ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಅದ್ಧೂರಿ ವಿವಾಹ ಸಮಾರಂಭ ಇದೇ ಜುಲೈ 12ರಂದು ನಡೆಯಲಿದೆ. ಇದಕ್ಕೂ ಮುನ್ನ ಮುಂಬೈನಲ್ಲಿ ಶನಿವಾರ, ಜುಲೈ 6ರಂದು ಅಂಬಾನಿ ಕುಟುಂಬದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ 2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕೆಲವು ಸದಸ್ಯರು ಭಾಗಿಯಾಗಿದ್ದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ಭಾರೀ ಕರತಾಡನ ಮತ್ತು ಹರ್ಷೋದ್ಗಾರ ಸ್ವೀಕರಿಸಿದರು. ಇವರು ಮುಕೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಸದಸ್ಯರು ಕೂಡ ಹೌದು.

ವಿವಾಹ ಪೂರ್ವ ಸಂಗೀತ ಕಾರ್ಯಕ್ರಮದಲ್ಲಿ ಅಂಬಾನಿ ಮತ್ತು ಮರ್ಚೆಂಟ್ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಅತಿಥಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಡತಿ ನೀತಾ ಅಂಬಾನಿ ಅವರು ಬಹಳ ಭಾವುಕರಾಗಿದ್ದರು. ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರನ್ನು ವೇದಿಕೆ ಮೇಲೆ ಬರಮಾಡಿಕೊಳ್ಳಲಾಯಿತು. ಈ ವೇಳೆ ಸಮಾರಂಭದಲ್ಲಿ ಭಾಗವಹಿಸಿದ್ದವರೆಲ್ಲರೂ ದೊಡ್ಡ ಮಟ್ಟದಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಟಿ20 ವಿಶ್ವಕಪ್ ವಿಜೇತ ಆಟಗಾರರಿಗೆ ಚಪ್ಪಾಳೆ, ಶಿಳ್ಳೆ ಹೊಡೆದರು ಮತ್ತು ಉತ್ತೇಜನದ ಘೋಷವಾಕ್ಯಗಳನ್ನು ಕೂಗಿದರು. ಅಂದ ಹಾಗೆ ಇದೊಂದು ವಿಶೇಷ ಸಂದರ್ಭವಾಗಿರುವುದಕ್ಕೆ ಕಾರಣ ಆರಂಭದಲ್ಲಿಯೇ ಹೇಳಿದಂತೆ, ವಿಶ್ವಕಪ್ ಗೆದ್ದ ತಂಡದ ಸದಸ್ಯರಲ್ಲಿ ನಾಲ್ವರು ಮುಂಬೈ ಇಂಡಿಯನ್ಸ್ ಆಟಗಾರರು. ಆದರೆ, ಸಂಗೀತ ಕಾರ್ಯಕ್ರಮದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಭಾಗವಹಿಸಿರಲಿಲ್ಲ.

ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ ತಂಡದ ಪ್ರದರ್ಶನವನ್ನು ಕೊನೆ ಕ್ಷಣದ ತನಕ ಹೇಗೆ ಭಾರತೀಯರು ಉಸಿರು ಬಿಗಿ ಹಿಡಿದು ವೀಕ್ಷಿಸಿದರು. ಇನ್ನು ಗೆಲುವು ಅಸಾಧ್ಯ ಎಂದುಕೊಂಡ ಸಂದರ್ಭದಲ್ಲಿ ಹೇಗೆ ಭಾರತ ಕ್ರಿಕೆಟ್ ತಂಡ ಗೆದ್ದು ಬೀಗಿತು. ಇದರೊಂದಿಗೆ 13 ವರ್ಷಗಳ ವಿಶ್ವಕಪ್ ನಿರೀಕ್ಷೆಯು ಹೇಗೆ ನಿಜವಾಯಿತು ಎಂಬುದನ್ನು ನೀತಾ ಅಂಬಾನಿ ಅವರು ಇದೇ ವೇದಿಕೆ ಮೇಲೆ ವಿವರಿಸಿ, ಸ್ವತಃ ಭಾವುಕರಾದರು.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪ್ರದರ್ಶನದ ಬಗ್ಗೆ ಜನರ ಅಭಿಪ್ರಾಯಗಳನ್ನು ಹೇಳಿದ ನೀತಾ ಅಂಬಾನಿ, ಕಷ್ಟದ ಕಾಲ ಕೊನೆ ಆಗುವುದಿಲ್ಲ, ಆದರೆ ಗಟ್ಟಿಯಾದ ಜನರು ಅದನ್ನು ಸಾಧಿಸುತ್ತಾರೆ ಎಂದು ತಿಳಿಸಿದರು.
ಇನ್ನು ಮುಕೇಶ್ ಅಂಬಾನಿ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿ, ಭಾರತ ಹೆಮ್ಮೆ ಪಡುವುದಕ್ಕೆ ಕಾರಣರಾದ ಆಟಗಾರರಿಗೆ ಅಭಿನಂದಿಸಿದರು. ಈ ಸಂದರ್ಭವು ಹೇಗೆ 2011ರ ಏಕದಿನ ವಿಶ್ವಕಪ್ ಪಂದ್ಯಾವಳಿ ಗೆಲುವನ್ನು ನೆನಪಿಸಿತು ಎಂಬುದನ್ನು ಹೇಳಿದರು.
ಸಂಗೀತ ಕಾರ್ಯಕ್ರಮದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹಲವು ಆಟಗಾರರು ಹಾಜರಿದ್ದರು. ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೃನಾಲ್ ಪಾಂಡ್ಯ, ಕೆಎಲ್ ರಾಹುಲ್, ಮಹೇಂದ್ರ ಸಿಂಗ್ ಧೋನಿ ಭಾಗಿಯಾಗಿದ್ದರು. ಜಸ್ಪ್ರೀತ್ ಬುಮ್ರಾ ಪ್ರವಾಸದಲ್ಲಿ ಇರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.