2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ದಿನಗಣನೆ ಶುರುವಾಗಿದ್ದು, ಜುಲೈ 23ರಿಂದ ಅಧಿಕೃತವಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಚಾಲನೆ ಸಿಗಲಿದೆ. ಇದಕ್ಕಾಗಿ ಈಗಾಗಲೇ ಜಗತ್ತಿನಾದ್ಯಂತದ ಕ್ರೀಡಾಪಟುಗಳು ತಯಾರಿ ನಡೆಸುತ್ತಿದ್ದಾರೆ ಮತ್ತು ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದಾರೆ.
ಇದೇ ವೇಳೆ ಭಾರತದ ಮಹಿಳಾ ಕ್ರೀಡಾಪಟುಗಳು ಜಾಗತಿಕ ಕ್ರೀಡಾಕೂಟದಲ್ಲಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ, ಭಾರತ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಈ ಸಾಧನೆಗಳಲ್ಲಿ ಮಹಿಳಾ ಕ್ರೀಡಾಪಟುಗಳು ಪ್ರಮುಖ ಪಾತ್ರ ವಹಿಸಿದ್ದಾರೆ.

ಇಲ್ಲಿಯವರೆಗೆ ಭಾರತೀಯ ಕ್ರೀಡಾಪಟುಗಳು 24 ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ ಮತ್ತು 35 ಪದಕಗಳನ್ನು ಗೆದ್ದಿದ್ದಾರೆ. ಈ ಪೈಕಿ ಎಂಟು ಪದಕಗಳಿಗೆ ಏಳು ಮಹಿಳಾ ಅಥ್ಲೀಟ್‌ಗಳು ಕೊರಳೊಡ್ಡಿದ್ದಾರೆ.
1) ಕರ್ಣಂ ಮಲ್ಲೇಶ್ವರಿ - ಕಂಚು - ವೇಟ್‌ಲಿಫ್ಟಿಂಗ್ (ಮಹಿಳೆಯರ 54 ಕೆಜಿ) ಸಿಡ್ನಿ, 2000
2) ಸೈನಾ ನೆಹ್ವಾಲ್ - ಕಂಚು - ಬ್ಯಾಡ್ಮಿಂಟನ್ (ಮಹಿಳೆಯರ ಸಿಂಗಲ್ಸ್) ಲಂಡನ್, 2012
3) ಮೇರಿ ಕೋಮ್ - ಕಂಚು - ಬಾಕ್ಸಿಂಗ್ (ಮಹಿಳೆಯರ ಫ್ಲೈವೇಟ್) ಲಂಡನ್, 2012
4) ಪಿವಿ ಸಿಂಧು - ಬೆಳ್ಳಿ - ಬ್ಯಾಡ್ಮಿಂಟನ್ (ಮಹಿಳೆಯರ ಸಿಂಗಲ್ಸ್) ರಿಯೊ, 2016
5) ಸಾಕ್ಷಿ ಮಲಿಕ್ - ಕಂಚು - ಕುಸ್ತಿ (ಮಹಿಳೆಯರ 58 ಕೆಜಿ) ರಿಯೊ, 2016
6) ಮೀರಾಬಾಯಿ ಚಾನು - ಬೆಳ್ಳಿ - ವೇಟ್‌ಲಿಫ್ಟಿಂಗ್ (ಮಹಿಳೆಯರ 49 ಕೆಜಿ) ಟೊಕಿಯೋ, 2020
7) ಲೊವ್ಲಿನಾ ಬೊರ್ಗೊಹೈನ್ - ಕಂಚು - ಬಾಕ್ಸಿಂಗ್ (ಮಹಿಳೆಯರ ವೆಲ್ಟರ್‌ವೇಟ್) ಟೊಕಿಯೋ, 2020
8) ಪಿವಿ ಸಿಂಧು - ಕಂಚು - ಬ್ಯಾಡ್ಮಿಂಟನ್ (ಮಹಿಳೆಯರ ಸಿಂಗಲ್ಸ್) ಟೊಕಿಯೋ, 2020

ಒಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಅಥವಾ ಅದಕ್ಕಿಂತ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಮಹಿಳಾ ಕ್ರೀಡಾಪಟು ಪಿವಿ ಸಿಂಧು. ಭಾರತೀಯ ಬ್ಯಾಡ್ಮಿಂಟನ್‌ನ ತಾರೆ ಟೊಕಿಯೋ 2020ರಲ್ಲಿ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಂಚು ಮತ್ತು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಲೆಜೆಂಡ್ ವೇಟ್‌ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಅವರು 2000ದಲ್ಲಿ ನಡೆದ ಸಿಡ್ನಿ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಪಡೆಯುವ ಮೂಲಕ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.