಟಲ್ 42ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‌ನಲ್ಲಿ 4 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

4 ವಿಭಾಗಗಳಲ್ಲಿ ಬಂಗಾರ ಗೆದ್ದ ಮೇರಿ
ಫಿಲಿಪ್ ಕ್ಯಾಪಿಟಲ್ 42ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮೇರಿ ಹಿಲ್ಡಾ ಫೆರ್ನಾಂಡಿಸ್ 100 ಮೀಟರ್ ಓಟ, ಲಾಂಗ್ ಜಂಪ್, ತ್ರಿಪಲ್ ಜಂಪ್ ಮತ್ತು 4 x 100 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಕ್ರೀಡಾಕೂಟವೊಂದರಲ್ಲಿ 4 ಚಿನ್ನದ ಪದಕಗಳನ್ನು ಗೆದ್ದಿರುವ ಕರ್ನಾಟಕದ ಏಕೈಕ ಕ್ರೀಡಾಪಟು ಎಂಬ ದಾಖಲೆಯನ್ನು ಮೇರಿ ಹಿಲ್ಡಾ ಫೆರ್ನಾಂಡೀಸ್ ಬರೆದಿದ್ದಾರೆ.

ಗೆದ್ದಿರುವ ಪದಕಗಳ ಪಟ್ಟಿ
ಸುಮಾರು 500ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಮೇರಿ ಹಿಲ್ಡಾ ಫೆರ್ನಾಂಡೀಸ್ 1988ರಲ್ಲಿ ಮೊದಲ ಬಾರಿಗೆ ಕ್ರೀಡಾಕೂಟವೊಂದರಲ್ಲಿ ಭಾಗವಹಿಸಿದ್ದರು. ಅಂದಿನಿಂದ ಇಂದಿನವರೆಗೂ ಒಮ್ಮೆಯೂ ಹಿಂದುರಿಗಿ ನೋಡದ ಮೇರಿ ಫೆರ್ನಾಂಡಿಸ್ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಹಾಗೂ ಏಷ್ಯಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. 1992ರಿಂದ 2007ರವರೆಗೆ ಸರ್ಕಾರಿ ನೌಕರರ ಕ್ರೀಡೆಯಲ್ಲಿ ಭಾಗವಹಿಸಿರುವ ಇವರು ರಾಜ್ಯಮಟ್ಟದಲ್ಲಿ 100ರಿಂದ 400 ಮೀಟರ್ ಓಟ, 4 x 100 ಮೀಟರ್ ರಿಲೇ ಹಾಗೂ 4 x 400 ಮೀಟರ್ ರಿಲೇ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ. 2000ದಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‌ನಲ್ಲಿ 1 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದಿದ್ದ ಮೇರಿ 2001ರಲ್ಲಿ ನಡೆದ ಮಲೇಷಿಯಾ ಮಾಸ್ಟರ್ಸ್ ಓಪನ್ ಚಾಂಪಿಯನ್‍ಶಿಪ್‌ನಲ್ಲಿ ಲಾಂಗ್ ಜಂಪ್ ವಿಭಾಗದಲ್ಲಿ 1 ಚಿನ್ನ, 400 ಮೀಟರ್ ಓಟದಲ್ಲಿ ರಜತ ಪದಕ ಹಾಗೂ 100 ಮೀಟರ್ ಓಟದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.
2010ರಲ್ಲಿ ಪುಣೆಯಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಮಾಸ್ಟರ್ಸ್ ಓಪನ್ ಚಾಂಪಿಯನ್‍ಶಿಪ್‌ನಲ್ಲಿಯೂ ಭಾಗವಹಿಸಿದ್ದ ಮೇರಿ ಹಿಲ್ಡಾ ಫೆರ್ನಾಂಡೀಸ್ 100 ಮೀ, 200 ಮೀ, ಲಾಂಗ್ ಜಂಪ್ ಮತ್ತು ಟ್ರಿಪಲ್ ಜಂಪ್ ಸ್ಪರ್ಧೆಗಳಲ್ಲಿ 4 ಚಿನ್ನದ ಪದಕಗಳನ್ನು ಸಂಪಾದಿಸಿದ್ದರು. 2012ರಲ್ಲಿ ಚೀನಾದ ತೈಪೇನಲ್ಲಿ ನಡೆದಿದ್ದ 17ನೇ ಏಷ್ಯನ್ ಮಾಸ್ಟರ್ಸ್ ಚಾಂಪಿಯನ್‍ಶಿಪ್‌ನಲ್ಲಿಯೂ ಮೇರಿ ಒಟ್ಟು 4 ಪದಕಗಳನ್ನು ಗೆದ್ದಿದ್ದರು. ನಂತರ 2019ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ 21ನೇ ಏಷ್ಯನ್ ಮಾಸ್ಟರ್ಸ್ ಚಾಂಪಿಯನ್‍ಶಿಪ್‌ನಲ್ಲಿ 3 ಚಿನ್ನದ ಪದಕಗಳನ್ನು ಮೇರಿ ಫರ್ನಾಂಡಿಸ್ ತಮ್ಮದಾಗಿಸಿಕೊಂಡಿದ್ದರು ಮತ್ತು 2020ರಲ್ಲಿ ಮಣಿಪುರದಲ್ಲಿ ನಡೆದಿದ್ದ ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 2 ಚಿನ್ನ ಹಾಗೂ 1 ರಜತ ಪದಕವನ್ನು ಗೆದ್ದಿದ್ದರು.

ಮೇರಿ ಹಿಲ್ಡಾ ಫೆರ್ನಾಂಡೀಸ್ ವೈಯಕ್ತಿಕ ಜೀವನ ಮತ್ತು ಕುಟುಂಬ
ತಮ್ಮ ವೃತ್ತಿಜೀವನದಲ್ಲಿ 29 ವರ್ಷ ದಾದಿಯಾಗಿ ಸೇವೆ ಸಲ್ಲಿಸಿರುವ ಮೇರಿ ಹಿಲ್ಡಾ ಫೆರ್ನಾಂಡೀಸ್ ಮೂಡಿಗೆರೆಯ ಸರ್ಕಾರಿ ಆಸ್ಪತ್ರೆ, ಮಂಗಳೂರು ಜಿಲ್ಲಾಸ್ಪತ್ರೆ ಹಾಗೂ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇನ್ನು ಮೇರಿ ಹಿಲ್ಡಾ ಫೆರ್ನಾಂಡೀಸ್ ಹಾಗೂ ಜೋಸೆಫ್ ಫೆರ್ನಾಂಡಿಸ್ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.