ಭಾರತದ ಜಾವೆಲಿನ್ ಅಥ್ಲೀಟ್ ನೀರಜ್ ಚೋಪ್ರಾ ಒಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಅಸಲಿಗೆ ಈ ದಾಖಲೆಯಲ್ಲಿ ಅವರು ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಅವರನ್ನು ಹಿಂದಿಕ್ಕಿದ್ದಾರೆ. ಇಬ್ಬರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳು ಹೇಗೆ ದಾಖಲೆ ಅಳಿಸಲು ಸಾಧ್ಯ ಎಂಬ ನಿಮ್ಮ ಕಲ್ಪನೆಗೆ ಉತ್ತರ ಇಲ್ಲಿದೆ.
ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಅಲ್ಲದೆ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಪಡೆದ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅದರಂತೆ ಹಾರ್ದಿಕ್ ಸಹ ಟಿ20 ವಿಶ್ವಕಪ್‌ನ ಕೊನೆಯ ಓವರ್‌ನಲ್ಲಿ ಶಿಸ್ತು ಬದ್ಧ ದಾಳಿ ಸಂಘಟಿಸಿ ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿ ಹಾಕಿದ್ದರು. ಇಬ್ಬರೂ ಸೂಪರ್ ಸ್ಟಾರ್‌ಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದವರೆ. ನೀರಜ್ ಚೋಪ್ರಾ, ಹಾರ್ದಿಕ್ ರನ್ನು ಹಿಂದಿಕ್ಕಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಏಳುವುದು ಸಹಜ.

ನೀರಜ್ ಚೋಪ್ರಾ ಬ್ರ್ಯಾಂಡ್ ವ್ಯಾಲ್ಯೂ ಲೆಕ್ಕಾಚಾರದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಇಬ್ಬರ ಬ್ರ್ಯಾಂಡ್ ವ್ಯಾಲ್ಯೂ ಸಮನಾಗಿದ್ದವು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ ಬಳಿಕ ನೀರಜ್ ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಏರಿಕೆ ಆಗಿದೆ. ಕ್ರೋಲ್ (kroll) ತಿಳಿಸಿರುವ ಅಂಕಿ ಅಂಶಗಳ ಪ್ರಕಾರ, ನೀರಜ್ ಚೋಪ್ರಾ 330 ಕೋಟಿಗಳ ಸಂಖ್ಯೆಯನ್ನು ಶೀಘ್ರದಲ್ಲಿ ಪಾರು ಮಾಡಲಿದ್ದಾರೆ.
ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆಗಳ ಕ್ರೀಡಾಪಟುಗಳ ಬ್ರ್ಯಾಂಡ್ ವ್ಯಾಲ್ಯೂ ಲೆಕ್ಕ ಹಾಕಿದಾಗ, ನೀರಜ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನಮೋಹಕ ಪ್ರದರ್ಶನ ನೀಡಿ ಎರಡು ಪದಕಗಳನ್ನು ಗೆದ್ದ ಮನು ಭಾಕರ್ ಅವರ ಬ್ರ್ಯಾಂಡ್ ವ್ಯಾಲ್ಯೂ ಸಹ ಏರಿಕೆ ಆಗಿದೆ. ಪದಕ ಗೆಲ್ಲುವುದಕ್ಕೂ ಮೊದಲು ಮನು ಭಾಕರ್ ಒಂದು ಜಾಹೀರಾತಿಗೆ 25 ಲಕ್ಷ ಪಡೆಯುತ್ತಿದ್ದರು. ಆದರೆ ಈಗ ಒಂದು ಜಾಹೀರಾತಿಗೆ ಇವರು ಸುಮಾರು 1 ಕೋಟಿ ರೂ. ಪಡೆಯುತ್ತಾರೆ ಎಂದು ತಿಳಿದು ಬಂದಿದೆ.
ಮಹಿಳೆಯರ 50 ಕೆ.ಜಿ ಫ್ರಿ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಅಮೋಘ ಸಾಧನೆ ಮಾಡಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಪೋಗಟ್ ಮೌಲ್ಯ ಸಹ ವೃದ್ಧಿಆಗಿದೆ. ಇವರು ಫೈನಲ್‌ಗೂ ಮುನ್ನ ಅನರ್ಹರಾಗಿದ್ದರು. ಇವರಿಗೆ ಪದಕ ಫಿಕ್ಸ್ ಆಗಿತ್ತು. ಆದರೆ ಡಿಸ್‌ಕ್ವಾಲಿಫೈ ಆಗಿದ್ದರಿಂದ ಫೈನಲ್ ನಲ್ಲಿ ಸೆಣಸಲು ಸಾಧ್ಯವಾಗಲಿಲ್ಲ. ಆದರೂ ಸಹ ಇವರ ಬ್ರ್ಯಾಂಡ್ ವ್ಯಾಲ್ಯೂ ಏರಿಕೆ ಆಗಿದೆ.
ಭಾರತದಲ್ಲಿ ಅತಿ ಹೆಚ್ಚು ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವ ಆಟಗಾರರ ಪಟ್ಟಿಯನ್ನು ನೋಡಿದರೆ, ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ವ್ಯಾಲ್ಯೂ ಸರಿ ಸುಮಾರು 1.9 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಇವರ ವ್ಯಾಲ್ಯೂ ಭಾರತದ ಸ್ಟಾರ್‌ಗಳ ಪಟ್ಟಿಯಲ್ಲೂ ಅಗ್ರ ಸ್ಥಾನದಲಿದೆ. ಉಳಿದಂತೆ ರಣವೀರ್ ಸಿಂಗ್, ಶಾರೂಖ್ ಖಾನ್ ನಂತರದ ಸ್ಥಾನದಲ್ಲಿದ್ದಾರೆ.