
ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತರಾಗಿದ್ದ ಸುಶೀಲ್ ಕುಮಾರ್ ಇದೀಗ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿರುವ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ. 23ರ ಹರೆಯದ ಮಾಜಿ ರಾಷ್ಟ್ರೀಯ ರೆಸ್ಲಿಂಗ್ ಚಾಂಪಿಯನ್ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಹೆಸರು ಬಲವಾಗಿ ಕೇಳಿ ಬಂದಿದ್ದು ವಿಚಾರಣೆಗೆ ಹಾಜರಾಗದೆ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದಾರೆ.
23ರ ಹರೆಯದ ಸಾಗರ್ ರಾಣಾ ಎಂಬ ರೆಸ್ಲರ್ ಕೊಲೆಯಾದಾಗ ಸುಶೀಲ್ ಕುಮಾರ್ ಕೂಡ ಘಟನೆ ಸ್ಥಳದಲ್ಲಿದ್ದರೂ ಎಂಬ ಮಾತುಗಳು ಕೇಳಿಬಂದ ನಂತರ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದು ಈ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಪಾತ್ರದ ಬಗ್ಗೆ ಅನುಮಾನಗಳು ಹೆಚ್ಚಾಗಿವೆ. ಹೀಗಾಗಿ ಸುಶೀಲ್ ಕುಮಾರ್ ಅವರನ್ನು ಪತ್ತೆ ಹಚ್ಚಲು ಸುಳಿವು ನೀಡಿದವರಿಗೆ ದೆಹಲಿ ಪೊಲೀಸರು ಬಹುಮಾನವನ್ನು ಕೂಡ ಘೋಷಣೆ ಮಾಡಿದ್ದರು.
ಇಷ್ಟೆಲ್ಲಾ ಸಂಕಷ್ಟಗಳ ನಡುವೆ ಇದೀಗ ಸುಶೀಲ್ ಕುಮಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ, ದೆಹಲಿ ನ್ಯಾಯಾಲಯ ತಲೆಮರೆಸಿಕೊಂಡಿರುವ ಸುಶೀಲ್ ಕುಮಾರ್‌ಗೆ ನಿರೀಕ್ಷಣಾ ಜಾಮೀನು ಕೊಡಲು ನಿರಾಕರಿಸಿದ್ದು ಅರ್ಜಿಯನ್ನು ವಜಾ ಮಾಡಿದೆ. ಇತ್ತ ಪೊಲೀಸರು ಸುಶೀಲ್ ಕುಮಾರ್ ಬಂಧನಕ್ಕೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು ಇತ್ತೀಚೆಗಷ್ಟೇ ಹರಿದ್ವಾರದ ಆಶ್ರಮವೊಂದರಲ್ಲಿ ಉಳಿದುಕೊಂಡಿದ್ದ ಸುಶೀಲ್ ಕುಮಾರ್ ಸತತವಾಗಿ ಸ್ಥಳಗಳನ್ನು ಬದಲಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.