ಆಗಸ್ಟ್ 9 ಶುಕ್ರವಾರ, ಪ್ಯಾರಿಸ್ ಒಲಿಂಪಿಕ್ಸ್ ಯಶಸ್ಸಿಯಾಗಿ 14ನೇ ದಿನಕ್ಕೆ ಕಾಲಿಟ್ಟಿದೆ. ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತ 63ನೇ ಸ್ಥಾನದಲ್ಲಿ. ಆದರೆ ಪಾಕಿಸ್ತಾನ ಕೇವಲ ಒಂದು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತವನ್ನು ಹಿಂದಿಕ್ಕಿ ಮುಂದೆ ಸಾಗಿದೆ.
ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಕಿಸ್ತಾನ ಸ್ಟಾರ್ ಅಥ್ಲೀಟ್ ಅರ್ಷದ್ ನದೀಮ್ ಚಿನ್ನದ ಪದಕವನ್ನು ಗೆದ್ದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಪಾಕಿಸ್ತಾನ 53ನೇ ಸ್ಥಾನಕ್ಕೆ ತಲುಪಿದ್ದು, ಭಾರತವನ್ನು ಹಿಂದಿಕ್ಕಿದೆ. ಭಾರತ 5 ಪದಕಗಳನ್ನು ಗೆದ್ದರೂ, 63ನೇ ಸ್ಥಾನದಲ್ಲಿರುವುದು ಏಕೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತ ಅಥ್ಲೀಟ್ಸ್ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಈವರೆಗೆ ಭಾರತ 5 ಪದಕಗಳನ್ನು ಗೆದ್ದಿದೆ. ಇದರಲ್ಲಿ 4 ಕಂಚು ಮತ್ತು 1 ಬೆಳ್ಳಿ ಪದಕ ಸೇರಿವೆ. ಭಾರತಕ್ಕೆ ಮೊದಲ ಕಂಚಿನ ಪದಕವನ್ನು ಮನು ಭಾಕರ್ ಶೂಟಿಂಗ್‌ನಲ್ಲಿ ಗೆದ್ದರು. ಇದಾದ ಬಳಿಕ ಮನು ಭಾಕರ್, ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.
ಪುರುಷರ 50 ಮೀಟರ್ ರೈಫಲ್ ಮೂರು ಸ್ಥಾನಗಳಲ್ಲಿ ಸ್ವಪ್ನಿಲ್ ಕುಸಾಲೆ ಭಾರತಕ್ಕೆ ಮೂರನೇ ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದರು. ಭಾರತ ಪುರುಷರ ಹಾಕಿ ತಂಡವು ಸ್ಪೇನ್ ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು. ನಂತರ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಗೆದ್ದು ಕೊಟ್ಟಿರು. ಈ ಮೂಲಕ ಭಾರತದ ಖಾತೆಗೆ ನಾಲ್ಕು ಕಂಚು ಹಾಗೂ ಒಂದು ಬೆಳ್ಳಿ ಪದಕಗಳು ಬಂದಿವೆ.
ಇದರೊಂದಿಗೆ ಸದ್ಯ ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತ 63ನೇ ಸ್ಥಾನಕ್ಕೆ ತಲುಪಿದೆ. ಆದರೆ ಪಾಕಿಸ್ತಾನ ಕೇವಲ ಒಂದು ಬಂಗಾರವನ್ನು ಗೆದ್ದು ಅಂಕಪಟ್ಟಿಯಲ್ಲಿ ಭಾರತಕ್ಕಿಂತ ಮುಂದಿದೆ. ಇದಕ್ಕೆ ಮುಖ್ಯ ಕಾರಣವೆನೆಂದರೆ, ಒಂದು ದೇಶವು ಗೆಲ್ಲುವ ಹೆಚ್ಚು ಚಿನ್ನದ ಪದಕಗಳನ್ನು ಅವಲಂಬಿಸಿ, ಒಲಿಂಪಿಕ್ ಪದಕ ಪಟ್ಟಿಯಲ್ಲಿ ಅದರ ಸ್ಥಾನವು ನಿರ್ಧಾರವಾಗಲಿದೆ.
ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ) ಕ್ರೀಡಾಪಟುಗಳು ಗಳಿಸಿದ ಚಿನ್ನದ ಪದಕಗಳ ಸಂಖ್ಯೆಯನ್ನು ಆಧರಿಸಿ ದೇಶಗಳನ್ನು ಶ್ರೇಣೀಕರಿಸುತ್ತದೆ. ಒಂದು ವೇಳೆ ಎರಡು ಅಥವಾ ಅದಕ್ಕಿಂತ ಹೆಚ್ಚು ದೇಶಗಳು ಸಮನಾಗಿ ಚಿನ್ನ ಹೊಂದಿದ್ದರೆ, ಬೆಳ್ಳಿ ಪದಕಗಳ ಸಂಖ್ಯೆಯನ್ನು ಆಧರಿಸಿ ಶ್ರೇಯಾಂಕವನ್ನು ನಿರ್ಧರಿಸಲಾಗುತ್ತದೆ. ಇದಕ್ಕೂ ಮೀರಿ ನಂತರ ಅಗತ್ಯವಿದ್ದರೆ ಕಂಚಿನ ಪದಕಗಳನ್ನು ತೆಗೆದುಕೊಳ್ಳಲಾಗುತ್ತದೆ.
ಇಲ್ಲಿಯವರೆಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಒಂದೇ ಒಂದು ಚಿನ್ನದ ಪದಕ ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಒಂದು ಚಿನ್ನದ ಪದಕದಿಂದಾಗಿ, ಪಾಕಿಸ್ತಾನವು ಶ್ರೇಯಾಂಕದಲ್ಲಿ 53ನೇ ಸ್ಥಾನಕ್ಕೆ ತಲುಪಿದೆ. ಇದಲ್ಲದೇ ಭಾರತ ನಾಲ್ಕು ಕಂಚು ಹಾಗೂ ಒಂದು ಬೆಳ್ಳಿ ಪದಕ ಗೆದ್ದರೂ ಪದಕ ಪಟ್ಟಿಯಲ್ಲಿ 63ನೇ ಸ್ಥಾನದಲ್ಲಿದೆ.