ಜುಲೈ 26 ಶುಕ್ರವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರ ಬಾಕ್ಸಿಂಗ್ ಡ್ರಾಗಳನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಭಾರತದ ಸ್ಟಾರ್ ಮಹಿಳಾ ಬಾಕ್ಸರ್‌ಗಳಾದ ನಿಖತ್ ಝರೀನ್ ಮತ್ತು ಲೊವ್ಲಿನಾ ಬೊರ್ಗೊಹೈನ್ ಪದಕ ಗೆಲ್ಲುವ ರೇಸ್‌ನಲ್ಲಿ ಕಠಿಣ ಸವಾಲು ಎದುರಿಸಲಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದ 32ರ ಸುತ್ತಿನಲ್ಲಿ ನಿಖತ್ ಝರೀನ್ ಜರ್ಮನಿಯ ಮ್ಯಾಕ್ಸಿ ಕ್ಲೋಟ್ಜರ್ ಅವರನ್ನು ಎದುರಿಸಲಿದ್ದಾರೆ. ಡ್ರಾದ ಬ್ರಾಕೆಟ್ ಪ್ರಕಾರ, ಮುಂದಿನ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಝರೀನ್ 16 ರ ಸುತ್ತಿನಲ್ಲಿ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಚೀನಾದ ವು ಯು ಅವರನ್ನು ಎದುರಿಸಬಹುದು.

ಲೋವ್ಲಿನಾ ಬೊರ್ಗೊಹೈನ್: ಒಲಿಂಪಿಕ್ಸ್ ಪದಕ ಗೆಲ್ಲುವ ಹಾದಿ ಲೊವ್ಲಿನಾಗೂ ಸುಲಭವಾಗಿಲ್ಲ. ಮಹಿಳೆಯರ 75 ಕೆಜಿ ವಿಭಾಗದಲ್ಲಿ ಲೊವ್ಲಿನಾ, ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ಅವರನ್ನು ಎದುರಿಸಲಿದ್ದಾರೆ. ಇದರ ನಂತರ ಲೊವ್ಲಿನಾ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಲಿ ಕಿಯಾನ್ ವಿರುದ್ಧ ಆಡುವು ನಿರೀಕ್ಷೆ ಇದೆ.
ನಿಖತ್ ಝರೀನ್: ನಿಖತ್ ಅವರ ಸಂಭಾವ್ಯ ಎದುರಾಳಿ ಚೀನಾದ ವು ಯು ಅಗ್ರ ಶ್ರೇಯಾಂಕದ ಬಾಕ್ಸರ್ ಆಗಿದ್ದು, 52 ಕೆಜಿಯಲ್ಲಿ ಪ್ರಸ್ತುತ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ. ನಿಖತ್ ಚೀನಾದ ಸವಾಲನ್ನು ಜಯಿಸಿದರೆ, ಕ್ವಾರ್ಟರ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುಥಾಮತ್ ರಕ್ಸತ್ ಅಥವಾ ಉಜ್ಬೇಕಿಸ್ತಾನದ ಸಬಿನಾ ಬೊಬೊಕುಲೋವಾ ಅವರನ್ನು ಎದುರಿಸಲಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಸ್ಟ್ರಾಂಡ್ಜಾ ಸ್ಮಾರಕ ಫೈನಲ್‌ನಲ್ಲಿ ಬೊಬೊಕುಲೋವಾ ವಿರುದ್ಧ ನಿಖತ್ ಸೋಲು ಕಂಡಿದ್ದರು. ಅಲ್ಲದೆ, ಕಳೆದ ವರ್ಷ ಏಷ್ಯನ್ ಗೇಮ್ಸ್‌ನ ಸೆಮಿಫೈನಲ್‌ನಲ್ಲಿ ರಕ್ಷತ್ ನಿಖತ್ ಅವರನ್ನು ಸೋಲಿಸಿದ್ದರು.
ಜಾಸ್ಮಿನ್ ಲಂಬೊರೈ: ಜಾಸ್ಮಿನ್ ಲಂಬೊರೈ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಟೋಕಿಯೊ 2020ರ ಬೆಳ್ಳಿ ಪದಕ ವಿಜೇತ ಫಿಲಿಪೈನ್ಸ್‌ನ ನೆಸ್ಟಿ ಪೆಟೆಸಿಯೊ ವಿರುದ್ಧ ಒಲಿಂಪಿಕ್ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಜಾಸ್ಮಿನ್ ಗೆದ್ದರೆ ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಫ್ರಾನ್ಸ್‌ನ ಅಮಿನಾ ಜಿದಾನಿಯನ್ನು ಎದುರಿಸಲಿದ್ದಾರೆ.
ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ ಅವರು ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ವಿರುದ್ಧ 32 ರ ಸುತ್ತಿನಲ್ಲಿ ಡ್ರಾ ಮಾಡಿಕೊಂಡರು. ಅಮಿತ್ ಪಂಘಲ್ ಮತ್ತು ನಿಶಾಂತ್ ದೇವ್ ತಮ್ಮ ಆರಂಭಿಕ ಪಂದ್ಯಗಳಲ್ಲಿ ಬೈ ಪಡೆದಿದ್ದಾರೆ.
ಆದಾಗ್ಯೂ, ಅಮಿತ್ ತನ್ನ ಆರಂಭಿಕ ಪಂದ್ಯದಲ್ಲಿ ಜಾಂಬಿಯಾದ ಪ್ಯಾಟ್ರಿಕ್ ಚಿನ್ಯೆಂಬಾ ಅವರನ್ನು ಎದುರಿಸಲಿದ್ದು, ನಿಶಾಂತ್ ದೇವ್ ಈಕ್ವೆಡಾರ್‌ನ ಜೋಸ್ ರೊಡ್ರಿಗಸ್ ಟೆನೊರಿಯೊ ವಿರುದ್ಧ ಕಣಕ್ಕೀಳಿಯಲಿದ್ದಾರೆ.
ಅರೆನಾ ಪ್ಯಾರಿಸ್ ನಾರ್ಡ್‌ನಲ್ಲಿ ಜುಲೈ 27 ರಂದು ಪ್ರಾಥಮಿಕ ಸುತ್ತಿನಿಂದ ಬಾಕ್ಸಿಂಗ್ ಸ್ಪರ್ಧೆಗಳು ಪ್ರಾರಂಭವಾಗಲಿವೆ.