ಪ್ಯಾರಿಸ್ ಒಲಿಂಪಿಕ್ಸ್ 2024: ಕರ್ನಾಟಕದ 9 ಕ್ರೀಡಾಪಟುಗಳಿಗೆ ಭರ್ಜರಿ ಗಿಫ್ಟ್ ನೀಡಿದ ಸಿಎಂ ಸಿದ್ದರಾಮಯ್ಯ
ಇದೇ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿರುವ 2024ರ ಬಹುರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡಾಕೂಟ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಆರಂಭವಾಗಲಿದ್ದು, ಭಾರತವು 117 ಸದಸ್ಯ ಬಲದ ಕ್ರೀಡಾಳುಗಳೊಂದಿಗೆ ಪ್ರಣಯ ನಗರಿಗೆ ಪ್ರಯಾಣ ಬೆಳೆಸಲಿದೆ.
16 ಕ್ರೀಡಾ ವಿಭಾಗಗಳಲ್ಲಿ ಈ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, 70 ಪುರುಷ ಮತ್ತು 47 ಮಹಿಳಾ ಅಥ್ಲೀಟ್‌ಗಳು ಬಹುರಾಷ್ಟ್ರೀಯ ಕ್ರೀಡಾ ವೇದಿಕೆಯ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರಯತ್ನಿಸಲಿದ್ದಾರೆ. ಇದೇ ವೇಳೆ ಕರ್ನಾಟಕದ 9 ಕ್ರೀಡಾಪಟುಗಳು ಭಾರತದ ತುಕಡಿಯೊಂದಿಗೆ ತೆರಳಲಿದ್ದಾರೆ.

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕರ್ನಾಟಕದ 9 ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಜೂರು ಮಾಡಿದ್ದಾರೆ.
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಆಗಿರುವ ಡಾ.ಕೆ ಗೋವಿಂದರಾಜು ಅವರು ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನವಾಗಿ ತಲಾ 5 ಲಕ್ಷ ರೂಪಾಯಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, "ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಜ್ಯದ 9 ಮಂದಿ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂಪಾಯಿ ಪ್ರೋತ್ಸಾಹಧನ ಘೋಷಣೆ ಮಾಡುತ್ತಿದ್ದೇನೆ".
"ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕದ ಪರವಾಗಿ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್‌ನಲ್ಲಿ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಫರ್ಧೆಯಲ್ಲಿ ಧಿನಿಧಿ ದೇಸಿಂಗು, ಮಿಕ್ಸೆಡ್ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ, ಟೇಬಲ್ ಟೆನ್ನಿಸ್‌ನಲ್ಲಿ ಅರ್ಚನಾ ಕಾಮತ್, ಪುರುಷರ ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನ್ನಿಸ್ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್‌ನಲ್ಲಿ ನಿಶಾಂತ್ ದೇವ್, ಮಿಕ್ಸೆಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಅವರುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಇದು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ," ಎಂದು ಬರೆದುಕೊಂಡಿದ್ದಾರೆ.
"ರಾಜ್ಯದ ಕ್ರೀಡಾಪಟುಗಳು ಸೇರಿದಂತೆ ಭಾರತದ ಎಲ್ಲಾ ಕ್ರೀಡಾಳುಗಳು ಪ್ಯಾರಿಸ್ ಒಲಿಂಪಿಕ್‌ನಲ್ಲಿ ಅಮೋಘ ಸಾಧನೆಗೈದು ಭಾರತದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಮನದುಂಬಿ ಹಾರೈಸುತ್ತೇನೆ," ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.
ಈ 9 ಕ್ರೀಡಾಪಟುಗಳಿಗೆ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ನಿಂದ ಪ್ರತ್ಯೇಕ ನೆರವು ದೊರೆಯಲಿದೆ ಎಂದು ತಿಳಿಸಿರುವ ಡಾ. ಕೆ ಗೋವಿಂದರಾಜು, ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ದೊರಕಿಸಿಕೊಟ್ಟು ಪ್ರೋತ್ಸಾಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧನ್ಯವಾದ ಸಲ್ಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications